ಇದಲ್ಲವೇ ಕ್ರೇಜ್, ಪವನ್ ಹೇಳಿದ ಒಂದು ಮಾತು, ಈಗ ಸಿನಿಮಾ ಟೈಟಲ್
Pawan Kalyan: ಟಾಲಿವುಡ್ನಲ್ಲಿ ಪವನ್ ಕಲ್ಯಾಣ್ ಕ್ರೇಜ್ ಸಾಮಾನ್ಯದ್ದಲ್ಲ. ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ಇತ್ತೀಚೆಗೆ ಕಾರ್ಗೊ ಶಿಪ್ ಒಂದರ ಮೇಲೆ ರೇಡ್ ಮಾಡಿದ್ದರು, ಆ ವಿಡಿಯೋ ವೈರಲ್ ಆಗಿತ್ತು. ವಿಡಿಯೋನಲ್ಲಿ ಪವನ್ ಕಲ್ಯಾಣ್ ಹೇಳಿದ ಮಾತೊಂದು ಈಗ ಸಿನಿಮಾ ಟೈಟಲ್ ಆಗಿ ರಿಜಿಸ್ಟರ್ ಆಗಿದೆ.
ಕೆಲ ವಾರಗಳ ಹಿಂದೆ ತೆಲುಗು ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ಮಾಪಕ ಸುರೇಶ್ ಅವರು ಸಂದರ್ಶನವೊಂದರಲ್ಲಿ ತೆಲುಗಿನ ಅತಿ ದೊಡ್ಡ ನಾಯಕ ನಟ ಯಾರು ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಾ, ಪವನ್ ಕಲ್ಯಾಣ್ ಹೆಸರು ಹೇಳಿದರು. ಅದು ಯಾಕೆಂದು ಉದಾಹರಣೆ ಸಹಿತ ವಿವರಿಸಿದ್ದರು. ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್ಟಿಆರ್ ಅವರುಗಳು ಸಹ ಭಾರಿ ದೊಡ್ಡ ನಟರು, ಆದರೆ ಅವರ ಸಿನಿಮಾ ‘ದೊಡ್ಡ ಸಿನಿಮಾ’ ಆಗಬೇಕೆಂದರೆ ಭಾರಿ ಬಜೆಟ್ ಇರಬೇಕು, ದೊಡ್ಡ ನಿರ್ದೇಶಕ ಇರಬೇಕು, ಆದರೆ ಪವನ್ ಕಲ್ಯಾಣ್ ಯಾವುದೇ ನಿರ್ದೇಶಕನ ಜೊತೆ, ಸಣ್ಣ ಬಜೆಟ್ನ ಅಥವಾ ರೀಮೇಕ್ ಸಿನಿಮಾ ಮಾಡಿದರೂ ಸಹ ಥಿಯೇಟರ್ ತುಂಬಿಸಬಲ್ಲರು ಹಾಗಾಗಿ ಅವರು ತೆಲುಗು ಚಿತ್ರರಂಗದ ದೊಡ್ಡ ನಟ ಎಂದಿದ್ದರು.
ಸುರೇಶ್ ಅವರ ಮಾತು ನಿಜವೂ ಹೌದು, ಟಾಲಿವುಡ್ನಲ್ಲಿ ಪವನ್ ಕಲ್ಯಾಣ್ ಅವರಿಗೆ ಇರುವ ಕ್ರೇಜ್ ಇನ್ಯಾವ ನಟರಿಗೂ ಇಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗಷ್ಟೆ ಪವನ್ ಕಲ್ಯಾಣ್ರ ವಿಡಿಯೋ ಒಂದು ವೈರಲ್ ಆಗಿತ್ತು, ಆಂಧ್ರ ಪ್ರದೇಶದ ಡಿಸಿಎಂ, ರೆವೆನ್ಯೂ ಮಿನಿಸ್ಟರ್ ಸಹ ಆಗಿರುವ ಪವನ್ ಕಲ್ಯಾಣ್ ಬೋಟ್ ಒಂದರಲ್ಲಿ ಹೋಗಿ, ನಿಯಮಬಾಹಿರವಾಗಿ ಅಕ್ಕಿಯನ್ನು ಕದಿಯುತ್ತಿದ್ದ ತಂಡವೊಂದನ್ನು ಹಿಡಿದಿದ್ದರು. ಸರಕು ತುಂಬಿದ ದೊಡ್ಡ ಶಿಪ್ ಮೇಲೆ ಅಧಿಕಾರಿಗಳ ತಂಡದೊಂದಿಗೆ ದಾಳಿ ಮಾಡಿದ್ದ ಪವನ್ ಕಲ್ಯಾಣ್, ಶಿಪ್ನ ಅಧಿಕಾರಿಗಳು ಇನ್ನಿತರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೊನೆಗೆ ರೋಸಿಹೋಗಿ ಸಿಟ್ಟಿನಿಂದ ‘ಸೀಜ್ ದಿ ಶಿಪ್’ ಎಂದು ಅಬ್ಬರಿಸಿದ್ದರು.
