ಸೌಥ್ ಸಿನಿಮಾಗಳ ವಿರುದ್ಧ ಬಾಲಿವುಡ್ ಸೋಲುತ್ತಿರುವುದು ಏಕೆ?
Bollywood: ಕೋವಿಡ್ ಬಳಿಕ ಭಾರತೀಯ ಚಿತ್ರರಂಗದ ಮಾರುಕಟ್ಟೆಯೇ ಬದಲಾಗಿದೆ. ಭಾರತದ ದೊಡ್ಡ ಚಿತ್ರರಂಗ ಎನಿಸಿಕೊಂಡಿದ್ದ ಬಾಲಿವುಡ್, ದಕ್ಷಿಣ ಭಾರತದ ಮುಂದೆ ಮಂಡಿಯೂರಿದೆ. ದಕ್ಷಿಣ ಭಾರತದ ಸಿನಿಮಾಗಳು, ಬಾಲಿವುಡ್ ಸಿನಿಮಾಗಳನ್ನು ಹಿಂದಕ್ಕೆ ತಳ್ಳಿಬಿಟ್ಟಿವೆ.
ಕೆಲ ತಿಂಗಳ ಹಿಂದೆ ದಕ್ಷಿಣ ಭಾರತದ ಯಶಸ್ವಿ ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ (ಅಲ್ಲು ಅರ್ಜುನ್ ತಂದೆ), ಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ಏಕೆ ದಕ್ಷಿಣ ಭಾರತದ ಸಿನಿಮಾಗಳು ಗೆಲ್ಲುತ್ತಿವೆ, ಬಾಲಿವುಡ್ ಸಿನಿಮಾಗಳೂ ಸೋಲುತ್ತಿವೆ’ ಎಂಬ ಪ್ರಶ್ನೆಯನ್ನು ಸಂದರ್ಶಕ, ಅಲ್ಲು ಅರವಿಂದ್ಗೆ ಕೇಳಿದರು. ಅದಕ್ಕೆ ಅಲ್ಲು ಅರವಿಂದ್ ಬಹಳ ಸರಳವಾಗಿ, ‘ಬಾಲಿವುಡ್ನವರು ಮುಂಬೈನ ಒಂದೆರಡು ಏರಿಯಾದವರಿಗಾಗಿ ಮಾತ್ರವೇ ಸಿನಿಮಾ ಮಾಡುತ್ತಿದ್ದಾರೆ’ ಎಂದರು. ಬಹಳ ಸರಳ ಭಾಷೆಯಲ್ಲಿ ಬಾಲಿವುಡ್ನ ದೊಡ್ಡ ಸಮಸ್ಯೆಯನ್ನು ಅಲ್ಲು ಅರವಿಂದ್ ಅಂದು ಬಿಚ್ಚಿಟ್ಟರು.
ಅಲ್ಲು ಅರವಿಂದ್ ಹೇಳಿಕೆಯನ್ನು ಉದಾಹರಣೆ ಮೂಲಕ ಗಮನಿಸುವುದಾದರೆ, ದೀಪಿಕಾ ಪಡಕೋಣೆ ನಟನೆಯ ‘ಗೆಹರಾಹಿಯಾ’ ಸಿನಿಮಾ ತೆಗೆದುಕೊಳ್ಳಿ, ದಾಂಪತ್ಯದಲ್ಲಿ ಅಸಮಾಧಾನ, ಅದಕ್ಕಾಗಿ ಅಕ್ರಮ ಸಂಬಂಧ, ಅದನ್ನು ನಾರ್ಮಲೈಸ್ ಮಾಡುವುದು, ಇದು ಆ ಸಿನಿಮಾದ ವಿಷಯವಸ್ತು, ಭಾರತದ ಬಹುಸಂಖ್ಯಾತ ಜನರಾದ ಮಧ್ಯಮವರ್ಗದವರಿಗೆ ಎಲ್ಲಿಂದೆಲ್ಲಿಗೂ ಕನೆಕ್ಟ್ ಆಗುವಂಥಹದ್ದಲ್ಲ ಆ ಸಿನಿಮಾದ ಕತೆ. ಕರಣ ಜೋಹರ್ ನಿರ್ದೇಶಿಸುವ ಅಥವಾ ನಿರ್ಮಾಣ ಮಾಡುವ ಸಿನಿಮಾಗಳನ್ನು ಗಮನಿಸಿ, ಅವರ ಎಲ್ಲ ಸಿನಿಮಾಗಳ ಕತೆಗಳೂ ಮೇಲ್ವರ್ಗದ ಕತೆಗಳೇ. ಅಲ್ಲಿ ಹೀರೋ ಹೀರೋಯಿನ್ ಇಬ್ಬರೂ ಅತ್ಯಂತ ಶ್ರೀಮಂತ ಮನೆತನದವರು, ಕರಣ್ ಜೋಹರ್ ಸಿನಿಮಾಗಳಲ್ಲಿ ಹೀರೋ ಕಾಲೇಜಿಗೆ ಹೋಗುವುದು ಫೆರಾರಿ ಕಾರಿನಲ್ಲಿ! ಜೀವನಕ್ಕಾಗಿ ದಿನದ ಕೂಲಿ ಮಾಡುವವ, ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುವವ ಆ ಪಾತ್ರಗಳಿಗೆ ಕನೆಕ್ಟ್ ಆಗುವುದಾದರೂ ಹೇಗೆ?
