ಗಾಂಜಾ ಜೊತೆ ಚಿರತೆ ಹಲ್ಲು ಪತ್ತೆ; ಖ್ಯಾತ ರ‍್ಯಾಪ್ ಸಿಂಗರ್ ವೇಡನ್ ಬಂಧನ
ವೇಡನ್ ಅಲಿಯಾನ್ ಹಿರಣ್ದಾಸ್ ಮುರಳಿ ಅವರಿಗೆ ಸಂಕಷ್ಟ ಎದುರಾಗಿದೆ. ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ವೇಡನ್ ಮನೆಯಲ್ಲಿ ಚಿರತೆ ಹಲ್ಲು ಮತ್ತು ಮಾದಕ ವಸ್ತು ಪತ್ತೆ ಆಗಿದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದೆ. ಪೊಲೀಸರು ಜಾಮೀನು ನೀಡಿದ ಬಳಿಕ ವೇಡನ್ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ಈಗ ಕೆಟ್ಟಕಾಲ. ಮಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಮೇಲೆ ಗಂಭೀರ ಆರೋಪಗಳು ಎದುರಾಗಿವೆ. ಮಾದಕ ವಸ್ತು ಸೇವನೆ ಕೇಸ್ನಲ್ಲಿ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಒಳ್ಳೊಳ್ಳೆಯ ಸಿನಿಮಾಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಮಲಯಾಳಂ ಚಿತ್ರರಂಗ (Malayalam Film Industry) ಈಗ ಒಂದಷ್ಟು ಕೆಟ್ಟ ಕಾರಣಗಳಿಂದ ಸುದ್ದಿ ಆಗುತ್ತಿವೆ. ಇತ್ತೀಚೆಗೆ ಶೈನ್ ಟಾಮ್ ಚಾಕೋ ಅರೆಸ್ಟ್ ಆಗಿ, ಜಾಮೀನು ಪಡೆದು ಹೊರಬಂದಿದ್ದರು. ಈಗ ಮಲಯಾಳಂನ ಫೇಮಸ್ ರ‍್ಯಾಪ್ ಸಿಂಗರ್ ವೇಡನ್ (Rapper Vedan) ಅವರನ್ನು ಕೂಡ ಬಂಧಿಸಲಾಗಿದೆ.
ರ‍್ಯಾಪರ್ ವೇಡನ್ ಮೇಲೆ ಹಲವು ಆರೋಪಗಳಿವೆ. ಅವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದರು. ಆಗ 5 ಗ್ರಾಂ ಗಾಂಜಾ ಹಾಗೂ ಅದನ್ನು ಸೇವಿಸಲು ಬಳಸುವ ಉಪಕರಣಗಳು ಪತ್ತೆ ಆಗಿವೆ. ಅವರ ಜೊತೆ ಇನ್ನೂ 8 ಜನರನ್ನು ಬಂಧಿಸಲಾಯಿತು. ಬಳಿಕ ವೇಡನ್ ಅವರಿಂದ ಹೇಳಿಕೆ ಪಡೆದುಕೊಂಡು, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟ್ವಿಸ್ಟ್ ಏನೆಂದರೆ, ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ವೇಡನ್ ಅವರ ಮನೆಯಲ್ಲಿ ಚಿರತೆ ಹಲ್ಲು ಪತ್ತೆ ಆಗಿದೆ! ಈ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ವೇಡನ್ ಹಿಂದೆ ಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಈ ಚಿರತೆ ಹಲ್ಲು ಅವರ ಬಳಿ ಹೇಗೆ ಬಂತು ಎಂದು ಪ್ರಶ್ನಿಸಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ವೇಡನ್ ಅವರು ಅರಣ್ಯಾಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಮೊದಲಿಗೆ ಇದನ್ನು ಥೈಲೆಂಡ್ನಲ್ಲಿ ಖರೀದಿಸಿದ್ದಾಗಿ ಹೇಳಿದರು. ನಂತರ ಇದು ತಮಗೆ ಅಭಿಮಾನಿಗಳು ಗಿಫ್ಟ್ ನೀಡಿದ್ದು ಎಂದು ಹೇಳಿದರು. ವೇಡನ್ ಮೇಲೆ ಈ ಮೊದಲು ಕೂಡ ಆರೋಪಗಳು ಎದುರಾಗಿದ್ದರಿಂದ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣು ಇಟ್ಟಿದ್ದರು.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ನಟ ಶೈನ್ ಟಾಮ್ ಚಾಕೋ ಬಂಧನ; ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು
ಚಿರತೆ ಹಲ್ಲು ಪತ್ತೆ ಆಗಿರುವ ಬಗ್ಗೆ ಅರಣ್ಯ ಅಧಿಕಾರಿಗಳು ವರದಿ ಸಿದ್ಧಪಡಿಸಿ ಕೋರ್ಟ್ಗೆ ನೀಡಲಿದ್ದಾರೆ. ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ವೇಡನ್ ಭವಿಷ್ಯ ನಿರ್ಧಾರ ಆಗಲಿದೆ. ವೇಡನ್ ಅವರ ಮೂಲ ಹೆಸರು ಹಿರಣ್ದಾಸ್ ಮುರಳಿ. ರ‍್ಯಾಪ್ ಸಾಂಗ್ಗಳ ಮೂಲಕ ಅವರು ವೇಡನ್ ಎಂಬ ಹೆಸರಿನಿಂದ ಫೇಮಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








