‘ದೀದಿ ನಂಬರ್ 1’ ಶೋಗೆ ರಚನಾ ಬ್ಯಾನರ್ಜಿ ವಿದಾಯ? ಮತ್ತೊಬ್ಬ ನಾಯಕಿಗೆ ಆಫರ್ ನೀಡಿದ ವಾಹಿನಿ
‘ದೀದಿ ನಂಬರ್ 1’ ರಿಯಾಲಿಟಿ ಶೋ ಅನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನಟಿ ರಚನಾ ಬ್ಯಾನರ್ಜಿ ಅವರು ಈಗ ಹೊರನಡೆದಿದ್ದಾರೆ. ಈ ಬದಲಾವಣೆಯ ಹಿಂದೆ ರಾಜಕೀಯದ ಕಾರಣ ಇದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಸತ್ಯಾಸತ್ಯತೆ ತಿಳಿಯಲು ವಾಹಿನಿಯ ಅಧಿಕೃತ ಪ್ರಕಟಣೆಯವರೆಗೂ ಕಾಯಬೇಕಾಗಿದೆ.

ಬಂಗಾಳಿ ಕಿರುತೆರೆಯ ಅತ್ಯಂತ ಜನಪ್ರಿಯ ‘ದೀದಿ ನಂಬರ್ 1’ (Didi No. 1) ರಿಯಾಲಿಟಿ ಶೋನಿಂದ ನಟಿ ರಚನಾ ಬ್ಯಾನರ್ಜಿ (Rachana Banerjee) ಅವರನ್ನು ಬೇರ್ಪಡಿಸಿ ನೋಡುವುದು ಕಷ್ಟ. ಆದರೆ, ಈಗ ಕೇಳಿಬರುತ್ತಿರುವ ಲೇಟೆಸ್ಟ್ ಸುದ್ದಿಯೊಂದರ ಪ್ರಕಾರ, ರಚನಾ ಬ್ಯಾನರ್ಜಿ ಅವರು ಈ ಶೋನಿಂದ (Reality Show) ಹೊರನಡೆಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ವಾಹಿನಿಯು ಅವರ ಜಾಗಕ್ಕೆ ಚಿತ್ರರಂಗದ ಮತ್ತೊಬ್ಬ ಯುವ ನಾಯಕಿಯನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
2010ರಿಂದ ಆರಂಭವಾದ ‘ದೀದಿ ನಂಬರ್ 1’ ಶೋಗೆ ರಚನಾ ಬ್ಯಾನರ್ಜಿ ಅವರು 2011ರಲ್ಲಿ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದರು. ಸೀಸನ್ 3 ಮತ್ತು 2013ರಲ್ಲಿ ಬೇರೆಯವರು ಶೋ ನಡೆಸಿಕೊಟ್ಟಿದ್ದನ್ನು ಬಿಟ್ಟರೆ, 2014ರಿಂದ 2026ರವರೆಗೆ ಅಂದರೆ ಸುಮಾರು 12 ವರ್ಷಗಳ ಕಾಲ ರಚನಾ ಬ್ಯಾನರ್ಜಿ ಅವರೇ ಸತತವಾಗಿ ಈ ಶೋ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಶೋನ ಅತಿ ಹೆಚ್ಚು ಎಪಿಸೋಡ್‌ಗಳನ್ನು ಶೂಟ್ ಮಾಡಿದ ಹೆಗ್ಗಳಿಕೆಯೂ ಅವರದ್ದಾಗಿದೆ.
2024ರ ಮಾರ್ಚ್‌ನಲ್ಲಿ ರಚನಾ ಅವರ ಕರೆಯ ಮೇರೆಗೆ ಮಮತಾ ಬ್ಯಾನರ್ಜಿ ಅವರು ಈ ಶೋಗೆ ಅತಿಥಿಯಾಗಿ ಆಗಮಿಸಿದ್ದರು. ಶೋನಲ್ಲಿ ಮಮತಾ ಬ್ಯಾನರ್ಜಿ ಅವರು ರೊಟ್ಟಿ ಲಟ್ಟಿಸುತ್ತಿದ್ದ ವಿಡಿಯೋ ಆಗ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಚನಾ ಅವರಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ಸಿಕ್ಕು, ಅವರು ಸಂಸದರಾಗಿಯೂ ಆಯ್ಕೆಯಾಗಿದ್ದರು.
ಆದರೆ ಇತ್ತೀಚಿನ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ ನಂತರ, ಪಕ್ಷದ ಬಂಡಾಯ ಸಂಸದರ ಪಟ್ಟಿಯಲ್ಲಿ ರಚನಾ ಬ್ಯಾನರ್ಜಿ ಅವರ ಹೆಸರು ಕೇಳಿಬರುತ್ತಿದೆ. ಸದ್ಯ ಅವರು ನಗರದಿಂದ ಹೊರಗೆ ರಜಾದಿನಗಳನ್ನು ಕಳೆಯುತ್ತಿದ್ದು, ಇದೇ ಸಮಯದಲ್ಲಿ ಅವರು ಶೋನಿಂದ ಹೊರನಡೆಯುತ್ತಿರುವ ಸುದ್ದಿ ಕಿರಿತೆರೆಯಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ‘ಮಹಾನ್ ಕಿಲಾಡಿ’ ರಿಯಾಲಿಟಿ ಶೋ ಆರಂಭಿಸಿದ ಮಿಂಚು: ಏನಿದರ ವಿಶೇಷ?
ರಚನಾ ಬ್ಯಾನರ್ಜಿ ಅವರ ನಿರ್ಗಮನದ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಶೋ ನಿರ್ದೇಶಕ ಅಭಿಜಿತ್ ಸೇನ್ ಅಥವಾ ಸ್ವತಃ ರಚನಾ ಬ್ಯಾನರ್ಜಿ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಟಿವಿ9 ಬಾಂಗ್ಲಾ ವರದಿ ಮಾಡಿದೆ. ರಚನಾ ಬದಲಿಗೆ ಖ್ಯಾತ ಹೊಸ ನಟಿಯೊಬ್ಬರಿಗೆ ವಾಹಿನಿಯು ಈ ಶೋ ನಡೆಸಿಕೊಡಲು ಆಫರ್ ನೀಡಿದ್ದು, ಮಾತುಕತೆಗಳು ಬಹುತೇಕ ಅಂತಿಮ ಹಂತ ತಲುಪಿವೆ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