ಅದೇ ನೀವು ಇತ್ತೀಚೆಗೆ ಭಾರಿ ಸದ್ದು ಮಾಡಿದ ದಕ್ಷಿಣ ಭಾರತದ ಯಾವುದಾದರೂ ಸಿನಿಮಾಗಳನ್ನು ತೆಗೆದುಕೊಳ್ಳಿ, ಅಲ್ಲಿ ಹೀರೋ ಸಾಮಾನ್ಯ ಜನರನ್ನು ಪ್ರತಿನಿಧಿಸುವ ವ್ಯಕ್ತಿಯೇ ಆಗಿರುತ್ತಾನೆ. ‘ಕೆಜಿಎಫ್’ನಲ್ಲಿ ರಾಕಿಭಾಯ್ ಗಣಿಯ ಮಾಲೀಕನಾದರೂ ಸಹ, ಅವನು ಚಪ್ಪಲಿ ಹೊಲಿಯುವ ಸ್ಥಾನದಿಂದ ಎದ್ದು ಬಂದು ಅದನ್ನು ಸಾಧಿಸಿರುತ್ತಾನೆ. ‘ಕಾಂತಾರ’ನಲ್ಲಿ ಶಿವ ನಮ್ಮ-ನಿಮ್ಮ ನಡುವಿನ ಸಾಮಾನ್ಯ ವ್ಯಕ್ತಿಯೇ ಆಗಿದ್ದಾನೆ. ‘ಕಲ್ಕಿ’ಯಂಥಹಾ ಭವಿಷ್ಯದ ಕತೆ ಹೊಂದಿರುವ ಸಿನಿಮಾದಲ್ಲಿಯೂ ಸಹ ನಾಯಕ ಪ್ರಭಾಸ್, ಶ್ರೀಮಂತಿಕೆಯ ಕನಸು ಕಾಣುವ ಬಡ ವ್ಯಕ್ತಿ. ಇನ್ನು ಪುಷ್ಪ ಸಿನಿಮಾದ ನಾಯಕನಂತೂ ಎಲ್ಲ ಕೆಳ ಮಧ್ಯಮ ವರ್ಗದ ಸಿಟ್ಟಿನ, ಆಕ್ರೋಶದ, ಛಲದ ಪ್ರತಿನಿಧಿ. ಇದೇ ಕಾರಣಕ್ಕೆ ಭಾರತದಲ್ಲಿ ಬಹುಸಂಖ್ಯಾತರಾಗಿರುವ ಮಾಸ್ ಆಡಿಯೆನ್ಸ್ ಸುಲಭವಾಗಿ ದಕ್ಷಿಣ ಭಾರತದ ಸಿನಿಮಾಗಳಿಗೆ ಕನೆಕ್ಟ್ ಆಗುತ್ತಾರೆ. ‘ಮಂಜುಮೆಲ್ ಬಾಯ್ಸ್’, ‘ಆವೇಶಂ’, ತಮಿಳಿನ ‘ಮಹಾರಾಜ’ ಇವೆಲ್ಲವೂ ಸಾಮಾನ್ಯರ ಸಿನಿಮಾಗಳೇ.
