ಟಿವಿಯಲ್ಲಿ ಬರ್ತಿದೆ ಶಿವಣ್ಣನ ‘ಭಜರಂಗಿ 2’ ಚಿತ್ರ; ಪ್ರಸಾರದ ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ
Bhajarangi 2 | Zee Kannada: ಹತ್ತು ಹಲವು ಕಾರಣಗಳಿಂದಾಗಿ ಗಮನ ಸೆಳೆದ ‘ಭಜರಂಗಿ 2’ ಸಿನಿಮಾ ಈಗ ಜೀ ಕನ್ನಡದಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಮನೆಯಲ್ಲೇ ಕುಳಿತು ಈ ಚಿತ್ರ ನೋಡಲು ಶಿವರಾಜ್ಕುಮಾರ್ ಅಭಿಮಾನಿಗಳು ಕಾದಿದ್ದಾರೆ.
2021, ಅಕ್ಟೋಬರ್ 29ರ ದಿನವನ್ನು ಕನ್ನಡ ಚಿತ್ರರಂಗ ಮರೆಯಲು ಸಾಧ್ಯವಿಲ್ಲ. ಅಂದು ಶಿವರಾಜ್ಕುಮಾರ್ (Shivarajkumar) ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ ಸಿನಿಮಾ ಬಿಡುಗಡೆ ಆಗಿತ್ತು. ಎಲ್ಲ ಕಡೆಗಳಲ್ಲಿ ಆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಆದರೆ ಆ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಅದೇ ದಿನ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಚಿತ್ರಮಂದಿರದಲ್ಲಿ ಶಿವಣ್ಣನ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಗೆ ಇಂಥ ಆಘಾತದ ಸುದ್ದಿ ಕಾದಿತ್ತು. ಪುನೀತ್ ನಿಧನರಾಗಿ ಹಲವು ದಿನಗಳು ಕಳೆದ ಬಳಿಕವೂ ಥಿಯೇಟರ್ ಕಡೆಗೆ ಹೋಗಲು ಅನೇಕರ ಮನಸ್ಸು ಒಪ್ಪಲಿಲ್ಲ. ಹಾಗಾಗಿ ಚಿತ್ರಮಂದಿರದಲ್ಲಿ ‘ಭಜರಂಗಿ 2’ (Bhajarangi 2) ಸಿನಿಮಾವನ್ನು ಮಿಸ್ ಮಾಡಿಕೊಂಡವರೇ ಹೆಚ್ಚು. ನಂತರ ಆ ಚಿತ್ರ ಜೀ5 ಒಟಿಟಿ ಮೂಲಕ ಆನ್ಲೈನ್ನಲ್ಲಿ ವೀಕ್ಷಣೆಗೆ ಲಭ್ಯವಾಯಿತು. ಈಗ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ‘ಭಜರಂಗಿ 2’ ಸಿನಿಮಾದ ಪ್ರಸಾರಕ್ಕೆ ದಿನಾಂಕ ಮತ್ತು ಸಮಯ ನಿಗದಿ ಆಗಿದೆ. ಜ.23ರಂದು ಭಾನುವಾರ ಸಂಜೆ 7 ಗಂಟೆಗೆ ಈ ಚಿತ್ರ ಪ್ರಸಾರ ಆಗಲಿದೆ.
ಹತ್ತು ಹಲವು ಕಾರಣಗಳಿಂದಾಗಿ ‘ಭಜರಂಗಿ 2’ ಸಿನಿಮಾ ಗಮನ ಸೆಳೆದಿದೆ. ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್ಕುಮಾರ್ ಅವರು ಜೊತೆಯಾಗಿ ಕೆಲಸ ಮಾಡಿದ ಮೂರನೇ ಸಿನಿಮಾ ಇದು. ‘ಭಜರಂಗಿ’, ‘ವಜ್ರಕಾಯ’ ಬಳಿಕ ಅವರಿಬ್ಬರ ಕಾಂಬಿನೇಷನ್ನಲ್ಲಿ ಈ ಚಿತ್ರ ಮೂಡಿಬಂತು. ಬೃಹತ್ ಸೆಟ್ಗಳು ಕೂಡ ಈ ಸಿನಿಮಾದ ಇನ್ನೊಂದು ಹೈಲೈಟ್. ಅದ್ದೂರಿ ಮೇಕಿಂಗ್ ಕಾರಣದಿಂದಲೂ ಈ ಚಿತ್ರ ಸದ್ದು ಮಾಡಿತು.
