AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಖ್ಯಾತಿಯ ಶನೀಲ್ ಗೌತಮ್ ನಟನೆಯ ಮುಂದಿನ ಚಿತ್ರ ‘ಶ್ರೀರಾಮಚಂದ್ರ’

ನಟ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಆಗಿದೆ. ಬಿ.ಕೆ. ಗಂಗಾಧರ್ ನಿರ್ಮಾಣ, ಚಂದ್ರಮೋಹನ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಪರಿಪೂರ್ಣಾ ಚಂದ್ರಶೇಖರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಸು ಫ್ರಮ್ ಸೋ’ ಖ್ಯಾತಿಯ ಶನೀಲ್ ಗೌತಮ್ ನಟನೆಯ ಮುಂದಿನ ಚಿತ್ರ ‘ಶ್ರೀರಾಮಚಂದ್ರ’
Shaneel Gautham Poster
ಮದನ್​ ಕುಮಾರ್​
|

Updated on: Nov 02, 2026 | 8:03 PM

Share

ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ರವಿ ಅಣ್ಣನಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಶನೀಲ್ ಗೌತಮ್ ಈಗ ‘ಶ್ರೀರಾಮಚಂದ್ರ’ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡವು ಸಿನಿಮಾ ಶೀರ್ಷಿಕೆ ಹಾಗೂ ಆಕರ್ಷಕ ಪೋಸ್ಟರ್‌ ಅನಾವರಣಗೊಳಿಸಿದೆ. ‘ಪೊಗರು’ ಖ್ಯಾತಿಯ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ಫಾರೆಸ್ಟ್’ ಖ್ಯಾತಿಯ ಚಂದ್ರಮೋಹನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಚಿತ್ರ. ಕುಟುಂಬದ ಸಂಬಂಧಗಳು, ಭಾವನೆಗಳು, ಅಣ್ಣ-ತಂಗಿಯರ ಕಿತ್ತಾಟ ಮತ್ತು ಹಾಸ್ಯಕ್ಕೆ ಆದ್ಯತೆ ನೀಡಲಾಗಿದ್ದು, ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಭಾವನಾತ್ಮಕವಾಗಿಯೂ ಕಾಡುವಂತಹ ಸನ್ನಿವೇಶಗಳು ಚಿತ್ರದಲ್ಲಿರಲಿವೆ. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವುದು ಈ ಸಿನಿಮಾದ ಉದ್ದೇಶ ಎಂದು ಚಿತ್ರತಂಡ ಹೇಳಿದೆ.

‘ಶ್ರೀರಾಮಚಂದ್ರ’ ಸಿನಿಮಾದ ಕಥೆಯನ್ನು ನಿರ್ಮಾಪಕ ಉದಯ್ ಕೆ. ಮೆಹ್ತ ಅವರು ರೂಪಿಸಿದ್ದು, ನಿರ್ದೇಶಕ ಚಂದ್ರಮೋಹನ್ ಹಾಗೂ ಶನೀಲ್ ಗೌತಮ್ ಚಿತ್ರಕಥೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆಯನ್ನು ಅಭಿವೃದ್ಧಿಪಡಿಸಲು ಸುಮಾರು ಐದಾರು ತಿಂಗಳುಗಳ ಕಾಲ ಮಂಗಳೂರಿನಲ್ಲಿ ಕುಳಿತು ಚಿತ್ರಕಥೆ ಸಿದ್ಧಪಡಿಸಲಾಗಿದೆ. ಉತ್ತಮ ಕಥೆಯುಳ್ಳ ಚಿತ್ರವನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಹಲವು ಕಥೆಗಳನ್ನು ಆಲಿಸಿದ್ದರು. ನಿರ್ದೇಶಕರ ಎರಡು-ಮೂರು ಕಥೆಗಳ ಬಗ್ಗೆಯೂ ಚರ್ಚೆ ನಡೆಸಿದ್ದರು. ಅಂತಿಮವಾಗಿ ‘ಶ್ರೀರಾಮಚಂದ್ರ’ ಚಿತ್ರದ ಕಥೆ ಇಷ್ಟವಾಗಿ, ಸಂಪೂರ್ಣ ಪೂರ್ವಸಿದ್ಧತೆಯೊಂದಿಗೆ ಚಿತ್ರೀಕರಣ ಶುರು ಮಾಡಲಾಗಿದೆ.

ಚಿತ್ರದಲ್ಲಿ ಪರಿಪೂರ್ಣಾ ಚಂದ್ರಶೇಖರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಡುಪಿ ಮೂಲದ ಪರಿಪೂರ್ಣಾ ಅವರಿಗೆ ಇದು ಕನ್ನಡದ ಮೊದಲ ಸಿನಿಮಾವಾಗಿದ್ದು, ಈ ಹಿಂದೆ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಿಹಿ ಸುದ್ದಿ ಹಂಚಿಕೊಂಡ ‘ಸು ಫ್ರಮ್ ಸೋ’ ಭಾನು

‘ಸು ಫ್ರಮ್ ಸೋ’ ಖ್ಯಾತಿಯ ಚಂದ್ರಶೇಖರನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿರಲಿವೆ. ‘ಸು ಫ್ರಮ್ ಸೋ’ ತಂಡದ ಶೇಕಡ 80ರಷ್ಟು ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿಯೂ ಕೆಲಸ ಮಾಡುತ್ತಿರುವುದು ವಿಶೇಷ. ಸದ್ಯ ಈ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More