ಇದನ್ನೂ ಓದಿ:ಬಾಲಿವುಡ್ನಲ್ಲಿ ‘ಭಜರಂಗಿ’ ಹರ್ಷ; ಟೈಗರ್ ಶ್ರಾಫ್ ಚಿತ್ರದ ಖಡಕ್ ಪೋಸ್ಟರ್ ರಿಲೀಸ್
ಸೂಕ್ಷ್ಮವಾಗಿ ಗಮನಿಸಿದರೆ ಬಾಲಿವುಡ್ ಯಾವಾಗೆಲ್ಲ ‘ಸಾಮಾನ್ಯ’ರ ಕತೆಯನ್ನು ಸಿನಿಮಾ ಮಾಡಿದೆಯೋ ಆಗೆಲ್ಲ ಬಹುತೇಕ ಗೆಲುವನ್ನೇ ಕಂಡಿದೆ. ಧನುಶ್ ನಟನೆಯ ‘ರಾಂಝಣಾ’ ಬನಾರಸ್ನ ಸಾಮಾನ್ಯ ಯುವಕನ ಕತೆ, ಆ ಸಿನಿಮಾ ಈಗಲೂ ಕಲ್ಟ್. ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸಣ್ಣ ಪಟ್ಟಣದ ಒರಟು ರೌಡಿಗಳ ಕತೆ ಹೊಂದಿದ್ದು, ಆ ಸಿನಿಮಾಗಳು ಸಹ ಕಲ್ಟ್ ಸಿನಿಮಾ ಎನಿಸಿಕೊಂಡಿವೆ. ಇತ್ತೀಚೆಗೆ ಹಿಟ್ ಆದ ಸಿನಿಮಾಗಳನ್ನೇ ಗಮನಿಸುವುದಾದರೆ ‘ಜವಾನ್’ ದಾಖಲೆ ಮುರಿದ ‘ಸ್ತ್ರೀ2’ ಸಣ್ಣ ಪಟ್ಟಣದ ಮೂವರು ಮಧ್ಯಮ ವರ್ಗದ ಯುವಕರ ಕತೆ, ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾದ ‘12th ಫೇಲ್’ ಅಂತೂ ಕನಸು ಬೆನ್ನತ್ತಿ ಹೊರಡುವ ಸಣ್ಣ ಹಳ್ಳಿಯೊಂದರ ಯುವಕನ ಕತೆ. ಆದರೆ ಬಾಲಿವುಡ್ನ ‘ಬಡಾ ಪ್ಲೇಯರ್’ಗಳಿಗೆ ಇವು ಬೇಕಾಗಿಲ್ಲ. ಅವರಿಗೆ ‘ಅವರ ರೀತಿಯ’ ಸಿನಿಮಾಗಳೇ ಬೇಕು. ಹೀಗಾಗಿಯೇ ಅವರ ಸಿನಿಮಾಗಳು, ದಕ್ಷಿಣದ ಸಿನಿಮಾಗಳ ಎದುರು ಸೋಲುತ್ತಿವೆ.
