‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರತಂಡವ ಮನೆಗೆ ಆಹ್ವಾನಿಸಿ ಸತ್ಕರಿಸಿದ ರಜನೀಕಾಂತ್
Manjummel Boys: ಮಲಯಾಳಂ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಮಂಜ್ಞುಮ್ಮೆಲ್ ಬಾಯ್ಸ್’ ಸೂಪರ್ ಸ್ಟಾರ್ ರಜನೀಕಾಂತ್ಗೆ ಬಹಳ ಇಷ್ಟವಾಗಿದ್ದು, ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ.

ಮಲಯಾಳಂ (Malayalam) ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದಿದೆ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ. ಮಲಯಾಳಂ ಚಿತ್ರರಂಗದ ಈ ವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ಮಂಜ್ಞುಮ್ಮೆಲ್ ಬಾಯ್ಸ್’. ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರು ಸಹ ನೋಡಿ ಮೆಚ್ಚಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ನಟರು ಸಹ ನೋಡಿ ಮೆಚ್ಚಿ ಚಿತ್ರತಂಡದ ಪ್ರತಿಭೆಯನ್ನು, ಶ್ರಮವನ್ನು ಕೊಂಡಾಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ.
ತಮಗೆ ಸಿನಿಮಾ ಇಷ್ಟವಾದರೆ ಸಿನಿಮಾದ ನಿರ್ದೇಶಕರು, ನಟರನ್ನು ಕರೆಸಿ ಸತ್ಕರಿಸುವುದು ರಜನೀಕಾಂತ್ ಅಭ್ಯಾಸ. ಈ ಹಿಂದೆ ಕನ್ನಡದ ‘ಕಾಂತಾರ’ ಸಿನಿಮಾವನ್ನು ಮೆಚ್ಚಿಕೊಂಡಿದ್ದ ರಜನೀಕಾಂತ್, ರಿಷಬ್ ಶೆಟ್ಟಿಯವರನ್ನು ಕರೆಸಿ ಅವರನ್ನು ಸತ್ಕರಿಸಿದ್ದರಲ್ಲದೆ, ಅವರಿಗೆ ಚಿನ್ನದ ಚೈನ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ರಜನೀಕಾಂತ್, ನಿರ್ದೇಶಕ ಚಿದಂಬರಂ ಸೇರಿದಂತೆ ಸಿನಿಮಾದ ಪ್ರಮುಖ ನಟರು, ತಂತ್ರಜ್ಞರನ್ನು ಮನೆಗೆ ಆಹ್ವಾನಿಸಿ ಅವರನ್ನು ಸತ್ಕರಿಸಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾದ ದೃಶ್ಯಗಳು ಕಾಣೆಯಾಗಿದ್ದು ಹೇಗೆ? ವಿವರಿಸಿದ ಪುತ್ರಿ ಐಶ್ವರ್ಯಾ
ನಿರ್ದೇಶಕ ಚಿದಂಬರಂ ಹಾಗೂ ಚಿತ್ರತಂಡದೊಟ್ಟಿಗೆ ರಜನೀಕಾಂತ್ ಸಂವಾದ ನಡೆಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಜನೀಕಾಂತ್ ಮಾತ್ರವೇ ಅಲ್ಲದೆ ತಮಿಳಿನ ನಟ ಧನುಶ್ಗೆ ಸಹ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಬಹಳ ಇಷ್ಟವಾಗಿ, ನಿರ್ದೇಶಕರನ್ನು ಕರೆಸಿ ಅಭಿನಂದಿಸಿದ್ದರು. ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾದ ನಿರ್ದೇಶಕನಿಗೆ ಹೊಸ ಆಫರ್ ಒಂದನ್ನು ಸಹ ಧನುಶ್ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾವನ್ನು ಕಮಲ್ ಹಾಸನ್ ಸಹ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕಮಲ್ ಹಾಸನ್ರ ‘ಗುಣ’ ಸಿನಿಮಾಕ್ಕೂ ‘ಮಂಜ್ಞುಮ್ಮೆಲ್ ಬಾಯ್ಸ್’ ಬಾಯ್ಸ್ ನೇರವಾದ ನಂಟಿರುವ ಕಾರಣ, ಕಮಲ್ ಹಾಸನ್ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ನೋಡಿದ್ದಲ್ಲದೆ, ಚಿತ್ರತಂಡದ ಜೊತೆಗೆ ಸಂವಾದ ಸಹ ಮಾಡಿದ್ದರು. ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾದ ಚಿತ್ರೀಕರಣ ನಡೆದ ಜಾಗಗಳ ಬಗ್ಗೆ, ತಮ್ಮ ‘ಗುಣ’ ಸಿನಿಮಾದ ಚಿತ್ರೀಕರಣ ನಡೆದ ಜಾಗಗಳ ಬಗ್ಗೆ, ಅಂದಿನ ಸಂಗತಿಗಳ ಬಗ್ಗೆ, ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾದಲ್ಲಿ ವರ್ಕ್ ಆಗಿರುವ ವಿಷಯಗಳ ಬಗ್ಗೆ ಕಮಲ್ ಗಮನ ಸೆಳೆದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




