‘90 ಬಿಡಿ ಮನೀಗ್ ನಡಿ’ ಚಿತ್ರದ ಹಾಡು ರಿಲೀಸ್; ಇದು ವೈಜನಾಥ್ ಬಿರಾದಾರ್ ನಟನೆಯ 500ನೇ ಸಿನಿಮಾ
Vaijanath Biradar | 90 Bidi Manig Nadi: ‘ನಾನು 500 ಚಿತ್ರಗಳಲ್ಲಿ ನಟಿಸಿದ್ದೇನೆಂದರೆ ಅದಕ್ಕೆ ಎಲ್ಲರ ಪ್ರೋತ್ಸಾಹ ಕಾರಣ’ ಎಂದು ವೈಜನಾಥ್ ಬಿರಾದಾರ್ ಹೇಳಿದ್ದಾರೆ. ‘90 ಬಿಡಿ ಮನೀಗ್ ನಡಿ’ ಚಿತ್ರದಲ್ಲಿ ಅವರು ಡ್ಯಾನ್ಸ್ ಕೂಡ ಮಾಡಿದ್ದಾರೆ.
ನಟ ವೈಜನಾಥ್ ಬಿರಾದಾರ್ (Vaijanath Biradar) ಅವರಿಗೆ ಈಗ 70 ವರ್ಷ ವಯಸ್ಸು. ಈ ಪ್ರಾಯದಲ್ಲೂ ಹದಿಹರೆಯದ ಯುವಕನ ರೀತಿ ಉತ್ಸಾಹ ಹೊಂದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಹಾಸ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರು ‘90 ಬಿಡಿ ಮನೀಗ್ ನಡಿ’ (90 Bidi Manig Nadi) ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇದು ಅವರು ನಟಿಸಿರುವ 500ನೇ ಚಿತ್ರ ಎಂಬುದು ವಿಶೇಷ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ರಿಲೀಸ್ ಮಾಡಲಾಯಿತು. ಅದರ ಪ್ರಯುಕ್ತ ಸುದ್ದಿಗೋಷ್ಠಿ ಕರೆದು ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಯಿತು. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಕಥೆ ಬರೆದು, ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರವನ್ನು ರತ್ನಮಾಲ ಬಾದರದಿನ್ನಿ ನಿರ್ಮಾಣ ಮಾಡಿದ್ದಾರೆ.
‘ನಾನು 500 ಸಿನಿಮಾಗಳಲ್ಲಿ ನಟಿಸಿದ್ದೇನೆಂದರೆ ಅದಕ್ಕೆ ರಂಗಭೂಮಿ ಹಾಗೂ ಚಿತ್ರರಂಗದವರ ಪ್ರೋತ್ಸಾಹವೇ ಕಾರಣ. ಈ ಚಿತ್ರದಲ್ಲಿ ಊದಿನ ಕಡ್ಡಿ ಮಾರುವವನ ಪಾತ್ರ ಮಾಡಿದ್ದೇನೆ. ನನಗೆ ಕುಡಿತದ ಚಟ ಇರುತ್ತದೆ. ನಂತರ ಒಬ್ಬ ಹೆಂಗಸಿನ ಪರಿಚಯ ಆಗುತ್ತದೆ. ಅಲ್ಲಿಂದ ಅನೇಕ ತಿರುವುಗಳು ಎದುರಾಗುತ್ತವೆ. ನಾಟಕದಲ್ಲಿ ಹೀಗೋ ಕುಣಿಯುತ್ತಿದ್ದೆ. ಈ ಚಿತ್ರದಲ್ಲಿ ಹಾಡೊಂದಕ್ಕೆ ಪೂರ್ಣಪ್ರಮಾಣದಲ್ಲಿ ನೃತ್ಯ ಮಾಡಿದ್ದೇನೆ. ಭೂಷಣ್ ಮಾಸ್ಟರ್ ನನ್ನಿಂದ ಡ್ಯಾನ್ಸ್ ಮಾಡಿಸಿದ್ದಾರೆ’ ಎಂದಿದ್ದಾರೆ ವೈಜನಾಥ್ ಬಿರಾದಾರ್.
‘ಈ ಸಿನಿಮಾದಲ್ಲಿ ಸಮಾಜಕ್ಕೊಂದು ಸಂದೇಶ ಇದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಕಥೆ ಹೇಳುತ್ತೇವೆ. ಶೇ. 90ರಷ್ಟು ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿ ಇರುತ್ತದೆ. ಹಾಗಾಗಿ ಆ ಭಾಗದ ಕಲಾವಿದನೇ ಬೇಕಾಗಿತ್ತು. ಆಗ ಬಿರಾದಾರ್ ಅವರನ್ನು ಆಯ್ಕೆ ಮಾಡಿಕೊಂಡೆವು’ ಎಂಬುದು ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಅವರ ಮಾತು.
ನಟಿ ನೀತಾ ಅವರು ವೃತ್ತಿ ರಂಗಭೂಮಿಯಲ್ಲಿ ಚಿಕ್ಕ ವಯಸ್ಸಿನಿಂದಲೂ ಪಳಗಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಅವರಿಗೆ ಇದೆ. ಈ ಸಿನಿಮಾದಲ್ಲಿ ಬಿರಾದಾರ್ ಅವರಿಗೆ ನೀತಾ ಜೋಡಿ ಆಗಿದ್ದಾರೆ. ‘ನಾನು ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದೇನೆ. ನಾಯಕನನ್ನು ದುಶ್ಚಟಗಳಿಂದ ದೂರ ಮಾಡುತ್ತೇನೆ’ ಎಂದು ಅವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿರುವ ಬಿರಾದಾರ್ ಅವರಿಗೆ ನಟ ಧರ್ಮ ಮೆಚ್ಚುಗೆ ಸೂಚಿಸಿದ್ದಾರೆ. ನಟ ಕರಿಸುಬ್ಬು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೀರ್ ಸಮರ್ಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವು ಬೇರಗಿ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಗಾಯಕ ರವೀಂದ್ರ ಸೊರಗಾವಿ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.