ಕೋವಿಡ್ ತಂದ ಬದಲಾವಣೆ
ಕೋವಿಡ್ ಬಳಿಕ ಒಟ್ಟಾರೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಂಟೆಂಟ್ ದೃಷ್ಟಿಯಿಂದ, ಮಾರುಕಟ್ಟೆ ದೃಷ್ಟಿಯಿಂದ ಮತ್ತು ಪ್ರೇಕ್ಷಕ ಸಹ ಸಾಕಷ್ಟು ಬದಲಾಗಿದ್ದಾನೆ. ಕೋವಿಡ್ ಸಮಯದಲ್ಲಿ ಭಾರತದ ಪ್ರೇಕ್ಷಕ ದೇಶದ ಹಾಗೂ ವಿದೇಶದ ಅತ್ಯುತ್ತಮ ಸಿನಿಮಾ, ವೆಬ್ ಸರಣಿಗಳಿಗೆ ಪರಿಚಿತಗೊಂಡಿದ್ದಾನೆ. ಸಿನಿಮಾ ಒಂದರಲ್ಲಿ ಏನನ್ನು ಮೆಚ್ಚಬೇಕು, ಯಾವುದನ್ನು ಮೆಚ್ಚಬಾರದು ಎಂಬ ಸೂಕ್ಷ್ಮ ಆತನಿಗೆ ಮೊದಲಿಗಿಂತಲೂ ಹೆಚ್ಚು ಈಗ ಗೊತ್ತಾಗಿದೆ. ಈಗ ಉತ್ತಮ, ಅತ್ಯುತ್ತಮ ಅಲ್ಲದ ಯಾವುದನ್ನೂ ಪ್ರೇಕ್ಷಕ ಒಪ್ಪುವ ಸ್ಥಿತಿಯಲ್ಲಿಲ್ಲ. ನಾಲ್ಕು ಫೈಟ್, ಐದು ಹಾಡು, ಒಂದು ಐಟಂ ಹಾಡಿನ ಕತೆಗಳನ್ನು ಪ್ರೇಕ್ಷಕ ಈಗ ಕಣ್ಣೆತ್ತಿಯೂ ನೋಡುವುದಿಲ್ಲ. ಆದರೆ ಬಾಲಿವುಡ್ ಈಗಲೂ ತನ್ನ ಹಳೆಯ ಸಿನಿಮಾ ಸೂತ್ರಗಳ ಮೇಲೆಯೇ ನಿರ್ಭರವಾಗಿದೆ. ರೋಹಿತ್ ಶೆಟ್ಟಿ ಅಂಥಹಾ ಬಾಲಿವುಡ್ ನಿರ್ದೇಶಕರು ಇಂದಿಗೂ ಆಕ್ಷನ್ ಅಥವಾ ಕಾಮಿಡಿ ಸೂತ್ರಗಳನ್ನು ಪಾಲಿಸಿ ಕತೆ ಹೆಣೆಯುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ನಿರ್ದೇಶನದ ‘ಸರ್ಕಸ್’ ಸಿನಿಮಾ ಇನ್ನಿಲ್ಲದಂತೆ ಹೀನಾಯವಾಗಿ ಸೋತಿತು.
ಇಂದಿನ ಸಿನಿಮಾ ಪ್ರೇಕ್ಷಕ ಐದು ವರ್ಷದ ಹಿಂದಿನ ಪ್ರೇಕ್ಷಕನಿಗಿಂತಲೂ ಅತ್ಯಂತ ಬುದ್ಧಿವಂತ, ಆತನ ಕೈಯಲ್ಲಿ ತಂತ್ರಜ್ಞಾನವಿದೆ. ಎಷ್ಟೋ ಸಿನಿಮಾ ಮಂದಿಗಿಂತಲೂ ಸುಲಲಿತವಾಗಿ ಅವರು ಸುಲಲಿತವಾಗಿ ತಂತ್ರಜ್ಞಾನ ಬಳಸಬಲ್ಲರು, ವಿಶ್ವದ ಅತ್ಯುತ್ತಮ ಕಂಟೆಂಟ್ ಅನ್ನು ಮೊಬೈಲ್ನಲ್ಲಿಯೇ ಮನೆಯಲ್ಲಿ ಆರಾಮವಾಗಿ ಕುಳಿತು ವೀಕ್ಷಿಸಬಲ್ಲರು ಅದೂ ಹೆಚ್ಚಿನ ಹಣ ಖರ್ಚು ಮಾಡದೆ. ಹೀಗಿರುವಾಗ, ಬಾಲಿವುಡ್ನವರು ಅಥವಾ ಯಾವುದೇ ಚಿತ್ರರಂಗದವರು ನಾವು ಅದೇ ಹಳೆಯ ಸೂತ್ರಗಳಿಗೆ ಜೋತುಬಿದ್ದು, ನಾಯಕನ ವೈಭವೀಕರಣ ಮಾಡುವ, ನಾಯಕಿಯನ್ನು ಗ್ಲಾಮರಸ್ ಆಗಿ ಬಿಕಿನಿಯಲ್ಲಿ ತೋರಿಸುತ್ತಾ ಸಿನಿಮಾ ಮಾಡುತ್ತೇವೆ ಎಂದರೆ ಅದು ಆಗದು. ಬಾಲಿವುಡ್ ಈಗಲಾದರೂ ಬದಲಾಗಲೇ ಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