ನಾನು ವಿರಾಟ್ ಕೊಹ್ಲಿ ಭೇಟಿ ಆಗಿದ್ದು ಒಮ್ಮೆ ಮಾತ್ರ: ಡೇಟಿಂಗ್ ವದಂತಿಗೆ ತಮನ್ನಾ ಉತ್ತರ
ಸೆಲೆಬ್ರಿಟಿಗಳು ಎಂದ ಮೇಲೆ ಲವ್, ಡೇಟಿಂಗ್, ಮದುವೆ ಬಗ್ಗೆ ಹಲವು ಗಾಸಿಪ್ ಹರಡುವುದು ಸಹಜ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರ ಬಗ್ಗೆಯೂ ಅನೇಕ ಅಂತೆ-ಕಂತೆಗಳು ಹರಡಿದ್ದವು. ವಿರಾಟ್ ಕೊಹ್ಲಿ, ಅಬ್ದುಲ್ ರಜಾಕ್ ಮುಂತಾದವರ ಜೊತೆ ತಮನ್ನಾ ಭಾಟಿಯಾ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು.

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಸದ್ಯಕ್ಕೆ ಸಿಂಗಲ್ ಆಗಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ನಂತರ ಬ್ರೇಕಪ್ ಮಾಡಿಕೊಂಡರು. ಹಾಗಂತ ತಮನ್ನಾ ಅವರ ಹೆಸರು ತಳುಕು ಹಾಕಿಕೊಂಡಿದ್ದು ಬರೀ ವಿಜಯ್ ವರ್ಮಾ ಜೊತೆ ಮಾತ್ರವಲ್ಲ. ಕೆಲವು ವರ್ಷಗಳ ಹಿಂದೆ ತಮನ್ನಾ ಭಾಟಿಯಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆ ಕುರಿತು ಈಗ ತಮನ್ನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್ ಹಬ್ಬಲು ಕಾರಣ ಆಗಿದ್ದು ಒಂದು ಜಾಹೀರಾತು. ಮೊಬೈಲ್ ಕಂಪನಿಯ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಅವರು ತೆರೆ ಹಂಚಿಕೊಂಡಿದ್ದರು. ಆ ಬಳಿಕ ಅವರಿಬ್ಬರು ಆಗಾಗ ಭೇಟಿ ಆಗುತ್ತಿದ್ದರು ಎಂಬ ಗಾಸಿಪ್ ಕೇಳಿಬಂದಿತ್ತು. ಆದರೆ ಅದು ನಿಜವಲ್ಲ ಎಂದು ತಮನ್ನಾ ಹೇಳಿದ್ದಾರೆ.
‘ಈ ಬಗ್ಗೆ ಕೇಳಿದಾಗ ನನಗೆ ತುಂಬ ಬೇಸರ ಆಗುತ್ತದೆ. ನಾನು ವಿರಾಟ್ ಕೊಹ್ಲಿ ಅವರನ್ನು ಒಮ್ಮೆ ಮಾತ್ರ ಭೇಟಿ ಆಗಿದ್ದು. ಆ ಶೂಟಿಂಗ್ ಮುಗಿದ ಬಳಿಕ ನಾನು ಎಂದಿಗೂ ಅವರನ್ನು ಭೇಟಿ ಮಾಡಿಲ್ಲ. ನಾನು ಅವರೊಂದಿಗೆ ಮಾತನಾಡಿಲ್ಲ, ಭೇಟಿ ಕೂಡ ಆಗಿಲ್ಲ’ ಎಂದು ತಮನ್ನಾ ಭಾಟಿಯಾ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹರಡಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಪಾಕ್ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ ತಮನ್ನಾ ಅವರಿಗೆ ಮದುವೆ ಆಗಿದೆ ಎಂದು ಸಹ ಕೆಲವರು ಗಾಸಿಪ್ ಹಬ್ಬಿಸಿದ್ದರು. ಒಂದು ಆಭರಣ ಮಳಿಗೆ ಉದ್ಘಾಟನೆ ವೇಳೆ ಅಬ್ದುಲ್ ರಜಾಕ್ ಹಾಗೂ ತಮನ್ನಾ ಭಾಟಿಯಾ ಜೊತೆಯಾಗಿ ಇರುವ ಫೋಟೋ ವೈರಲ್ ಆಗಿತ್ತು. ಗಾಸಿಪ್ ಹಬ್ಬಲು ಅದೇ ಕಾರಣ ಆಗಿತ್ತು. ಆದರೆ ಅದನ್ನು ಕೂಡ ತಮನ್ನಾ ಭಾಟಿಯಾ ಅವರು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ವಿವಾದ: ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ರಮ್ಯಾ ಅಭಿಪ್ರಾಯ ಏನು?
ತಮನ್ನಾ ಭಾಟಿಯಾ ಅವರು ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳು ಕಳೆದಿವೆ. ಈಗಲೂ ಅವರು ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೇ ಐಟಂ ಡ್ಯಾನ್ಸರ್ ಆಗಿ ಕೂಡ ಅವರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 35ರ ಪ್ರಾಯದ ತಮನ್ನಾ ಅವರು ಇನ್ನೇನು ವಿಜಯ್ ವರ್ಮಾ ಜೊತೆ ಮದುವೆ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಬ್ರೇಕಪ್ ಮಾಡಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




