ಶ್ರೀನಿಧಿ ಶೆಟ್ಟಿ ಕನ್ನಡ ಪ್ರೇಮಕ್ಕೆ ನಾನಿ ಫುಲ್ ಫಿದಾ; ಯಾರೂ ಈ ರೀತಿ ಮಾಡಲ್ಲ
ಶ್ರೀನಿಧಿ ಶೆಟ್ಟಿ ಅವರು ತಮ್ಮ ಹೊಸ ಚಿತ್ರ ‘ಹಿಟ್ 3’ ಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಅಮೆರಿಕದಲ್ಲಿರುವಾಗಲೂ ಕನ್ನಡ ಡಬ್ಬಿಂಗ್‌ಗಾಗಿ ಬೇಗ ಬಂದು ಡಬ್ ಮಾಡಿದ್ದಾರೆ ಎಂದು ನಾನಿ ಹೇಳಿದ್ದಾರೆ. ಇದು ಅವರ ಕನ್ನಡ ಭಾಷೆ ಹಾಗೂ ಸಿನಿಮಾ ರಂಗದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಕನ್ನಡದ ನಟಿ. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಿಂದ ಅವರಿಗೆ ಪರಭಾಷೆಯ ಆಫರ್ಗಳು ಬಂದಿದೆ ಎಂಬುದು ನಿಜ. ಅವರು ಅಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಕೂಡ ನಿಜ. ಆದರೆ, ಅವರು ಕನ್ನಡ ಪ್ರೇಮವನ್ನು ಎಂದಿಗೂ ಕಡಿಮೆ ಮಾಡಿಕೊಂಡಿಲ್ಲ. ಇದಕ್ಕೆ ಹೊಸ ಸಾಕ್ಷ್ಯ ಒಂದು ಸಿಕ್ಕಿದೆ. ಶ್ರೀನಿಧಿ ಶೆಟ್ಟಿ ಅವರ ಕನ್ನಡ ಪ್ರೇಮ ಎಂಥದ್ದು ಎಂಬುದಕ್ಕೆ ನಾನಿ ಅವರೇ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಅವರು ಒಟ್ಟಾಗಿ ‘ಹಿಟ್ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಹಿಟ್’ ಹಾಗೂ ‘ಹಿಟ್ 2’ ರಿಲೀಸ್ ಆದ ಬಳಿಕ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ, ಕನ್ನಡದಲ್ಲೂ ಈ ಚಿತ್ರ ಡಬ್ ಆಗಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿನ ಕನ್ನಡ ವರ್ಷನ್ಗೆ ಶ್ರೀನಿಧಿ ಶೆಟ್ಟಿ ಅವರೇ ಡಬ್ ಮಾಡಿದ್ದಾರೆ. ಈ ವಿಚಾರವನ್ನು ನಾನಿ ರಿವೀಲ್ ಮಾಡಿದ್ದಾರೆ.
View this post on Instagram
‘ಶ್ರೀನಿಧಿ ಶೆಟ್ಟಿ ಅವರು ಮೊದಲು ತೆಲುಗಿನಲ್ಲಿ ಡಬ್ ಮಾಡಿದ್ದರು. ಇದಕ್ಕೆ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡರು. ಕನ್ನಡದಲ್ಲಿ ಅವರ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಸಮಯ ಇರಲಿಲ್ಲ. ಅವರು ಅಮೆರಿಕದಲ್ಲಿ ಇದ್ದರು. ಕನ್ನಡದಲ್ಲಿ ನನ್ನದೇ ಧ್ವನಿ ಇರಬೇಕು ಎಂದು ಅಮೆರಿಕದಿಂದ ಬೇಗ ಬಂದರು ಮತ್ತು ಡಬ್ ಮಾಡಿದರು. ಮಾತೃ ಭಾಷೆ ಬಗ್ಗೆ ಅವರಿಗೆ ಇರೋ ಪ್ರೀತಿ ಇದು’ ಎಂದು ನಾನಿ ಅವರು ಶ್ರೀನಿಧಿಯನ್ನು ಬಾಯ್ತುಂಬ ಹೊಗಳಿದರು.
ಇದನ್ನೂ ಓದಿ: ಮುಖ ಮುಚ್ಚಿಕೊಂಡು ತಿರುಗಾಡಿದ ನಾನಿ, ಶ್ರೀನಿಧಿ ಶೆಟ್ಟಿ; ವಿಡಿಯೋ ಮಾಡಲು ಬಂದವರ ಮೇಲೆ ಗರಂ
ಈ ರೀತಿ ನಟಿಯರು ಸಿಗೋದು ಅಪರೂಪ ಎಂದು ಅನೇಕರು ಹೇಳಿದ್ದಾರೆ. ಕೆಲವು ನಟಿಯರು ನಮ್ಮ ಭಾಷೆಯಲ್ಲಿ ನಟಿಸಿ ಫೇಮಸ್ ಆಗಿ ಪರಭಾಷೆಗೆ ಹೋಗುತ್ತಾರೆ. ಅಲ್ಲಿ ಫೇಮಸ್ ಆದ ಬಳಿಕ ಅವರಿಗೆ ಕನ್ನಡದ ನೆನಪೇ ಇರುವುದಿಲ್ಲ. ಆದರೆ, ಶ್ರೀನಿಧಿ ಶೆಟ್ಟಿ ಆ ರೀತಿ ಅಲ್ಲ ಅನ್ನೋದು ವಿಶೇಷ. ನಾನಿ ಹಾಗೂ ಅವರು ನಟಿಸಿರೋ ‘ಹಿಟ್ 3’ ಇಂದು (ಮೇ 1) ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







