AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ
KD The Devil Review
ಕೆಡಿ: ದಿ ಡೆವಿಲ್
A
  • Time - 141 Minutes
  • Released - April 30, 2026
  • Language - Kannada
  • Genre - Action, Drama, Period, Thriller
Cast - ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ರಮೇಶ್ ಅರವಿಂದ್​, ರವಿಚಂದ್ರನ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು.
Director - ಜೋಗಿ ಪ್ರೇಮ್
3.5
Critic's Rating
ಮದನ್​ ಕುಮಾರ್​
|

Updated on: Apr 30, 2026 | 3:36 PM

Share

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಕೆಡಿ’ ಸಿನಿಮಾ (KD Movie) ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಮಾಸ್ ಸಿನಿಮಾ ಆದ್ದರಿಂದ ಬಿಡುಗಡೆಗೂ ಮುನ್ನವೇ ಒಂದು ಹೈಪ್ ಸೃಷ್ಟಿ ಆಗಿತ್ತು. ಪಾತ್ರವರ್ಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರುವುದರಿಂದ ಸಹಜವಾಗಿಯೇ ಸ್ಟಾರ್ ಮೆರುಗು ಹೆಚ್ಚಿತ್ತು. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾ ಆದ್ದರಿಂದ ಅದ್ದೂರಿತನಕ್ಕೆ ಕೊರತೆ ಇಲ್ಲ ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇತ್ತು. ಹಾಗಾದರೆ, ಅಂದುಕೊಂಡಂತೆಯೇ ‘ಕೆಡಿ’ ಸಿನಿಮಾ ಮೂಡಿಬಂದಿದೆಯಾ? ಈ ವಿಮರ್ಶೆ ಓದಿ..

ನಿರ್ದೇಶಕ ಪ್ರೇಮ್ ಅವರು ಭೂಗತ ಜಗತ್ತು ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಸೇರಿಸಿ ಕಥೆ ಹೆಣೆದರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಈಗ ಅವರು ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲೂ ಅದನ್ನೇ ಮಾಡಿದ್ದಾರೆ. ರೆಟ್ರೋ ಕಾಲದ ಒಂದು ಮಾಸ್ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಅದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುವಂತಹ ಎಮೋಷನಲ್ ಕಥೆಯನ್ನು ಬೆರೆಸಿದ್ದಾರೆ. ಕಥೆ ಹೀಗಿರುವುದರಿಂದ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನ ಆಗಿದೆ.

1975ರ ಕಾಲಘಟ್ಟದಲ್ಲಿ ‘ಕೆಡಿ’ ಸಿನಿಮಾದ ಕಥೆ ನಡೆಯುತ್ತದೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ. ಮನಸ್ಸಿನಲ್ಲಿ ಕಲ್ಮಶವೇ ಇಲ್ಲದ ಆತ ಯಾರ ಮೇಲೂ ಕೈ ಎತ್ತಲ್ಲ. ಆದರೆ ಒಂದು ದಿನ ಅತಿ ಭಯಾನಕವಾದ ರಾಕ್ಷಸನ ರೂಪದಲ್ಲಿ ಭೂಗತ ಲೋಕಕ್ಕೆ ಎಂಟ್ರಿ ನೀಡುತ್ತಾನೆ. ಆ ರೀತಿ ಬದಲಾವಣೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಕೆಡಿ’ ಸಿನಿಮಾವನ್ನು ಸಿಕ್ಕಾಪಟ್ಟೆ ಅದ್ದೂರಿಯಾಗಿ ಸಿದ್ಧಪಡಿಸಲಾಗಿದೆ. ಬೃಹತ್ ಸೆಟ್​ಗಳಲ್ಲಿಯೇ ಬಹುತೇಕ ಸನ್ನಿವೇಶಗಳ ಶೂಟಿಂಗ್ ನಡೆದಿದೆ. ಕಾಳಿ ಕಥಾನಾಯಕ ಆಗಿದ್ದರೂ ಆತನ ಸುತ್ತಮುತ್ತ ಇರುವ ಎಲ್ಲ ಪಾತ್ರಗಳು ಕೂಡ ಅಷ್ಟೇ ಮಹತ್ವ ಹೊಂದಿವೆ. ಹಾಗಾಗಿ ಎಲ್ಲ ಪಾತ್ರಗಳ ಪರಿಚಯ ಮಾಡಿಕೊಡಲು ಮೊದಲಾರ್ಧದಲ್ಲಿ ಹೆಚ್ಚು ಸಮಯ ಹಿಡಿದಿದೆ. ಹಾಗಾಗಿ ಕಥೆ ವೇಗ ಪಡೆದುಕೊಳ್ಳಲು ಕೊಂಚ ವಿಳಂಬ ಆಯ್ತು ಎನಿಸುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಸಿನಿಮಾ ವೇಗವಾಗಿ ಸಾಗುತ್ತದೆ.

