ಸಿನಿಮಾ ಗುಣಮಟ್ಟದಲ್ಲಿ ‘ಗೌರಿಪುತ್ರ’ ಧಾರಾವಾಹಿ ಸಿದ್ಧಪಡಿಸಿದ ರಾಮ್‌ಜಿ; ನವೆಂಬರ್ 16ರಿಂದ ಪ್ರಸಾರ
ಕಿರುತೆರೆಯಲ್ಲಿ ಗುಣಮಟ್ಟದ ನಿರ್ಮಾಣಕ್ಕೆ ಒತ್ತು ನೀಡಿ ರಾಮ್‌ಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗೌರಿಪುತ್ರ’ ಧಾರಾವಾಹಿಯು ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಜನಪ್ರಿಯ ‘ಅಮೃತಧಾರೆ’ ಸೀರಿಯಲ್ ಸ್ಲಾಟ್‌ನಲ್ಲಿ ಮೂಡಿಬರಲಿರುವ ಈ ಹೊಸ ಧಾರಾವಾಹಿಯಲ್ಲಿ ಅನು ಪ್ರಭಾಕರ್ ಮತ್ತು ರಿತ್ವಿಕ್ ಅಮ್ಮ-ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಕಿರುತೆರೆ ಲೋಕದಲ್ಲಿ ಸ್ಪರ್ಧೆ ಜೋರಾಗಿದೆ. ಧಾರಾವಾಹಿಗಳ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕೆ ಜೀ ಕನ್ನಡ ಕೂಡ ಹೊರತಾಗಿಲ್ಲ. ರಾಮ್‌ಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗೌರಿಪುತ್ರ’ ಧಾರಾವಾಹಿ ಇದಕ್ಕೆ ಉತ್ತಮ ಉದಾಹರಣೆ. ನಿರ್ಮಾಣ, ಮೇಕಿಂಗ್ ವಿಷಯದಲ್ಲಿ ರಾಜಿ ಆಗದೆ ಇದನ್ನು ಸಿದ್ಧಪಡಿಸಲಾಗಿದ್ದು, ನವೆಂಬರ್ 16ರಿಂದ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಸಂಜೆ 7 ಗಂಟೆಯ ಸ್ಲಾಟ್ ಈ ಸೀರಿಯಲ್ಗೆ ಸಿಕ್ಕಿದ್ದು ವಾರದ ಏಳೂ ದಿನ ಧಾರಾವಾಹಿ ಪ್ರಸಾರ ಕಾಣಲಿದೆ ಅನ್ನೋದು ವಿಶೇಷ.
‘ಅಮೃತಧಾರೆ’ ಧಾರಾವಾಹಿಯನ್ನು ಪೂರ್ಣಗೊಳಿಸಿ ಆ ಸ್ಲಾಟ್ಗೆ ‘ಗೌರಿಪುತ್ರ’ ತರುತ್ತಿರುವ ಬಗ್ಗೆ ಮಾಹಿತಿ ನೀಡಿದ ಜೀ ಕನ್ನಡದ ಬಿಸ್ನೆಸ್ ಹೆಡ್ ದೀಪಕ್ ಶ್ರೀರಾಮುಲು, ‘ಇತ್ತೀಚೆಗೆ ಪ್ರಸಾರ ಆರಂಭಿಸಿದ ಜಗದ್ಧಾತ್ರಿ ಧಾರಾವಾಹಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈಗ ಗೌರಿಪುತ್ರ ಧಾರಾವಾಹಿ ಮೂಲಕ ನಿಮ್ಮ ಎದುರು ಬರುತ್ತಿದ್ದೇವೆ’ ಎಂದರು.
‘ಅಮೃತಧಾರೆ ಧಾರಾವಾಹಿ ಟೈಮ್ಗೆ ಈ ಧಾರಾವಾಹಿಯನ್ನು ತರುತ್ತಿದ್ದೇವೆ. ಆ ಧಾರಾವಾಹಿ ಈಗಾಗಲೇ ಜನರ ಮನಸ್ಸಿನಲ್ಲಿ ಕೂತಿದೆ. ಗೌತಮ್ ಹಾಗೂ ಭೂಮಿಕಾ ಜೋಡಿ ಫೇವರಿಟ್. ಆ ಸ್ಲಾಟ್ಗೆ ಹೊಸ ಧಾರಾವಾಹಿ ತರಬೇಕು ಎಂದರೆ ಅದು ಅಮೃತಧಾರೆ ಧಾರಾವಾಹಿಯನ್ನು ಮೀರಿಸುವಂತೆ ಇರಬೇಕು. ಗೌರಿಪುತ್ರ ಧಾರಾವಾಹಿಯ ಕಥೆ ಹಾಗಿದೆ. ಇದು ಜನರಿಗೆ ಇಷ್ಟ ಆಗಲಿದೆ’ ಎಂದರು ಅವರು.
View this post on Instagram
ಈ ಧಾರಾವಾಹಿಯಲ್ಲಿ ಅನು ಪ್ರಭಾಕರ್ ಅವರು ಗೌರಿ ಹೆಸರಿನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಹಲವು ವರ್ಷಗಳ ಬಳಿಕ ಕಿರುತೆರೆಗೆ ಮರಳಿದ್ದೇನೆ. ಧಾರಾವಾಹಿ ಎಂದಾಗ ಸಾಕಷ್ಟು ಕೆಲಸ ಇರುತ್ತದೆ. ಹೀಗಾಗಿ ಇದನ್ನು ಮಾಡಲೋ ಅಥವಾ ಬೇಡವೋ ಎಂಬ ಆಲೋಚನೆಯಲ್ಲಿ ಇದ್ದೆ. ಆಗ ನನ್ನ ಪತಿ ರಘು ಮುಖರ್ಜಿ ಅವರು ನನಗೆ ಧೈರ್ಯ ತುಂಬಿದರು. ಅದಕ್ಕಾಗಿ ನಾನು ಈ ಸೀರಿಯಲ್ ಒಪ್ಪಿಕೊಂಡೆ’ ಎನ್ನುತ್ತಾರೆ ಅವರು.
ಇದನ್ನೂ ಓದಿ: ಜೀ ಕನ್ನಡದಲ್ಲಿ ಹೊಸ ಧಾರಾವಾಹಿ; ರಿತ್ವಿಕ್ ಕೃಪಾಕರ್ ಹಾಗೂ ಅನು ಪ್ರಭಾಕರ್ ಅಭಿನಯದ ‘ಗೌರಿಪುತ್ರ’ ಶೀಘ್ರದಲ್ಲೇ ಪ್ರಾರಂಭ
ಈ ಸೀರಿಯಲ್ಗೆ ರಿತ್ವಿಕ್ ಹೀರೋ. ‘8 ತಿಂಗಳು ನಾನು ಖಾಲಿ ಕುಳಿತಿದ್ದೆ. ಆಗ ಜೀ ಕನ್ನಡ ನನಗೆ ಬೆಂಬಲವಾಗಿ ನಿಂತಿತು. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಧೈರ್ಯ ತುಂಬಿದರು’ ಎಂದು ರಿತ್ವಿಕ್ ಹೇಳಿದ್ದಾರೆ. ಈ ಧಾರಾವಾಹಿಗೆ ಮಹತಿ ನಾಯಕಿ. ಈ ಸೀರಿಯಲ್ನಲ್ಲಿ ಹಿರಿಯ ನಟ ರಮೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಗುಣಮಟ್ಟ ಸಿನಿಮಾ ರೇಂಜ್ನಲ್ಲಿದೆ ಎನ್ನುವ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:05 pm, Thu, 12 November 26




