ತಮ್ಮ ಮೇಲಿನ ಆರೋಪಗಳ ಒಪ್ಪಿಕೊಂಡ ನಿರ್ದೇಶಕ ಅಟ್ಲಿ
Atlee: ತಮಿಳಿನ ನಿರ್ದೇಶಕ ಅಟ್ಲಿ ಬಗ್ಗೆ ತಮಿಳುನಾಡಿನ ಸಿನಿಮಾ ಪ್ರೇಕ್ಷಕರಲ್ಲೇ ಸಾಕಷ್ಟು ಅಸಮಾಧಾನವಿದೆ. ಹಿಟ್ ಸಿನಿಮಾಗಳ ದೃಶ್ಯಗಳನ್ನು ಕಾಪಿ ಮಾಡುತ್ತಾರೆ, ಲಾಜಿಕ್ ಇಲ್ಲದ ಮಾಸ್ ಸಿನಿಮಾಗಳ ಮಾಡುತ್ತಾರೆ ಎಂದು. ಆರೋಪಗಳಿಗೆ ಅಟ್ಲಿ ಪ್ರತಿಕ್ರಿಯಿಸಿದ್ದಾರೆ.

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಶಾರುಖ್ ಖಾನ್, ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದಾಗ ಹಲವು ತಮಿಳು ಸಿನಿಮಾ ಪ್ರೇಕ್ಷಕರೇ ಕುಹುಕವಾಡಿದ್ದರು. ಅಟ್ಲಿ, ತಮಿಳಿನ ಹಿಟ್ ನಿರ್ದೇಶಕರಲ್ಲಿ ಒಬ್ಬರಾದರೂ ಅತ್ಯುತ್ತಮ ನಿರ್ದೇಶಕರೇನೂ ಅಲ್ಲ. ಅಲ್ಲದೆ ಅದೇ ಹಳೆ ಕಮರ್ಷಿಯಲ್ ಮಾದರಿಯ ಸಿನಿಮಾಗಳನ್ನೇ ಅಟ್ಲಿ ಮಾಡುತ್ತಾರೆ, ಹೊಸತನ ಇರುವುದಿಲ್ಲ ಅಲ್ಲದೆ ಈಗಾಗಲೇ ಜನಪ್ರಿಯವಾಗಿರುವ ಸಿನಿಮಾಗಳ ಸೀನ್ಗಳನ್ನು ಕದ್ದು ಸಿನಿಮಾ ಮಾಡುತ್ತಾರೆ ಎಂಬ ಆರೋಪ ಅಟ್ಲಿ ಮೇಲಿತ್ತು. ಈಗಲೂ ಇದೆ.
ಬೇರೆ ಹಿಟ್ ಸಿನಿಮಾಗಳ ಸೀನ್ ಕದ್ದು ಸಿನಿಮಾ ಮಾಡುವ ನಿರ್ದೇಶಕ ಎಂದೇ ಅಟ್ಲಿಯನ್ನು ತಮಿಳಿನ ಬಹುತೇಕ ಸಿನಿ ಪ್ರೇಕ್ಷಕರು ಗೇಲಿ ಮಾಡುತ್ತಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ತಮ್ಮ ಮೇಲಿರುವ ಆರೋಪಗಳ ಬಗ್ಗೆ ಅಟ್ಲಿ ಮಾತನಾಡಿದ್ದಾರೆ. ”ನನ್ನ ಸಿನಿಮಾಗಳಲ್ಲಿ ಬ್ಯಾಕ್ ಸ್ಟೋರಿ ಇರುತ್ತದೆ, ಬಹುತೇಕ ಬ್ಯಾಕ್ ಸ್ಟೋರಿ ಒಂದೇ ರೀತಿ ಇರುತ್ತದೆ ಎಂದು ಹಲವು ವಿಮರ್ಶೆ ಮಾಡುತ್ತಾರೆ. ಅದು ಒಂದಕ್ಕ ನಿಜವೂ ಹೌದು” ಎಂದಿದ್ದಾರೆ.
