‘ಸ್ಲೋ ಮೋಷನ್ ಇಲ್ಲದೆ ರಜನಿ ಇಲ್ಲ, ಅರ್ಧ ಸಿನಿಮಾ ಅದನ್ನೇ ತೋರಿಸಿದ್ರೂ ನೋಡ್ತಾರೆ’; ಸ್ಟಾರ್ ನಿರ್ದೇಶಕನ ಹೇಳಿಕೆ
ರಾಮ್ ಗೋಪಾಲ್ ವರ್ಮಾ ಅವರು ರಜನಿಕಾಂತ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಟ ಮತ್ತು ಸೂಪರ್ಸ್ಟಾರ್ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ, ರಜನಿಕಾಂತ್ ಅವರ ಸ್ಲೋ ಮೋಷನ್ ದೃಶ್ಯಗಳನ್ನು ಪ್ರಶಂಸಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರಂತಹ ಸ್ಟಾರ್ಗಳು ಜನರಲ್ಲಿ ದೇವಮಾನವರಂತೆ ಕಾಣುತ್ತಾರೆ ಎಂದಿದ್ದಾರೆ.

ಸೂಪರ್ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅವರ ಚಿತ್ರಗಳನ್ನು ಜನರು ಸಾಕಷ್ಟು ಇಷ್ಟಪಡುತ್ತಾರೆ. ಅದರಲ್ಲೂ ಅವರ ಸ್ಲೋ ಮೋಷನ್ ದೃಶ್ಯಗಳನ್ನು ಜನರು ಹುಚ್ಚೆದ್ದು ನೋಡುತ್ತಾರೆ. ಈಗ ಅವರ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೆ ಒಂದನ್ನು ನೀಡಿದ್ದಾರೆ. ಈ ವೇಳೆ ನಟ ಹಾಗೂ ಸ್ಟಾರ್ ಮಧ್ಯೆ ಇರುವ ವ್ಯತ್ಯಾಸವನ್ನು ವಿವರಿಸುವಾಗ ರಜನಿಕಾಂತ್ ಉದಾಹರಣೆಯನ್ನು ನೀಡಿದ್ದಾರೆ. ‘ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ’ ಎಂದಿದ್ದಾರೆ ಅವರು.
‘ನಟನೆ ಅನ್ನೋದು ಪಾತ್ರದ ಬಗ್ಗೆ ಆದರೆ, ಸ್ಟಾರ್ಗಿರಿ ಅನ್ನೋದು ಪರ್ಫಾರ್ಮೆನ್ಸ್ ಮೇಲೆ ಆಧರಿಸಿರುತ್ತದೆ. ಇದರ ಮಧ್ಯೆ ಸಾಕಷ್ಟು ವ್ಯತ್ಯಾಸ ಇದೆ. ರಜನಿಕಾಂತ್ ಓರ್ವ ಉತ್ತಮ ನಟನೇ? ಅದು ನಂಗೆ ಗೊತ್ತಿಲ್ಲ. ರಜನಿಕಾಂತ್ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂದು ನನಗೆ ಅನಿಸದು. ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
‘ರಜನಿಕಾಂತ್ ಏನೂ ಮಾಡದೇ ಅರ್ಧದಷ್ಟು ಸಿನಿಮಾ ಸ್ಲೋ ಮೋಷನ್ನಲ್ಲಿ ನಡೆಯುತ್ತಿದ್ದರೂ ಆ ಬಗ್ಗೆ ನೀವು ಬೇಸರ ಮಾಡಿಕೊಳ್ಳುವುದಿಲ್ಲ. ಅದು ನಿಮಗೆ ಎಗ್ಸೈಟ್ಮೆಂಟ್ ಕೊಡುತ್ತದೆ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಇದನ್ನು ಅವರು ಪಾಸಿಟಿವ್ ಆಗಿಯೇ ಹೇಳಿದ್ದಾರೆ.
ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಅವರಂತಹ ಸ್ಟಾರ್‌ಗಳನ್ನು ಜನರು ದೇವಮಾನವರಂತೆ ನೋಡುತ್ತಾರೆ. ಹೀಗಾಗಿ ಪಾತ್ರವಾಗಲು ಅವರು ಕಷ್ಟಪಡುತ್ತಾರೆ ಎಂಬುದು ರಜನಿಕಾಂತ್ ಅಭಿಪ್ರಾಯ. ‘ಓರ್ವ ಸ್ಟಾರ್ ಸಾಮಾನ್ಯ ವ್ಯಕ್ತಿಯ ಪಾತ್ರ ಮಾಡಿದರೆ ಅದು ನಿರಾಶಾದಾಯಕ ಆಗಬಹುದು’ ಎಂಬುದು ಆರ್ಜಿವಿ ಅಭಿಪ್ರಾಯ.
ಇದನ್ನೂ ಓದಿ: ಶಿವಣ್ಣನ ಆರೋಗ್ಯದ ಬಗ್ಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ಗೆ ಕಾಳಜಿ
‘ನಾನು ಅಮಿತಾಭ್ ಬಚ್ಚನ್ ಅವರ ಸಿನಿಮಾ ಒಂದನ್ನು ನೋಡಿದ್ದೆ. ಆ ಸಿನಿಮಾದಲ್ಲಿ ಅವರಿಗೆ ಹೊಟ್ಟೆ ನೋವು ಬಂದಿತ್ತು. ನಾನು ಆ ದೃಶ್ಯವನ್ನೇ ದ್ವೇಷಿಸಿದ್ದೆ. ಅಮಿತಾಭ್ಗೆ ಹೊಟ್ಟೆನೋವು ಬರೋದನ್ನು ನೋಡಲು ನಾನು ಇಷ್ಟಪಡಲ್ಲ. ಹೀಗಾಗಿ, ಅವರು ಯಾವಾಗಲೂ ದೇವಮಾನವರಂತೆ ಆಗಬೇಕು. ದೇವ ಮಾನವರು ಪಾತ್ರವಾಗಲು ಸಾಧ್ಯವಿಲ್ಲ’ ಎನ್ನುತ್ತಾರೆ ರಾಮ್ ಗೋಪಾಲ್ ವರ್ಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