ಇದನ್ನೂ ಓದಿ:ಸಿನಿಮಾ ಶೂಟಿಂಗ್ಗೆ ಬರಲು ಎರಡು ಷರತ್ತು ಹಾಕಿದ ಪವನ್ ಕಲ್ಯಾಣ್
ಪವನ್ರ ಆ ವಿಡಿಯೋ ಭಾರಿ ವೈರಲ್ ಆಗಿತ್ತು. ವಿಡಿಯೋನಲ್ಲಿ ‘ಸೀಜ್ ದಿ ಶಿಫ್’ ಎಂದು ಪವನ್ ಕಲ್ಯಾಣ್ ಅಬ್ಬರಿಸಿದ್ದು ಅವರ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿತ್ತು. ಇದೀಗ ‘ಸೀಜ್ ದಿ ಶಿಫ್’ ಎಂಬ ಹೆಸರನ್ನು ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಟೈಟಲ್ ರಿಜಿಸ್ಟರ್ ಮಾಡಿಸಿಬಿಟ್ಟಿದ್ದಾರೆ. ಆರ್ ಫಿಲಮ್ ಫ್ಯಾಕ್ಟರಿ ಹೆಸರಿನ ನಿರ್ಮಾಣ ಸಂಸ್ಥೆ ಇದೀಗ ‘ಸೀಜ್ ದಿ ಶಿಫ್’ ಹೆಸರಿನ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಪವನ್ ಕಲ್ಯಾಣ್ ಸ್ಟೆಲ್ಲಾ ಕಾರ್ಗೊ ಶಿಫ್ ಅನ್ನು ಸೀಜ್ ಮಾಡಲು ಹೋಗುತ್ತಿರುವ ಚಿತ್ರದ ಮೇಲೆ ‘ಸೀಜ್ ದಿ ಶಿಪ್: ಐ ಡೋಂಟ್ ಕೇರ್’ ಎಂಬ ಹೆಸರು ಹಾಕಿದ ಪೋಸ್ಟರ್ ಸಹ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಪವನ್ ಕಲ್ಯಾಣ್, ರಾಜಕೀಯದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಮುಂಚೆ ಪವನ್ ಕಲ್ಯಾಣ್ ಕೈಯಲ್ಲಿ ನಾಲ್ಕು ಸಿನಿಮಾಗಳಿದ್ದವು. ಎಲ್ಲವೂ ಈಗ ಹಾಗೆಯೇ ನಿಂತು ಹೋಗಿವೆ. ‘ಹರಿ ಹರ ವೀರ ಮಲ್ಲು’, ‘ಭಗತ್ ಸಿಂಗ್’, ‘ಓಜಿ’ ಹಾಗೂ ಹೆಸರಿಡದ ಇನ್ನೊಂದು ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದರು. ಈ ಸಿನಿಮಾಗಳು ಈಗ ನಿಂತು ಹೋಗಿದ್ದು, ಇತ್ತೀಚೆಗೆ ಹರಿದಾಡಿದ ಸುದ್ದಿಗಳ ಪ್ರಕಾರ ಪವನ್ ಕಲ್ಯಾಣ್ ಸಿನಿಮಾ ಶೂಟಿಂಗ್ ಅನ್ನು ಪ್ರಾರಂಭಿಸುತ್ತಿದ್ದಾರೆ. ದಿನಕ್ಕೆ ಮೂರು ಗಂಟೆಯಂತೆ ಅವರು ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