ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಜನ ಇದ್ದಾರೆ’
ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಸ್ಟ್ರಾಂಗ್ ಸ್ಪರ್ಧಿ ಹೌದು. ಆದರೆ ಅವರಿಗೆ ಗಿಲ್ಲಿ, ರಾಶಿಕಾ, ಧನುಶ್ ಮುಂತಾದ ಸ್ಪರ್ಧಿಗಳು ಕೂಡ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ತಮ್ಮ ಸೋಲನ್ನು ಅನೇಕರು ಬಯಸುತ್ತಿದ್ದಾರೆ ಎಂದು ಅಶ್ವಿನಿ ಗೌಡ ಅವರಿಗೆ ಅನಿಸಲು ಶುರು ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಈಗ ಅಂತಿಮ ಹಂತವನ್ನು ತಲುಪುತ್ತಿದೆ. ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಮೊದಲು ಅಗ್ರೆಸಿವ್ ಆಗಿದ್ದ ಅಶ್ವಿನಿ ಗೌಡ ಅವರು ನಂತರದ ದಿನಗಳಲ್ಲಿ ಸ್ವಲ್ಪ ಸೈಲೆಂಟ್ ಆದರು. ಟಾಸ್ಕ್ ವಿಚಾರದಲ್ಲಿ ಅವರು ಹಿಂದೆ ಬಿದ್ದಿಲ್ಲ. ಅವರು ಕೂಡ ಸ್ಟ್ರಾಂಗ್ ಸ್ಪರ್ಧಿ. ಆದರೆ ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದು ತಿಳಿಯಲು ಕೊನೆಯ ತನಕ ಕಾಯಬೇಕು. ಆದರೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಸೋಲನ್ನು ಅನೇಕರು ಬಯಸುತ್ತಿದ್ದಾರೆ ಎಂದು ಸ್ವತಃ ಅಶ್ವಿನಿ ಗೌಡ (Ashwini Gowda) ಅವರಿಗೆ ಅನಿಸಿದೆ. ಅದು ಬಹುತೇಕ ನಿಜವಾಗಿದೆ ಕೂಡ!
ಈ ಸೀಸನ್ನ ಕೊನೇ ಕ್ಯಾಪ್ಟನ್ ಯಾರು ಎಂಬುದನ್ನು ಆಯ್ಕೆ ಮಾಡಲು ಬಿಗ್ ಬಾಸ್ ಮನೆಯಲ್ಲಿ ಕೊನೇ ಟಾಸ್ಕ್ ನೀಡಲಾಯಿತು. ಅದರಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಅವರ ನಡುವೆ ಹಣಾಹಣಿ ನಡೆಯಿತು. ಇಬ್ಬರೂ ಆಟ ಆಡುವಾಗ ಕೆಲವರು ಧನುಷ್ ಅವರನ್ನು ಹುರಿದುಂಬಿಸುತ್ತಿದ್ದರು. ಇನ್ನು ಕೆಲವರು ಅಶ್ವಿನಿ ಗೌಡ ಅವರನ್ನು ಹುರಿದುಂಬಿಸಿದರು.
ಟಾಸ್ಕ್ ಮುಗಿದ ಬಳಿಕ ಅಶ್ವಿನಿ ಗೌಡ ಅವರು ಧ್ರುವಂತ್ ಜೊತೆ ಕುಳಿತು ಮಾತನಾಡಿದರು. ‘ಈ ಮನೆಯಲ್ಲಿ ನಾನು ಸೋಲಬೇಕು ಅಂತ ಬಯಸೋರು ಬಹಳ ಜನರು ಇದ್ದಾರೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ಟಾಸ್ಕ್ನಲ್ಲಿ ಧನುಶ್ ಗೆದ್ದರು. ಅಶ್ವಿನಿ ಗೌಡ ಅವರು ಸೋತು ಬೇಸರದ ಮುಖ ಮಾಡಿಕೊಂಡರು. ಆದರೆ ಒಂದು ಟ್ವಿಸ್ಟ್ ಕಾದಿತ್ತು.
ಧನುಶ್ ಅವರು ಟಾಸ್ಕ್ ಮುಗಿಸುವ ವೇಳೆಗೆ ಸಣ್ಣ ರೂಲ್ಸ್ ಬ್ರೇಕ್ ಮಾಡಿದ್ದರು. ಅದನ್ನು ಬಿಗ್ ಬಾಸ್ ಗುರುತಿಸಿ ಹೇಳಿದರು. ಆಗ ಯಾರು ಕ್ಯಾಪ್ಟನ್ ಆಗಬೇಕು ಎಂಬ ತೀರ್ಮಾನವನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಲಾಯಿತು. ಆಗ ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಅವರು ಅಶ್ವಿನಿ ಗೌಡಗೆ ಸಪೋರ್ಟ್ ಮಾಡಿದರು. ಕಾವ್ಯಾ, ಸ್ಪಂದನಾ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ಧನುಷ್ ಪರವಾಗಿ ವೋಟ್ ಮಾಡಿದರು.
ಇದನ್ನೂ ಓದಿ: ಗಿಲ್ಲಿಗೆ ಥರ್ಡ್ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್
ಹೆಚ್ಚಿನ ಸ್ಪರ್ಧಿಗಳು ಧನುಷ್ ಪರವಾಗಿ ವೋಟ್ ಮಾಡಿದ್ದರಿಂದ ಅಂತಿಮವಾಗಿ ಧನುಷ್ ಅವರೇ ಕ್ಯಾಪ್ಟನ್ ಆದರು. ಅಂದರೆ, ಅಶ್ವಿನಿ ಗೌಡ ಅವರ ಊಹೆ ನಿಜವಾಯಿತು. ಅಶ್ವಿನಿ ಸೋಲಬೇಕು ಎಂದು ಕೆಲವು ಸ್ಪರ್ಧಿಗಳು ಬಯಸಿದ್ದಾರೆ. ಆದರೆ ಜನರ ನಿರ್ಧಾರ ಏನು ಇದೆಯೋ ಇನ್ನೂ ತಿಳಿದಿಲ್ಲ. ಫಿನಾಲೆಗೆ ಯಾರೆಲ್ಲ ಬರುತ್ತಾರೆ ಹಾಗೂ ಟ್ರೋಫಿ ಯಾರ ಪಾಲಾಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