ಘಟಾನುಘಟಿ ಕಲಾವಿದರು ‘ಭಜರಂಗಿ 2’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶಿವರಾಜ್ಕುಮಾರ್ ಅವರಿಗೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಶಿವರಾಜ್ ಕೆ.ಆರ್. ಪೇಟೆ, ಕುರಿ ಪ್ರತಾಪ್ ಮುಂತಾದವರ ಅಭಿನಯದಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ಈ ಎಲ್ಲ ಕಲಾವಿದರಿಗೂ ಡಿಫರೆಂಟ್ ಗೆಟಪ್ ಇದೆ. ಆ್ಯಕ್ಷನ್ ದೃಶ್ಯಗಳು ಗಮನ ಸೆಳೆಯುವಂತಿವೆ.
‘ಭಜರಂಗಿ 2’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಬಳಿಕ ಒಟಿಟಿಗೆ ಕಾಲಿಟ್ಟಿತು. ಡಿ.23ರಂದು ಜೀ5ನಲ್ಲಿ ವೀಕ್ಷಣೆಗೆ ಲಭ್ಯವಾಗಿತ್ತು. ಮೂರೇ ದಿನಗಳಲ್ಲಿ 5 ಕೋಟಿ ನಿಮಿಷಗಳನ್ನು ವೀವ್ಸ್ ಆಗಿದ್ದು ಈ ಚಿತ್ರದ ಹೆಚ್ಚುಗಾರಿಕೆ. ನಂತರ 10 ಕೋಟಿ ನಿಮಿಷಗಳಿಗೂ ಅಧಿಕ ವೀಕ್ಷಣೆ ಕಂಡಿತು. ಇಂಥ ಜನಮೆಚ್ಚಿದ ಚಿತ್ರ ಈಗ ಜೀ ಕನ್ನಡ ವಾಹಿನಿ ಮೂಲಕ ಮನೆಮನೆಗೆ ತಲುಪುತ್ತಿದೆ. ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿರುವ ‘ಭಜರಂಗಿ 2’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರ ಪುನೀತ್ ರಾಜ್ಕುಮಾರ್ಗೆ ಅರ್ಪಣೆ:
‘ಭಜರಂಗಿ 2’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುವ ಸಂದರ್ಭದಲ್ಲಿ ಈ ಚಿತ್ರವನ್ನು ತಾವು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿರುವುದಾಗಿ ಶಿವಣ್ಣ ಹೇಳಿದ್ದರು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಅವರು, ‘ನನ್ನ ನಟನೆಯ ‘ಭಜರಂಗಿ 2’ ಸಿನಿಮಾ ಜೀ5ನಲ್ಲಿ ರಿಲೀಸ್ ಆಗುತ್ತಿದೆ. ನಾನು ಹಾಗೂ ನನ್ನ ತಂಡ ಈ ಸಿನಿಮಾವನ್ನು ಅಪ್ಪುಗೆ ಡೆಡಿಕೇಟ್ ಮಾಡುತ್ತೇವೆ. ಇದು ಅಪ್ಪು ಎಡಿಟಿಂಗ್ ರೂಮ್ನಲ್ಲೇ ಎಡಿಟ್ ಮಾಡಿದ ಚಿತ್ರ. ಸಾಕಷ್ಟು ಬಾರಿ ಅವನು ಸಿನಿಮಾದ ದೃಶ್ಯ ನೋಡಿ ಮೆಚ್ಚುಗೆಯ ಮಾತನಾಡಿದ್ದ. ಪ್ರೀ ರಿಲೀಸಿಂಗ್ ಇವೆಂಟ್ಗೂ ಅಪ್ಪು ಬಂದು ಬೆಂಬಲಿಸಿದ್ದರು. ಡ್ಯಾನ್ಸ್ ಮಾಡಿದ್ದರು. ರಿಲೀಸ್ ಆದ ದಿನವೂ ಬೆಳಗ್ಗೆ ಟ್ವೀಟ್ ಮಾಡಿ ಶುಭಕೋರಿದ್ದರು. ಸಿನಿಮಾದ ಸಾಕಷ್ಟು ದೃಶ್ಯಗಳು ಅಪ್ಪು ಅವರನ್ನು ನೆನಪಿಸುತ್ತವೆ’ ಎಂದು ಹೇಳಿದ್ದರು.
ಇದನ್ನೂ ಓದಿ:
‘ಜೇಮ್ಸ್’ ಚಿತ್ರದಲ್ಲಿ ಪುನೀತ್, ಶಿವಣ್ಣ, ರಾಘಣ್ಣ; ಫ್ಯಾನ್ಸ್ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್
ಸಂಕ್ರಾಂತಿ ಹಬ್ಬದಲ್ಲಿ ಪುನೀತ್ ರಾಜ್ಕುಮಾರ್ ನೆನಪು; ಫ್ಯಾನ್ಸ್ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