Hamsalekha Birthday: ಚಂದನವನಕ್ಕೆ ‘ನಾದಬ್ರಹ್ಮ’ ಹಂಸಲೇಖ ನೀಡಿದ ಕೊಡುಗೆಯ ಅಳೆಯಲು ಸಾಧ್ಯವೇ?
Happy Birthday Hamsalekha: ಹಂಸಲೇಖ ಎಂದರೆ ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾದವರಲ್ಲ. ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸಂಗೀತ ನಿರ್ದೇಶಕ, ಗೀತರಚನಕಾರ ಹಂಸಲೇಖ ಅವರ ಬಗ್ಗೆ ಮಾತನಾಡದೇ ಕನ್ನಡ ಚಿತ್ರರಂಗವನ್ನು ಬಣ್ಣಿಸಲು ಸಾಧ್ಯವಿಲ್ಲ. ತಮ್ಮ ಸಂಗೀತದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಹಂಸಲೇಖ ಅವರಿಗೆ ಇಂದು (ಜೂನ್ 23) ಹುಟ್ಟುಹಬ್ಬದ (Hamsalekha Birthday) ಸಂಭ್ರಮ. ಈ ಸಂಗೀತ ಮಾಂತ್ರಿಕನಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿದ್ದಾರೆ. ಚಂದನವನವನ್ನು (Sandalwood) ಚಂದಗೊಳಿಸುವಲ್ಲಿ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದ ಕೊಡುಗೆ ಅಪಾರ. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಈಗಲೂ ಬ್ಯುಸಿ ಆಗಿದ್ದಾರೆ. 71ನೇ ವಯಸ್ಸಿಗೆ ಅವರು ಕಾಲಿಟ್ಟಿದ್ದಾರೆ. ದಣಿವರಿಯದೇ ಅವರು ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅಪಾರ ಸಂಖ್ಯೆಯ ಜನರಿಗೆ ‘ನಾದಬ್ರಹ್ಮ’ ಹಂಸಲೇಖ (Nada Brahma Hamsalekha) ಅವರೇ ಮಾದರಿ. ಅವರನ್ನು ಮಾನಸ ಗುರುಗಳು ಎಂದು ಅನೇಕರು ಕರೆದಿದ್ದಾರೆ.
ಹಂಸಲೇಖ ಅವರ ಸಾಧನೆಗೆ ಸಿಕ್ಕ ಪ್ರಶಸ್ತಿಗಳು ಹಲವು. ಒಂದು ರಾಷ್ಟ್ರ ಪ್ರಶಸ್ತಿ, 6 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, 10 ಬಾರಿ ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ಅವರು. ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ಚಿಕ್ಕ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು ಅವರು ನಂತರ ಕನ್ನಡ ಚಿತ್ರರಂಗವನ್ನೇ ಆಳುವ ಸಂಗೀತ ನಿರ್ದೇಶಕನಾಗಿ ಬೆಳೆದುನಿಂತರು. ಬಹುತೇಕ ಎಲ್ಲ ಸ್ಟಾರ್ ನಟರ ಸಿನಿಮಾಗಳಿಗೂ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಹಂಸಲೇಖ ಎಂದರೆ ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾದವರಲ್ಲ. ‘ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ..’ ರೀತಿಯ ಡ್ಯುಯೆಟ್ ಸಾಂಗ್ ಬರೆದ ಹಂಸಲೇಖ ಅವರೇ ‘ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ..’ ಎಂದು ಭಕ್ತಿಪ್ರಧಾನ ಗೀತೆಯನ್ನೂ ಬರೆದರು. ‘ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು..’ ಎಂದು ಬರೆದು ಪಡ್ಡೆಗಳಿಗೆ ಮನರಂಜನೆ ನೀಡಿದ ಹಂಸಲೇಖ ಅವರೇ ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟುಬೇಕು..’ ಅಂತ ಬರೆದರು. ‘ಕಾಯಿ ಕಾಯಿ ನುಗ್ಗೆಕಾಯಿ..’ ಎಂದವರೂ ಅವರೇ, ‘ಬಾಳುವಂಥ ಹೂವೇ ಬಾಡುವಾಸೆ ಏಕೆ..’ ಎಂದು ಬುದ್ಧಿಮಾತಿನ ಹಾಡು ಬರೆದವರು ಅವರೇ. ಹೀಗೆ ಹಂಸಲೇಖ ಅವರ ಪ್ರತಿಭೆ ಅಪಾರ.
ಸಿನಿಮಾ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹತ್ತಾರು ಬಗೆಯ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡವರು ಹಂಸಲೇಖ. ಅವರಿಗೆ ಸರಿಸಾಟಿಯಾಗುವಂತಹ ಮತ್ತೋರ್ವ ವ್ಯಕ್ತಿ ಇಲ್ಲ ಎನ್ನಬಹುದು. ಅವರು ನೀಡಿದ ಕೊಡುಗೆಯನ್ನು ಅಳೆಯಲು ಸಾಧ್ಯವಿಲ್ಲ. ಸದ್ಯ ಅವರು ‘ನಡೆದಾಡೋ ದೇವರ ಬಸವ ಭಾರತ’ ಮಿನಿ ಸಿನಿ ಸೀರಿಸ್ನ ಸಾರಥ್ಯ ವಹಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಕುರಿತು ಈ ಕಿರುಚಿತ್ರ ಸರಣಿ ಸಿದ್ಧವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Thu, 23 June 22