ಧ್ರುವ ಸರ್ಜಾ ಅವರ ಮ್ಯಾನರಿಸಂ ಇಷ್ಟಪಡುವ ಅಭಿಮಾನಿ ವರ್ಗ ಇದೆ. ಅಂಥ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಮನರಂಜನೆ ನೀಡುತ್ತದೆ. ಧ್ರುವ ಅವರ ಎಂಟ್ರಿ ಸಾಮಾನ್ಯವಾಗಿದೆ. ಆದರೆ ಕಥೆ ಮುಂದುವರಿದಂತೆಲ್ಲ ಆ ಪಾತ್ರ ಹೆಚ್ಚು ರಗಡ್ ಆಗುತ್ತದೆ. ಕೈಯಲ್ಲಿ ಮಚ್ಚು ಹಿಡಿದ ಬಳಿಕ ಆ್ಯಕ್ಷನ್ ಮೂಲಕ ಅವರು ಅಬ್ಬರಿಸುತ್ತಾರೆ. ಹೀರೋ ಧ್ರುವ ಸರ್ಜಾ ಮತ್ತು ವಿಲನ್ ಸಂಜಯ್ ದತ್ ನಡುವಿನ ಮುಖಾಮುಖಿಯಿಂದಾಗಿ ಚಿತ್ರದಲ್ಲಿ ಮಾಸ್ ಅಂಶ ಹೆಚ್ಚಿದೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಎರಡು ಶೇಡ್​​ನಲ್ಲಿ ನೋಡಬಹುದು. ಒಂದು ಶೇಡ್​ನಲ್ಲಿ ಮುಗ್ಧನಾಗಿ ನಗಿಸುತ್ತಾರೆ. ಇನ್ನೊಂದು ಶೇಡ್​​ನಲ್ಲಿ ರಕ್ತದೋಕುಳಿ ಹರಿಸುತ್ತಾರೆ. ಅವರಿಗೆ ನಟಿ ರೀಷ್ಮಾ ನಾಣಯ್ಯ ಜೋಡಿ ಆಗಿದ್ದಾರೆ. ನಾಯಕಿಯ ಪಾತ್ರ ಆರಂಭದಲ್ಲಿ ಸ್ವಲ್ಪ ಅಸಹಜ ಎನಿಸುತ್ತದೆ. ಕಥೆ ಎಮೋಷನಲ್ ತಿರುವು ಪಡೆದುಕೊಂಡಾಗ ರೀಷ್ಮಾ ಅವರು ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ.

ಇದನ್ನೂ ಓದಿ: ‘ಕೆಡಿ ಬ್ಲಾಕ್​​ಬಸ್ಟರ್​’; ಪ್ರೇಮ್ ನಿರ್ದೇಶನಕ್ಕೆ ಮೆಚ್ಚುಗೆ, ಕಿಚ್ಚನ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ

ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಯಶ್ ಶೆಟ್ಟಿ ಮುಂತಾದವರು ನಿಭಾಯಿಸಿರುವ ಪಾತ್ರಗಳು ಕೂಡ ಹೆಚ್ಚು ಹೈಲೈಟ್ ಆಗಿವೆ. ಅಂದಹಾಗೆ, ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿರುವುದು ಅರ್ಧ ಕಥೆ ಮಾತ್ರ! ಹೌದು, ಕಾಳಿದಾಸನ ಕಥೆ ಇನ್ನೂ ಮುಂದುವರಿಯಲಿದೆ. ಸದ್ಯಕ್ಕೆ ಕಾಲ ಭೈರವನ (ಕಿಚ್ಚ ಸುದೀಪ್) ಎಂಟ್ರಿಯೊಂದಿಗೆ ಮೊದಲ ಪಾರ್ಟ್ ಮುಗಿದಿದೆ. ಮುಂದಿನದ್ದನ್ನು ‘ಕೆಡಿ 2’ ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂಬುದನ್ನು ಕ್ಲೈಮ್ಯಾಕ್ಸ್​​ನಲ್ಲಿ ತಿಳಿಸಲಾಗಿದೆ. ಜೊತೆಗೆ ಒಂದು ಟ್ವಿಸ್ಟ್ ಕೂಡ ಇದೆ.

ಅದ್ದೂರಿಯಾಗಿ ಸಿನಿಮಾವನ್ನು ಕಟ್ಟಿಕೊಡುವಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಹಿಂದೆ ಬಿದ್ದಿಲ್ಲ. 1975ರ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲು ಲೆಕ್ಕವಿಲ್ಲದಷ್ಟು ಸೆಟ್​ಗಳನ್ನು ಹಾಕಿ, ಲೆಕ್ಕವಿಲ್ಲದಷ್ಟು ಪ್ರಾಪರ್ಟಿಗಳನ್ನು ಬಳಸಲಾಗಿದೆ. ಹಾಡುಗಳು ಸಹ ಶ್ರೀಮಂತಿಕೆಯಿಂದ ಕೂಡಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಮುಂತಾದ ತಂತ್ರಜ್ಞರ ಕೆಲಸ ಪ್ರತಿ ಫ್ರೇಮ್​​ನಲ್ಲೂ ಎದ್ದು ಕಾಣಿಸುತ್ತದೆ. ನೋರಾ ಫತೇಹಿ ನರ್ತಿಸಿದ್ದ ವಿವಾದಾತ್ಮಕ ಸಾಹಿತ್ಯದ ಹಾಡನ್ನು ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us