Bombat Bhojana: ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಬೊಂಬಾಟ್ ಭೋಜನ ಸೀಸನ್ 3’ ಶುರು; ಇದರಲ್ಲಿದೆ 7 ವಿಶೇಷಗಳು
Sihi Kahi Chandru | Bombat Bhojana Season 3: ಹೊಸ ರೂಪದೊಂದಿಗೆ ‘ಬೊಂಬಾಟ್ ಭೋಜನ ಸೀಸನ್ 3’ ಕಾರ್ಯಕ್ರಮ ವೀಕ್ಷಕರ ಮುಂದೆ ಬಂದಿದೆ. ಸಿಹಿ ಕಹಿ ಚಂದ್ರು ಅವರು ಈ ಶೋ ನಡೆಸಿಕೊಡುತ್ತಿದ್ದಾರೆ.
ಕಿರುತೆರೆ ಲೋಕದಲ್ಲಿ ಬಗೆಬಗೆಯ ಕಾರ್ಯಕ್ರಮಗಳು ಮೂಡಿಬರುತ್ತಿವೆ. ‘ಸ್ಟಾರ್ ಸುವರ್ಣ’ (Star Suvarna)ವಾಹಿನಿಯ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಹಾಗೆಯೇ ಅಡುಗೆಗೆ ಸಂಬಂಧಿಸಿದ ಕಾರ್ಯಕ್ರಮ ಕೂಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ವಿವಿಧ ಖಾದ್ಯಗಳ ಬಗ್ಗೆ ತಿಳಿಸಿಕೊಡುವುದರ ಜೊತೆ ಜೊತೆಗೆ ಹಲವು ಬಗೆಯ ಮನರಂಜನೆ ಮತ್ತು ಮಾಹಿತಿ ನೀಡುವುದು ‘ಬೊಂಬಾಟ್ ಭೋಜನ’ (Bombat Bhojana) ಕಾರ್ಯಕ್ರಮದ ವಿಶೇಷ. ಈ ಶೋಗೆ ಜನಮೆಚ್ಚುಗೆ ಸಿಕ್ಕಿದೆ. ಅದರ ಪರಿಣಾಮವಾಗಿ ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮೂರನೇ ಸೀಸನ್ ಆರಂಭ ಆಗಿದೆ. ವೀಕ್ಷಕರ ಅಚ್ಚುಮೆಚ್ಚಿನ ಈ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸಿಹಿ-ಕಹಿ ಚಂದ್ರು (Sihi Kahi Chandru) ಮತ್ತು ಅವರ ತಂಡದವರು ಇದರಲ್ಲಿ ಪಾಲ್ಗೊಂಡರು.
ಸಿನಿಮಾ ನಟನಾಗಿ ಪ್ರೇಕ್ಷಕರ ಮನಗೆದ್ದ ಸಿಹಿ ಕಹಿ ಚಂದ್ರು ಅವರು ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ವೀಕ್ಷಕರಿಗೆ ಹತ್ತಿರ ಆಗಿದ್ದಾರೆ. ‘ಬೊಂಬಾಟ್ ಭೋಜನ’ ಶೋ ಮೂಲಕ ರುಚಿಕರ ಅಡುಗೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದಾರೆ. ‘ಸ್ಟಾರ್ ಸುವರ್ಣ’ ಚಾನೆಲ್ನಲ್ಲಿ ಎರಡು ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಈ ಜನಪ್ರಿಯ ಕಾರ್ಯಕ್ರಮದ ಮೂರನೇ ಸೀಸನ್ ಈಗ ಶುರುವಾಗಿದೆ.
‘ಬೊಂಬಾಟ್ ಭೋಜನ’ ಕಾರ್ಯಕ್ರಮದ ಮೊದಲ ಸೀಸನ್ ಆರಂಭ ಆಗಿದ್ದು 2019ರಲ್ಲಿ. ಅದಕ್ಕೆ ಸಿಕ್ಕ ಜನಮನ್ನಣೆಯಿಂದ ಎರಡನೇ ಆವೃತ್ತಿ ಕೂಡ ಯಶಸ್ವಿಯಾಗಿ ಮೂಡಿಬಂತು. ಈಗ 3ನೇ ಸೀಸನ್ನಲ್ಲಿ ಕಾರ್ಯಕ್ರಮವನ್ನು ಇನ್ನೂ ಆಕರ್ಷಕವಾಗಿ ವೀಕ್ಷಕರ ಎದುರು ತರಲಾಗುತ್ತಿದೆ. ಆ ಕುರಿತು ಸಿಹಿ ಕಹಿ ಚಂದ್ರು ಮಾತನಾಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸಾಹಿತಿ ದುಂಡಿರಾಜ್, ಸಿಹಿ ಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಮುಂತಾದವರು ಹಾಜರಿದ್ದರು.
ಇದನ್ನೂ ಓದಿ: ತುಂಬು ಗರ್ಭಿಣಿ ನಟಿ ಮಯೂರಿಗೆ ಹಲ್ವಾ ಜಜರತ್ ತಿನ್ನಿಸಿದ ಹಾಸ್ಯ ನಟ ಸಿಹಿ ಕಹಿ ಚಂದ್ರು..!
‘3ನೇ ಸೀಸನ್ ಆರಂಭವಾಗಿದೆ. ಈ ಸೀಸಸ್ನಲ್ಲಿ ಬಯಲೂಟ, ಸವಿಯೂಟ, ಮನೆ ಊಟ, ಅಂದ ಚಂದ, ಅಂಗೈಯಲ್ಲಿ ಆರೋಗ್ಯ, ಟಿಪ್ ಟಿಪ್ ಟಿಪ್ ಮತ್ತು ಅತಿಥಿ ದೇವೋಭವ ಎಂಬ 7 ರೀತಿಯ ವಿಶೇಷತೆಗಳು ಇವೆ. ಪ್ರತಿ ವಿಚಾರಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ನೀಡುತ್ತಾರೆ. ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾಕ್ಟರ್ ಗೌರಿ ಸುಬ್ರಹ್ಮಣ್ಯ ತಿಳಿಸಿಕೊಡುತ್ತಾರೆ’ ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ.
ಇದನ್ನೂ ಓದಿ: New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು
‘ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ. ಸೋಮವಾರದಿಂದ ಶನಿವಾರದ ತನಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ‘ಬೊಂಬಾಟ್ ಭೋಜನ’ 3ನೇ ಆವೃತ್ತಿಯ ಸಂಚಿಕೆಗಳು ಬಿತ್ತರ ಆಗುತ್ತಿವೆ’ ಎಂದಿದ್ದಾರೆ ಸಿಹಿಕಹಿ ಚಂದ್ರು. ‘ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿವೆ’ ಎಂದು ಡಾಕ್ಟರ್ ಗೌರಿ ಸುಬ್ರಹ್ಮಣ್ಯ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಬೊಂಬಾಟ್ ಭೋಜನ ಸೀಸನ್ 3’ ಕಾರ್ಯಕ್ರಮ ವಿಶೇಷ ಎನಿಸಿಕೊಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Sun, 22 January 23