ನಟ ಶಿವರಾಜ್ಕುಮಾರ್ ಸಾವು ಗೆದ್ದು ಒಂದು ವರ್ಷ; ಅಂದು ನಡೆದಿದ್ದೇನು?
ನಟ ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಒಂದು ವರ್ಷ ಕಳೆದಿದೆ. ಅಮೆರಿಕದ ಮಿಯಾಮಿಯಲ್ಲಿ ಯಶಸ್ವಿ ಸರ್ಜರಿ ನಡೆದು ಡಿಸೆಂಬರ್ 24ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈಗ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿರುವ ಶಿವಣ್ಣ, '45', 'ಜೈಲರ್ 2', 'ಉತ್ತರಕಾಂಡ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ನಟ ಶಿವರಾಜ್ಕುಮಾರ್ (Shivarajkumar) ನಟನೆಯ ‘45’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಪರಿಸ್ಥಿತಿ ಈ ರೀತಿ ಇರಲಿಲ್ಲ. ಅವರು ಈ ಸಂದರ್ಭದಲ್ಲಿ ಅಮೇರಿಕದ ಮಿಯಾಮಿಯಲ್ಲಿ ಇದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಅವರ ಆಪರೇಷನ್ ನಡೆದು ಡಿಸೆಂಬರ್ 24ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಶಿವರಾಜ್ಕುಮಾರ್ ಅವರಿಗೆ ಮೂತ್ರಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತು. ಆರಂಭದಲ್ಲಿ ಎಲ್ಲರೂ ಆತಂಕಕ್ಕೆ ಒಳಗಾದರು. ನಂತರ ಎಲ್ಲರೂ ಅವರಿಗೆ ಧೈರ್ಯ ತುಂಬಿದರು. ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದರು. ಆ ಬಳಿಕ ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿಗೆ ತೆರಳಿದರು. ಅಮೆರಿಕದಲ್ಲಿ 2024ರ ಡಿಸೆಂಬರ್ 24ರಂದು ಆಪರೇಷನ್ ಮಾಡಿಸಿಕೊಂಡರು. ಬರೋಬ್ಬರಿ 4-5 ಗಂಟೆಗಳ ಕಾಲ ಈ ಆಪರೇಷನ್ ನಡೆದಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಭಾರತ ಮೂಲದ ಡಾ. ಮುರುಗೇಶ್ ನೇತೃತ್ವದಲ್ಲಿ ಈ ಸರ್ಜರಿ ನಡೆದಿತ್ತು.
ಈ ಘಟನೆ ನಡೆದು ಒಂದು ವರ್ಷ ಕಳೆದಿದೆ. ಶಿವಣ್ಣ ಅವರು ಮೊದಲಿನಂತೆ ರೆಡಿ ಆಗಿದ್ದಾರೆ. ಅವರು ಈಗ ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅಮೆರಿಕದಿಂದ ಬೆಂಗಳೂರಿಗೆ ಬಂದ ಬಳಿಕ ಅವರು ಕೊಂಚ ವಿಶ್ರಾಂತಿ ಪಡೆದರು. ನಂತರ ಮತ್ತೆ ಶಿವರಾಜ್ಕುಮಾರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್ಕುಮಾರ್ ಹೀಗೆ ಹೇಳಿದ್ರು
ಶಿವರಾಜ್ಕುಮಾರ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ನಟಿಸುತ್ತಿದ್ದಾರೆ. ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ‘45’ ರಿಲೀಸ್ಗೆ ರೆಡಿ ಇದೆ. ‘ಜೈಲರ್ 2’ ಶೂಟ್ನಲ್ಲೂ ಶಿವಣ್ಣ ಭಾಗಿ ಆಗುತ್ತಿದ್ದಾರೆ. ‘ಉತ್ತರಕಾಂಡ’ ಸಿನಿಮಾದ ಭಾಗ ಕೂಡ ಆಗಿದ್ದಾರೆ ಶಿವಣ್ಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




