‘ಬಿಗ್ ಬಾಸ್ ಮೇಲೆ ಕೇಸ್ ಹಾಕ್ತೀನಿ’: ಬೆದರಿಕೆ ಹಾಕಿ ಎಲಿಮಿನೇಟ್ ಆದ ಸ್ಪರ್ಧಿ
ಬಿಗ್ ಬಾಸ್ಗೆ ಎಲ್ಲ ಸ್ಪರ್ಧಿಗಳು ಗೌರವ ನೀಡುತ್ತಾರೆ. ಬಿಗ್ ಬಾಸ್ ಹೇಳಿದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಕೆಲವು ಸ್ಪರ್ಧಿಗಳು ಉದ್ಧಟತನ ತೋರುತ್ತಾರೆ. ಶೋ ಬಗ್ಗೆ ಗೌರವ ಇಲ್ಲದ ವ್ಯಕ್ತಿಗಳನ್ನು ಮುಲಾಜಿಲ್ಲದೇ ಮನೆಗೆ ಕಳಿಸಲಾಗುತ್ತದೆ. ‘ಬಿಗ್ ಬಾಸ್ 18’ ಕಾರ್ಯಕ್ರಮದಲ್ಲಿ ನಟಿ, ನಿರೂಪಕಿ ಸಾರಾ ಅರ್ಫೀನ್ ಖಾನ್ಗೆ ಮನೆ ದಾರಿ ತೋರಿಸಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಜಗದೀಶ್ ಅವರು ಶೋ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡಿದ್ದರು. ಬಳಿಕ ಅವರನ್ನು ದೊಡ್ಮನೆಯಿಂದ ಹೊರಗೆ ಹಾಕಲಾಗಿತ್ತು. ಹಿಂದಿ ‘ಬಿಗ್ ಬಾಸ್ 18’ ಶೋನಲ್ಲೂ ಇದೇ ರೀತಿಯ ಘಟನೆ ನಡೆದಿದೆ. ನಟಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸಾರಾ ಅರ್ಫೀನ್ ಖಾನ್ ಅವರು ಎಲಿಮಿನೇಟ್ ಆಗಿದ್ದಾರೆ. ಶೋ ವಿರುದ್ಧವೇ ಅವರು ಕೇಸ್ ಹಾಕುವುದಾಗಿ ಬೆದರಿಸಿದ್ದರು. ಈ ವಾರ ಅವರಿಗೆ ವೀಕ್ಷಕರಿಂದ ಕಡಿಮೆ ವೋಟ್ ಬಂದ ಕಾರಣ ಎಲಿಮಿನೇಟ್ ಮಾಡಲಾಗಿದೆ.
ಇತ್ತೀಚೆಗೆ ಒಂದು ಟಾಸ್ಕ್ ವೇಳೆ ಸಾರಾ ಅರ್ಫೀನ್ ಖಾನ್ ಅವರು ಅನರ್ಹರಾದರು. ಇದರಿಂದ ಅವರಿಗೆ ಕೋಪ ಬಂತು. ಇನ್ನುಳಿದ ಸ್ಪರ್ಧಿಗಳನ್ನು ಅವರು ತಳ್ಳಾಡಿದರು. ಅವರ ವರ್ತನೆಯಿಂದ ಗಲಾಟೆ ಶುರುವಾಯಿತು. ಬೇರೆ ಸ್ಪರ್ಧಿಗಳಿಗೆ ಪೆಟ್ಟಾಗಲು ಕೂಡ ಶುರುವಾಯಿತು. ಆಗ ಕರಣ್ ವೀರ್ ಮೆಹ್ರಾ ಅವರು ಬಂದು ಸಾರಾನ ತಡೆಯಲು ಪ್ರಯತ್ನಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಊಟದಲ್ಲಿ ಹುಳ; ಕಂಗಾಲಾದ ರಜತ್, ಮೋಕ್ಷಿತಾ
ಕರಣ್ ವೀರ್ ಮೆಹ್ರಾ ಮಧ್ಯ ಪ್ರವೇಶಿಸಿದ್ದರಿಂದ ಸಾರಾ ಅರ್ಫೀನ್ ಖಾನ್ ವಿಪರೀತ ಸಿಟ್ಟು ಮಾಡಿಕೊಂಡರು. ಈ ವೇಳೆ ಅವರು ಕೆಳಗೆ ಬಿದ್ದರು. ತಾವು ಬೀಳಲು ಕರಣ್ ಕಾರಣ ಎಂದು ಸಾರಾ ಆರೋಪ ಮಾಡಿದರು. ‘ಕರಣ್ ನನ್ನ ಮೇಲೆ ಕೈ ಮಾಡಿದ್ದಾನೆ. ಆತನ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾನು ನನ್ನ ಲಾಯರ್ ಸಂಪರ್ಕ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಸಾಮಾನ್ಯವಾಗಿ ಯಾವ ಸ್ಪರ್ಧಿ ಕೂಡ ಬಿಗ್ ಬಾಸ್ ವಿರುದ್ಧವೇ ಕೇಸ್ ಹಾಕುವ ಬಗ್ಗೆ ಮಾತನಾಡುವುದಿಲ್ಲ. ಆದರೆ ಸಾರಾ ಅರ್ಫೀನ್ ಖಾನ್ ಅವರು ಆ ಹಂತಕ್ಕೆ ಹೋಗಿದ್ದಾರೆ. ಆದ್ದರಿಂದ ಅವರನ್ನು ಹೊರಗೆ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ 18’ ಶೋ ನಡೆಸಿಕೊಡುತ್ತಿದ್ದಾರೆ. ಈ ಮೊದಲು ಕೂಡ ತಮ್ಮ ಶೋ ಬಗ್ಗೆ ಕೀಳಾಗಿ ಮಾತನಾಡಿದ್ದ ಸ್ಪರ್ಧಿಗಳಿಗೆ ಸಲ್ಮಾನ್ ಖಾನ್ ಅವರು ತಕ್ಕ ಪಾಠ ಕಲಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.