ಇದಕ್ಕೆ ಕಾರಣ ನೀಡಿರುವ ಅಟ್ಲಿ, ”ನಾನು ಕಮರ್ಷಿಯಲ್ ಸಿನಿಮಾಗಳನ್ನು ಮಾಡುವವ. ನಾನು ಮಾಸ್ ಎಲಿಮೆಂಟ್ಗಳು, ಹೀರೋಯಿಕ್ ದೃಶ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ನನ್ನ ಸಿನಿಮಾಗಳು ಎಂಟರ್ಟೇನಿಂಗ್ ಆಗಿರುವಂತೆ ನೋಡಿಕೊಳ್ಳುತ್ತೇನೆ. ಹಾಗಾಗಿ ನಾನು ಪದೇ ಪದೇ ಕಮರ್ಶಿಯಲ್ ಅಂಶಗಳು, ಮಾಸ್ ಅಂಶಗಳು ಹೆಚ್ಚಿರುವ ಸೀನ್ಗಳು, ಚಿತ್ರಕತೆಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಹಾಗಾಗಿ ಕೆಲವರಿಗೆ ಹಾಗನ್ನಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ:15 ದಿನ ಅಬ್ಬರಿಸಿದ ‘ಜವಾನ್’ ಚಿತ್ರ ಗಳಿಸಿದ್ದೆಷ್ಟು? ‘ಪಠಾಣ್’ ದಾಖಲೆ ಮುರಿಯಲು ಇನ್ನೆಷ್ಟು ಬಾಕಿ?
ತಮ್ಮ ಸಮಕಾಲೀನ ನಿರ್ದೇಶಕರೊಟ್ಟಿಗೆ ತಮ್ಮನ್ನು ಹೋಲಿಕೆ ಮಾಡಿಕೊಂಡಿರುವ ಅಟ್ಲಿ, ”ಪಾ ರಂಜಿತ್, ಲೋಕೇಶ್ ಕನಗರಾಜನ್, ಕಾರ್ತಿಕ್ ಸುಬ್ಬರಾಜು ಅವರುಗಳಿಗಿಂತಲೂ ನಾನು ಭಿನ್ನ. ಏಕೆಂದರೆ ಇವರುಗಳಲ್ಲಿ ಸಂಪೂರ್ಣವಾಗಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಿರುವವನು, ಮನರಂಜನಾತ್ಮಕ ಸಿನಿಮಾಗಳನ್ನು ಮಾಡುತ್ತಿರುವುದು ನಾನು ಮಾತ್ರ. ಅವರು ನನ್ನ ಗೆಳೆಯರು ಅವರು ಅವರದ್ದೇ ಆದ ನಂಬಿಕೆ, ವಿಧಾನದಲ್ಲಿ ಸಿನಿಮಾ ಮಾಡುತ್ತಿದ್ದಾರೆ” ಎಂದಿದ್ದಾರೆ ಅಟ್ಲಿ.
ಅಟ್ಲಿ ‘ರಾಜಾ ರಾಣಿ’ ಸಿನಿಮಾ ಮೂಲಕ ದೊಡ್ಡ ಹೆಸರು ಮಾಡಿದರು. ಆ ಸಿನಿಮಾ ಸಹ ಅದ್ಭುತವಾಗಿತ್ತು, ವಿಮರ್ಶಕರಿಂದ ಬಹಳ ಮೆಚ್ಚುಗೆ ಗಳಿಸಿತ್ತು. ಅದಾದ ಬಳಿಕ ಹೀರೋಯಿಸಂ, ಮಾಸ್ ಸಿನಿಮಾಗಳನ್ನೇ ಅಟ್ಲಿ ಮಾಡುತ್ತಾ ಬಂದಿದ್ದಾರೆ. ವಿಜಯ್ ಜೊತೆಗೆ ‘ತೇರಿ’, ‘ಮರ್ಸೆಲ್’, ‘ಬಿಗಿಲ್’ ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಶಾರುಖ್ ಖಾನ್ ಜೊತೆಗೆ ‘ಜವಾನ್’ ಮಾಡಿದ್ದು ಅದೂ ಸಹ ಸೂಪರ್ ಹಿಟ್ ಆಗಿದೆ. ಇದೀಗ ಸಲ್ಮಾನ್ ಖಾನ್ ಹಾಗೂ ರಣ್ಬೀರ್ ಅವರುಗಳೊಟ್ಟಿಗೆ ಸಿನಿಮಾ ಮಾಡುವ ಉತ್ಸಾಹ ಪ್ರದರ್ಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




