‘ಹಿಂಗೆ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’: ಸುದೀಪ್ ಹೇಳಿದ್ದು ಯಾರ ಬಗ್ಗೆ?
Kichcha Sudeep: ಬಿಗ್ ಬಾಸ್ಗೆ ಹೋಗುವುದಕ್ಕೂ ಮುನ್ನ ಆರ್ಯವರ್ಧನ್ ಅವರು ಸಂಖ್ಯಾಶಾಸ್ತ್ರ ಹೇಳುವ ಮೂಲಕ ಫೇಮಸ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ಟ್ರೋಲ್ ಆಗಿದ್ದೂ ಉಂಟು.
ಚಿತ್ರರಂಗದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ಅನುಭವ ಅಪಾರ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಎಲ್ಲ ನಿಭಾಗಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ತಿಳಿದಿದೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಪರಭಾಷೆಯ ಚಿತ್ರರಂಗದಲ್ಲೂ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು, ಕಿರುತೆರೆ ಲೋಕದ ಜೊತೆಗೂ ಅವರ ನಂಟು ಚೆನ್ನಾಗಿದೆ. ‘ಬಿಗ್ ಬಾಸ್’ (Bigg Boss) ಕಾರ್ಯಕ್ರಮವನ್ನು 8 ಸೀಸನ್ಗಳಿಂದ ಅವರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್ ಕೂಡ ಅವರ ನಿರೂಪಣೆಯಲ್ಲಿ ಮೂಡಿಬಂದಿದೆ. ಶುಕ್ರವಾರ (ಸೆ.16) ಇದರ ಫಿನಾಲೆ ನಡೆದಿದೆ. ಈ ವೇಳೆ ಅವರು, ‘ಈ ಥರ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ಉತ್ತರ..
ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ಜಶ್ವಂತ್ ಬೋಪಣ್ಣ ಅವರು ಫಿನಾಲೆ ವಾರದವರೆಗೂ ಬಂದಿರು. ಇವರೆಲ್ಲರ ಪೈಕಿ ಹೆಚ್ಚು ಕಾಮಿಡಿ ಕಚಗುಳಿ ಇಟ್ಟವರು ಆರ್ಯವರ್ಧನ್ ಗುರೂಜಿ. ಅವರನ್ನು ಕಲಾವಿದ ಎಂದು ಸೋಮಣ್ಣ ಬಣ್ಣಿಸಿದರು. ಆ ಮಾತಿಗೆ ಸುದೀಪ್ ಕೂಡ ಧ್ವನಿಗೂಡಿಸಿದರು.
‘ಒಂದು ವೇಳೆ ನಾವು ಮಾಡಿದ ಸಿನಿಮಾಗಳನ್ನು ಆರ್ಯವರ್ಧನ್ ಮಾಡಿದ್ದರೆ ಅವರು ಎಲ್ಲೋ ಹೋಗಿರುತ್ತಿದ್ದರು. ಅವರೇನಾದರೂ ಸಿನಿಮಾದಲ್ಲಿ ನಟಿಸಿದರೆ ಸಂಖ್ಯಾಶಾಸ್ತ್ರದ ಪ್ರಕಾರವೇ ಎಲ್ಲವನ್ನೂ ಆಯ್ಕೆ ಮಾಡುತ್ತಾರೆ. ಸಿನಿಮಾ ಹೆಸರಿನ ಅಕ್ಷರ ಎಷ್ಟು ಇರಬೇಕು? ಕಲಾವಿದರ ಡ್ರೆಸ್ ಬಣ್ಣ ಯಾವುದು ಇರಬೇಕು? ಯಾವ ಬಣ್ಣದಲ್ಲಿ ಸೆಟ್ ಹಾಕಬೇಕು? ಯಾವ ದಿನಾಂಕದಲ್ಲಿ ಶೂಟಿಂಗ್ ಶುರು ಮಾಡಬೇಕು ಅಂತ ಹೇಳಬಹುದು. ಹಿಂಗೆಲ್ಲ ಸಿನಿಮಾ ಮಾಡಿದರೆ ನಿರ್ಮಾಪಕರು ಅರ್ಧಕ್ಕೆ ನೇಣು ಹಾಕಿಕೊಳ್ಳಬೇಕಾಗತ್ತೆ’ ಎಂದು ಸುದೀಪ್ ಹೇಳಿದರು.
ಬಿಗ್ ಬಾಸ್ಗೆ ಹೋಗುವುದಕ್ಕೂ ಮುನ್ನ ಆರ್ಯವರ್ಧನ್ ಅವರು ಸಂಖ್ಯಾಶಾಸ್ತ್ರ ಹೇಳುವ ಮೂಲಕ ಫೇಮಸ್ ಆಗಿದ್ದರು. ಅವರು ಹೇಳಿದ ಅನೇಕ ಸಂಗತಿಗಳು ನಿಜ ಆಗಿಲ್ಲ ಎಂಬ ಕಾರಣಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಮಾಡಲಾಗಿತ್ತು. ‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮಕ್ಕೆ ಕಾಲಿಟ್ಟ ಬಳಿಕ ಆರ್ಯವರ್ಧನ್ ಅವರ ಜನಪ್ರಿಯತೆ ಹೆಚ್ಚಿತು. ಅವರ ವ್ಯಕ್ತಿತ್ವ ಏನು ಎಂಬುದನ್ನು ವೀಕ್ಷಕರು ಈಗ ಹತ್ತಿರದಿಂದ ಕಂಡಿದ್ದಾರೆ. ತಮ್ಮ ಬದುಕಿನ ಅನೇಕ ಸಂಗತಿಗಳ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Sat, 17 September 22