AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಅರ್ಜಿ ವಜಾ: ಈಗ ದರ್ಶನ್​ ಮುಂದಿದೆ ಮೂರು ಪ್ರಮುಖ ಆಯ್ಕೆಗಳು

ಜಾಮೀನು ಪಡೆಯುವ ಆಸೆಯಲ್ಲಿ ಇದ್ದ ದರ್ಶನ್​ ಅವರಿಗೆ ತೀವ್ರ ನಿರಾಸೆ ಆಗಿದೆ. ವಾದ-ಪ್ರತಿವಾದ ಆಲಿಸಿದ 57ನೇ ಸಿಸಿಹೆಚ್​ ನ್ಯಾಯಾಲಯ ಇಂದು (ಅ.14) ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತು. ಹಾಗಾದರೆ ದರ್ಶನ್​ ಈಗ ಜೈಲಿನಿಂದ ಹೊರಗೆ ಬರಬೇಕು ಎಂದರೆ ಏನು ಮಾಡಬೇಕು? ಅವರ ಮುಂದಿರುವ ಆಯ್ಕೆಗಳು ಏನು? ಈ ಬಗ್ಗೆ ಇಲ್ಲಿದೆ ವಿವರ..

ಜಾಮೀನು ಅರ್ಜಿ ವಜಾ: ಈಗ ದರ್ಶನ್​ ಮುಂದಿದೆ ಮೂರು ಪ್ರಮುಖ ಆಯ್ಕೆಗಳು
ದರ್ಶನ್
Ramesha M
| Edited By: |

Updated on: Oct 14, 2024 | 7:22 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿ ಜೈಲು ಸೇರಿರುವ ದರ್ಶನ್​ ಈಗಾಗಲೇ ಕಂಬಿ ಹಿಂದೆ 125 ದಿನಗಳನ್ನು ಕಳೆದಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘಿಸಿ ರಾಜಾತಿಥ್ಯ ಪಡೆದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಬಳ್ಳಾರಿ ಜೈಲಿಗೆ ಹೋದ ನಂತರ ಅವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ಹಾಗಾಗಿ ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ಅವರು ಪ್ರಯತ್ನ ನಡೆಸಿದ್ದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್​ ನ್ಯಾಯಾಲಯ ವಜಾಗೊಳಿಸಿದೆ.

ಸದ್ಯ ದರ್ಶನ್​ ಮುಂದೆ ಒಂದಷ್ಟು ಆಯ್ಕೆಗಳು ಇವೆ. ಅವುಗಳಲ್ಲಿ ಮೂರು ಆಯ್ಕೆಗಳು ಪ್ರಮುಖವಾಗಿದೆ. ಜಾಮೀನು ಕೋರಿ ಹೈಕೋರ್ಟ್​ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಇದು ಒಂದು ಆಯ್ಕೆ. ಇನ್ನೊಂದು ಆಯ್ಕೆ ಏನೆಂದರೆ, ಅನಾರೋಗ್ಯದ ಕಾರಣವನ್ನು ನೀಡಿ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿಯೇ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ದರ್ಶನ್​ಗೆ ಬೇಲ್ ಸಿಗದಿದ್ದರೂ ಚಿಂತೆಯಿಲ್ಲ, ಮುಂದೆ ಖಂಡಿತ ಸಿಗುತ್ತದೆ ಎನ್ನುತ್ತಾರೆ ಅಭಿಮಾನಿಗಳು

ಹೈಕೋರ್ಟ್​ಗೆ ಸಲ್ಲಿಸಲಿರುವ ಜಾಮೀನು ಅರ್ಜಿಯಲ್ಲಿಯೂ ದರ್ಶನ್​ ಅವರು ಅನಾರೋಗ್ಯದ ವಿಷಯವನ್ನು ಹೆಚ್ಚುವರಿ ಕಾರಣವಾಗಿ ಉಲ್ಲೇಖಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ವೈದ್ಯಕೀಯ ದಾಖಲೆಗಳಿಗಾಗಿ ಜೈಲು ಅಧಿಕಾರಿಗಳಿಗೆ ವಕೀಲರಿಂದ ಇಮೇಲ್ ಮಾಡಲಾಗಿದೆ. ಮೂರನೇ ಆಯ್ಕೆ ಏನೆಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಬಹುದು. ಸ್ವಂತ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ದರ್ಶನ್​ ಮನವಿ ಮಾಡಬಹುದು.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಸದ್ಯಕ್ಕೆ ದರ್ಶನ್​ ಅವರ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾಮೀನು ಸಿಗತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಅವರು ಕಾಲ ಕಳೆಯುತ್ತಿದ್ದರು. ಇಂದು ಕೋರ್ಟ್​ ಆದೇಶ ನೋಡಿ ಅವರಿಗೆ ನಿರಾಸೆ ಆಗಿದೆ. ಅವರು ಜೈಲಿನಿಂದ ಹೊರಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಇತ್ತ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಅವರು ಕೂಡ ಕಣ್ಣೀರು ಹಾಕುತ್ತಾ ಮೌನಕ್ಕೆ ಶರಣಾಗಿದ್ದಾರೆ. ಅವರ ಜಾಮೀನು ಅರ್ಜಿ ಕೂಡ ವಜಾ ಆಗಿದೆ. ಪ್ರಕರಣದಲ್ಲಿ ಅವರು ಎ1 ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.