ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್; ಜೈಲುವಾಸವೇ ಗತಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಆಗಿದೆ. ಇಂದು (ಅ.14) 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿದೆ. 120ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆದಿರುವ ಪವಿತ್ರಾ ಗೌಡ ಅವರ ಜೈಲು ವಾಸ ಮುಂದುವರಿಯಲಿದೆ. ಜಾಮೀನಿಗಾಗಿ ಅವರು ಹೈಕೋರ್ಟ್ ಮೊರೆ ಹೋಗಲಿದ್ದಾರೆ.
ಜಾಮೀನು ಪಡೆಯಬೇಕು ಎಂದು ಪ್ರಯತ್ನಿಸುತ್ತಿದ್ದ ಪವಿತ್ರಾ ಗೌಡ ಅವರಿಗೆ ನಿರಾಸೆ ಆಗಿದೆ. ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ದರ್ಶನ್ ಎ2 ಆಗಿದ್ದಾರೆ. ಈ ಕೇಸ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ವಿಚಾರಣೆ ನಡೆದಿದ್ದು, ಇಂದು (ಅ.14) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿದೆ. ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಹಾಗಾಗಿ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುವುದು ಅನಿವಾರ್ಯ ಆಗಿದೆ.
ಈಗ ಜಾಮೀನು ಸಿಗದೇ ಇರುವ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಹೈಕೋರ್ಟ್ ಮೊರೆ ಹೋಗಬೇಕಿದೆ. ಇದೇ ಕೇಸ್ನ ಇನ್ನೋರ್ವ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿದೆ. ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರಿಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿದೆ. ಜಾಮೀನು ಅರ್ಜಿ ವಜಾ ಆಗಿದ್ದರಿಂದ ಅವರಿಗೆ ಸಂಕಷ್ಟ ಹೆಚ್ಚಾಗಿದೆ.
ಇದನ್ನೂ ಓದಿ: ದರ್ಶನ್ಗೆ ಜಾಮೀನು ಕೊಡಲು ನಿರಾಕರಿಸಿದ ಕೋರ್ಟ್; ದಾಸನಿಗೆ ಜೈಲೇ ಗತಿ
ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆಯೇ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನ ಮೊದಲ ಆರೋಪಿ ಪವಿತ್ರಾ ಈಗ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರು ಜೈಲಿನಲ್ಲಿ ಟಿವಿ ನೋಡುತ್ತಿದ್ದರು. ಆದರೆ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಅವರು ಕಣ್ಣೀರು ಹಾಕುತ್ತಾ ಮೌನಕ್ಕೆ ಶರಣಾದರು.
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಸಹಚರರು ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದರು. ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಯಿತು. ಆತನ ಪ್ರಾಣ ಹೋದ ಬಳಿಕ ರಾಜಕಾಲುವೆಗೆ ಶವ ಎಸೆಯಲಾಯಿತು. ಈ ಕೇಸ್ನಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ದರ್ಶನ್, ವಿನಯ್, ಪ್ರದೋಶ್ ಸೇರಿದಂತೆ ಹಲವರು ಮೇಲೆ ಆರೋಪ ಎದುರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Mon, 14 October 24