ತಮಿಳುನಾಡಿನಲ್ಲಿ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶಿಸಲು ಅನುಮತಿ ನೀಡಿದ ಸಿಎಂ ವಿಜಯ್
ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿರುವ ಸಿನಿಮಾಗಳಿಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಶೇಷ ಅನುಮತಿ ನೀಡಿದ್ದಾರೆ. ಬೆಳಗಿನ 6 ಗಂಟೆಗೆ ಶೋಗಳನ್ನು ಆರಂಭಿಸಲು ಅವಕಾಶ ಕೊಡಲಾಗಿದೆ. ಇದರಿಂದ ‘ಸೀನ್’, ‘ಮೂಕುತಿ ಅಮ್ಮನ್ 2’ ಮುಂತಾದ ಸಿನಿಮಾಗಳಿಗೆ ಅನುಕೂಲ ಆಗಲಿದೆ.

ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ತಮಿಳುನಾಡಿನ ಪ್ರದರ್ಶಕರು ಹಾಗೂ ವಿತರಕರಿಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಬಿಗ್ ರಿಲೀಫ್ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರದ್ದಾಗಿದ್ದ ಮುಂಜಾನೆಯ ಶೋಗಳಿಗೆ ಮರುಜೀವ ನೀಡಲಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿರುವ ಸಿನಿಮಾಗಳಿಗೆ ಬೆಳಗಿನ 6 ಗಂಟೆಯ ಶೋಗಳನ್ನು ಪ್ರದರ್ಶಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ.
ನೂತನ ಸರ್ಕಾರಿ ಆದೇಶದ ಪ್ರಕಾರ, ಹೊಸ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2.30ರವರೆಗೆ ಪ್ರತಿದಿನ ಒಟ್ಟು 6 ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದೆ. ತಮಿಳು ಫಿಲ್ಮ್ ಆಕ್ಟಿವ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್, ತಮಿಳು ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್ ಹಾಗೂ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘವು ಮೊದಲ ವಾರ 6 ಶೋಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
2023ರಲ್ಲಿ ಅಜಿತ್ ಕುಮಾರ್ ಅಭಿನಯದ ‘ತುನಿವು’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆಯ ನಂತರ, ‘ತಮಿಳುನಾಡು ಸಿನಿಮಾಗಳ (ನಿಯಂತ್ರಣ) ನಿಯಮಗಳು 1957’ರ ಅಡಿಯಲ್ಲಿ ಮುಂಜಾನೆಯ ಶೋಗಳನ್ನು ರದ್ದುಗೊಳಿಸಲಾಗಿತ್ತು. ಕೇವಲ 4 ಶೋಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಸಿಎಂ ವಿಜಯ್ ಅವರ ಈ ನಿರ್ಧಾರದಿಂದಾಗಿ ತಮಿಳು ಚಿತ್ರರಂಗಕ್ಕೆ ದೊಡ್ಡ ಮಟ್ಟದ ಶಕ್ತಿ ಸಿಕ್ಕಂತಾಗಿದೆ. ಈ ಹೊಸ ನಿಯಮವು ಸಿನಿಮಾ ಬಿಡುಗಡೆಯ ಮೊದಲ ವಾರಕ್ಕೆ ಮಾತ್ರವಲ್ಲದೆ, ಸ್ಥಳೀಯ ಹಬ್ಬದ ದಿನಗಳು, ಸಾರ್ವಜನಿಕ ರಜಾದಿನಗಳು ಹಾಗೂ ವಾರಾಂತ್ಯಗಳಿಗೂ ಅನ್ವಯಿಸಲಿದೆ.
We made the request on 27th Oct to the Hon. Minister Thiru @imrajmohan sir and within a week, he obtained the permission from our Hon @CMOTamilnadu Thiru @TVKVijayHQ sir for the 6 am special shows – a true example for a responsive government for the welfare of its people and industries.
Thank you #CMVijay sir & thank you #Rajmohan sir for this quick response and Government Order. We at Tamil Cinema wish to express our gratitude to both of you for this great support 💐🙏
— G Dhananjheyan (@Dhananjayang) November 3, 2026
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಸಿದ್ಧ ನಿರ್ಮಾಪಕ ಮತ್ತು ವಿತರಕ ಜಿ. ಧನಂಜಯನ್, ‘ನಾವು ಅಕ್ಟೋಬರ್ 27ರಂದು ಗೌರವಾನ್ವಿತ ಸಚಿವ ರಾಜಮೋಹನ್ ಅವರಿಗೆ ಮನವಿ ಸಲ್ಲಿಸಿದ್ದೆವು. ಕೇವಲ ಒಂದು ವಾರದಲ್ಲಿ ಅವರು ಮಾನ್ಯ ಸಿಎಂ ವಿಜಯ್ ಅವರಿಂದ ಬೆಳಗಿನ 6 ಗಂಟೆಯ ಶೋಗಳಿಗೆ ಅನುಮತಿ ಕೊಡಿಸಿದ್ದಾರೆ. ಇದು ಜನರ ಹಾಗೂ ಉದ್ದಿಮೆಯ ಕಲ್ಯಾಣಕ್ಕಾಗಿ ತಕ್ಷಣ ಸ್ಪಂದಿಸುವ ಸರ್ಕಾರದ ಅತ್ಯುತ್ತಮ ಉದಾಹರಣೆಯಾಗಿದೆ. ತ್ವರಿತವಾಗಿ ಸ್ಪಂದಿಸಿ ಆದೇಶ ಹೊರಡಿಸಿದ ಸಿಎಂ ವಿಜಯ್ ಹಾಗೂ ಸಚಿವ ರಾಜಮೋಹನ್ ಅವರಿಗೆ ತಮಿಳು ಚಿತ್ರರಂಗದ ಪರವಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಜಯ್ ರೀತಿ ರಾಜಕೀಯ ಎಂಟ್ರಿಗೆ ಸಜ್ಜಾಗುತ್ತಿರುವ ನಟ ಧನುಶ್?
ಸಿಎಂ ವಿಜಯ್ ಅವರ ಈ ನಿರ್ಧಾರದಿಂದ ದೀಪಾವಳಿಗೆ ಬಿಡುಗಡೆಯಾಗಲಿರುವ ಹಲವು ಪ್ರಮುಖ ಸಿನಿಮಾಗಳಿಗೆ ಭಾರಿ ಲಾಭವಾಗಲಿದೆ. ನವೆಂಬರ್ 6ರಂದು ತೆರೆಕಾಣಲಿರುವ ಜಿತು ಮಾಧವನ್ ನಿರ್ದೇಶನದ, ಸೂರ್ಯ, ನಜ್ರಿಯಾ ನಜೀಮ್ ಹಾಗೂ ನಸ್ಲೇನ್ ಅಭಿನಯದ ‘ಸೀನ್’ ಮತ್ತು ಸುಂದರ್ ಸಿ. ನಿರ್ದೇಶನದ ನಯನತಾರ ಹಾಗೂ ರೆಜಿನಾ ಕೆಸಂಡ್ರಾ ನಟನೆಯ ‘ಮೂಕುತಿ ಅಮ್ಮನ್ 2’ ಚಿತ್ರಗಳು ನೇರವಾಗಿ ಈ ಸೌಲಭ್ಯದ ಲಾಭ ಪಡೆಯಲಿವೆ.
ಅಲ್ಲದೆ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ, ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವೂ ತಮಿಳಿನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಡಬ್ ಮಾಡಿದ ಸಿನಿಮಾಗಳಿಗೂ 6 ಶೋಗಳ ಅನುಮತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




