Tamannaah Bhatia: ‘ಇವರೇ ನನ್ನ ಗಂಡ’: ವಿಡಿಯೋ ಮೂಲಕ ಪರಿಚಯ ಮಾಡಿಸಿದ ನಟಿ ತಮನ್ನಾ
Tamannaah Bhatia Marriage: ವಿಶೇಷವಾದ ವಿಡಿಯೋವೊಂದನ್ನು ತಮನ್ನಾ ಹಂಚಿಕೊಂಡಿದ್ದಾರೆ. ‘ಉದ್ಯಮಿ ಆಗಿರುವ ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
ನಟಿಯರ ಮದುವೆ ಬಗ್ಗೆ ಅವರ ಕುಟುಂಬದವರು ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಗಾಸಿಪ್ (Gossip) ಮಂದಿಯಂತೂ ಸದಾ ಕಾಲ ಆ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಈಗ ನಟಿ ತಮನ್ನಾ ಭಾಟಿಯಾ ಅವರ ಮದುವೆ (Tamannaah Bhatia Marriage) ಬಗ್ಗೆ ಇಲ್ಲಸಲ್ಲದ ಗಾಸಿಪ್ ಹರಡಿದೆ. ಉದ್ಯಮಿಯೊಬ್ಬರ ಜೊತೆ ತಮನ್ನಾ ಹಸೆಮಣೆ ಏರುತ್ತಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಈ ವಿಚಾರ ತಮನ್ನಾ ಭಾಟಿಯಾ (Tamannaah Bhatia) ಅವರ ಕಿವಿಗೂ ಬಿದ್ದಿದೆ. ಅದಕ್ಕೆ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇವರೇ ನೋಡಿ ನನ್ನ ಗಂಡ’ ಎಂದು ಅವರು ಪರಿಚಯ ಮಾಡಿಕೊಟ್ಟಿದ್ದಾರೆ. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ.
ಹಲವು ವರ್ಷಗಳಿಂದ ತಮನ್ನಾ ಭಾಟಿಯಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರಿಗೆ ಸಖತ್ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರು ಮದುವೆಯ ಆಲೋಚನೆ ಮಾಡುವುದು ಯಾಕೋ ಡೌಟ್. ಹಾಗಿದ್ದರೂ ಕೂಡ ಗಾಸಿಪ್ ಜೋರಾಗಿಯೇ ಹರಡುತ್ತಿದೆ. ಇದಕ್ಕೆ ತಮ್ಮದೇ ರೀತಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಹುಡುಗನ ರೀತಿಯಲ್ಲಿ ತಮನ್ನಾ ಡ್ರೆಸ್ ಮಾಡಿಕೊಂಡಿದ್ದಾರೆ. ಮುಖಕ್ಕೆ ದಪ್ಪ ಮೀಸೆ ಅಂಟಿಸಿಕೊಂಡಿದ್ದಾರೆ. ಅದೇ ಗೆಟಪ್ನಲ್ಲಿ ಬಂದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು, ‘ಉದ್ಯಮಿ ಆಗಿರುವ ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಆ ಮೂಲಕ ತಮ್ಮ ಮದುವೆ ಬಗ್ಗೆ ಗಾಸಿಪ್ ಹಬ್ಬಿಸುವವರಿಗೆ ತಮನ್ನಾ ತಿರುಗೇಟು ನೀಡಿದ್ದಾರೆ.
‘ಬಾಹುಬಲಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ ತಮನ್ನಾ ಭಾಟಿಯಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಬಾಲಿವುಡ್ನಲ್ಲೂ ಅವರು ಫೇಮಸ್ ಆಗಿದ್ದಾರೆ. ಅವರು ನಟಿಸಿದ ‘ಬಬ್ಲಿ ಬೌನ್ಸರ್’ ಸಿನಿಮಾ ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರಕ್ಕೆ ಮಧುರ್ ಭಂಡಾರ್ಕರ್ ನಿರ್ದೇಶನ ಮಾಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.
‘ನನಗೀಗ ಮದುವೆ ಆಗುವ ಮನಸ್ಸು ಇಲ್ಲ. ನನ್ನ ವೃತ್ತಿಜೀವನ ಸರಿಯಾದ ರೀತಿಯಲ್ಲಿ ಸಾಗುತ್ತಿದೆ. ಅದರ ಮೇಲೆ ನಾನು ಗಮನ ಹರಿಸಬೇಕಿದೆ’ ಎಂದು ಮಾಧ್ಯಮಗಳಿಗೆ ತಮನ್ನಾ ಈ ಮೊದಲು ಪ್ರತಿಕ್ರಿಯೆ ನೀಡಿದ್ದರು. ಆದರೂ ಅವರ ಮದುವೆ ಬಗ್ಗೆ ಪದೇಪದೇ ಗಾಸಿಪ್ ಹಬ್ಬುತ್ತಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಕೆಲವರು. ಸದ್ಯಕ್ಕಂತೂ ಮದುವೆ ಕುರಿತು ತಮನ್ನಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:03 pm, Thu, 17 November 22