Vanshika: ವಂಶಿಕಾ ಈಗ ನಿರೂಪಕಿ; ‘ನನ್ನಮ್ಮ ಸೂಪರ್ ಸ್ಟಾರ್ 2’ ಶೋ ನಡೆಸಿಕೊಡಲಿರುವ ಮಿನಿ ಪಟಾಕಿ
Nannamma Superstar 2: ವಂಶಿಕಾ ನಿರೂಪಕಿಯಾಗಿ ಆಯ್ಕೆ ಆಗಿರುವುದಕ್ಕೆ ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಬೇರೆ ಮಕ್ಕಳಿಗೂ ಅವಕಾಶ ಕೊಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಕನ್ನಡದ ಕಿರುತೆರೆಯಲ್ಲಿ ವಂಶಿಕಾ ಅಂಜನಿ ಕಶ್ಯಪ್ (Vanshika Anjani Kashyapa) ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾಳೆ. ಮಾಸ್ಟರ್ ಆನಂದ್ ಪುತ್ರಿ ಎಂಬ ಟ್ಯಾಗ್ ಆಕೆಗೆ ಇತ್ತು. ಆದರೆ ಅದು ಬದಲಾಗುವ ರೀತಿಯಲ್ಲಿ ಅವಳು ಸ್ವಂತವಾಗಿ ಗುರುತಿಸಿಕೊಂಡಿದ್ದಾಳೆ. ಈಗ ವಂಶಿಕಾ ಎಂದರೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ‘ಕಲರ್ಸ್ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಆಕೆಗೆ ಭರಪೂರ ಜನಪ್ರಿಯತೆ ಸಿಕ್ಕಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲೂ ವಂಶಿಕಾ ಧೂಳೆಬ್ಬಿಸಿದಳು. ಈ ಎರಡೂ ಶೋಗಳನ್ನು ವಿನ್ ಆಗಿರುವ ಆಕೆಗೆ ಈಗ ನಿರೂಪಕಿಯಾಗಿ ಬಡ್ತಿ ಸಿಗುತ್ತಿದೆ! ಹೌದು, ‘ನನ್ನಮ್ಮ ಸೂಪರ್ ಸ್ಟಾರ್ 2’ (Nannamma Superstar 2) ನಿರೂಪಣೆ ಮಾಡಲು ವಂಶಿಕಾ ಸಜ್ಜಾಗುತ್ತಿದ್ದಾಳೆ. ಶೀಘ್ರದಲ್ಲೇ ಈ ಶೋ ಆರಂಭ ಆಗಲಿದೆ. ವಂಶಿಕಾಗೆ ನಿರಂಜನ್ ದೇಶಪಾಂಡೆ (Niranjan Deshpande) ಸಾಥ್ ನೀಡಲಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್’ ಮೊದಲ ಸೀಸನ್ ಅನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಆದರೆ ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿಯಾಗಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ನೀಡಿರುವುದರಿಂದ ‘ನನ್ನಮ್ಮ ಸೂಪರ್ ಸ್ಟಾರ್ 2’ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನಕ್ಕೆ ವಂಶಿಕಾ ಮತ್ತು ನಿರಂಜನ್ ದೇಶಪಾಂಡೆ ಬಂದಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವಂಶಿಕಾ ಮಾತಿನ ಮಲ್ಲಿ. ವೇದಿಕೆ ಮೇಲೆ ನಿಲ್ಲಿಸಿ ಮೈಕ್ ಕೊಟ್ಟರೆ ಪಟಪಟ ಪಟಾಕಿ ರೀತಿ ಸಿಡಿಯುತ್ತವೆ ಅವಳ ಮಾತುಗಳು. ಇನ್ನು, ನಟನೆಯಲ್ಲೂ ಅವಳು ಪ್ರತಿಭಾವಂತೆ. ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಆಕೆ ಮಾಡಿದ ಸ್ಕಿಟ್ಗಳು ಎಲ್ಲರ ಗಮನ ಸೆಳೆದಿವೆ. ಈಗ ವಂಶಿಕಾಳ ನಿರೂಪಣೆಯನ್ನು ನೋಡುವ ಸಮಯ ಹತ್ತಿರ ಬಂದಿದೆ.
ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್ 2’ ನಿರೂಪಣೆ ಮಾಡುತ್ತಾಳೆ ಎಂಬುದನ್ನು ತಿಳಿಸಲು ಕಲರ್ಸ್ ಕನ್ನಡ ವಾಹಿನಿ ಒಂದು ಪ್ರೋಮೋ ರಿಲೀಸ್ ಮಾಡಿದೆ. ಇದು ತುಂಬ ತಮಾಷೆಯಾಗಿ ಮೂಡಿಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಂಶಿಕಾ ಆಯ್ಕೆ ಬಗ್ಗೆ ಅನೇಕರು ಕಮೆಂಟ್ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.
View this post on Instagram
ಈ ಕಾರ್ಯಕ್ರಮವನ್ನು ವಂಶಿಕಾ ನಿರೂಪಣೆ ಮಾಡಲಿರುವುದರಿಂದ ಆಕೆಗೆ ಕಲರ್ಸ್ ಕನ್ನಡ ವಾಹಿನಿಯ ಬ್ಯಾಕ್ ಟು ಬ್ಯಾಕ್ ಮೂರು ಶೋನಲ್ಲಿ ಚಾನ್ಸ್ ಸಿಕ್ಕಂತೆ ಆಗುತ್ತದೆ. ಕರ್ನಾಟಕದಲ್ಲಿ ಬೇರೆ ಮಕ್ಕಳೂ ಕೂಡ ಇದ್ದಾರೆ. ಅವರಿಗೂ ಅವಕಾಶ ಕೊಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ವಂಶಿಕಾ ನಿರೂಪಕಿಯಾಗಿ ಆಯ್ಕೆ ಆಗಿರುವುದಕ್ಕೆ ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.