ದಿನದ 3 ಹೊತ್ತಿನ ಆಹಾರ ಯಾವಾಗ ಸೇವಿಸಬೇಕು? ಆಯುರ್ವೇದವು ನಮ್ಮ ಶರೀರದ ಮೂಲಕವೇ ಹೀಗೆ ತಿಳಿಸಿದೆ ನೋಡಿ
ದಿನದ 3 ಹೊತ್ತಿನ ಆಹಾರ ಯಾವಾಗ ಸೇವಿಸಬೇಕು ? ಈ ಪ್ರಶ್ನೆಗೆ ಆಯುರ್ವೇದವು ನಮ್ಮ ಶರೀರದ ಮೂಲಕವೇ ತಿಳಿಸಿದೆ. ಹೊರಗೆ ನಿಂತಾಗ ಪೂರ್ವ ದಿಕ್ಕಿನತ್ತ ಸಮಾನಾಂತರವಾಗಿ ಕೈ ಚಾಚಿದಾಗ ಸೂರ್ಯ ಕೈಬೆರಳಿಗೆ ನೇರವಾಗಿ ಇರುವ ಸಮಯ ಉಪಾಹಾರ, ಸೂರ್ಯ ಸರಿಯಾಗಿ ನೆತ್ತಿಯ ಮೇಲಕ್ಕೆ ಬಂದಾಗ ಮಧ್ಯಾಹ್ನದ ಊಟ, ಸಂಜೆ ಪಶ್ಚಿಮದತ್ತ ಕೈ ಚಾಚಿದಾಗ ಸೂರ್ಯ ಕೈಬೆರಳಿಗೆ ನೇರವಾಗಿ ಇರುವ ಸಮಯ ರಾತ್ರಿಯೂಟದ ಸಮಯ.
ತೂಕವನ್ನು ಇಳಿಸುವ ಪ್ರಯತ್ನದಲ್ಲಿ ಅಥವಾ ಹೆಚ್ಚಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಾವೆಲ್ಲರೂ ಅರಿತಿದ್ದೇವೆ. ನೀವು ಹೆಚ್ಚಿನ ಕ್ಯಾಲೋರಿ ಇರುವ ಊಟವನ್ನು ಇಷ್ಟಪಟ್ಟು ಅದನ್ನು ಬಿಡಲಾಗದೇ ಇದ್ದರೆ ಅದು ನಿಮ್ಮ ತಪ್ಪಲ್ಲ. ಆದರೆ ಹೀಗೆ ಒಳಸೇರಿದ ಕ್ಯಾಲೋರಿಗಳನ್ನು ಬಳಸಿಕೊಳ್ಳದೇ ಸಂಗ್ರಹಿಸುವಂತಾಗಲು ಅವಕಾಶ ಮಾಡಿಕೊಡುವುದು ಮಾತ್ರವೇ ನಿಮ್ಮ ತಪ್ಪು! ಹಾಗಾಗಿ, ಸಾಕಷ್ಟು ವ್ಯಾಯಾಮ ಮಾಡಿದರೂ ಏಕೆ ನಮ್ಮ ತೂಕ ಇಳಿಯುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿರುವವರಿಗೆ ಈಗ ತಮ್ಮ ಉಪ್ಪಿನ ಅರಿವಾಗಿರಬಹುದು.
ತಿನ್ನುವ ಆಹಾರ ಹಾಗೂ ಸಮಯ
ನೀವು ಏನನ್ನು ತಿನ್ನುತ್ತೀರಿ ಎಂಬುದು ಮಾತ್ರವಲ್ಲ, ನೀವು ಸೇವಿಸುವ ಆಹಾರದ ಸಮಯವೂ ಸಹ ಬಹಳಷ್ಟು ಮಟ್ಟಿಗೆ ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಸ್ವಾಭಾವಿಕವಾಗಿ, ಬೆಳಗಿನ ಉಪಾಹಾರವನ್ನು ಮಧ್ಯಾಹ್ನವಂತೂ ತಿನ್ನಲು ಸಾಧ್ಯವಿಲ್ಲವಲ್ಲ! ಆದರೆ ಉಪಹಾರವನ್ನು ಬಹಳ ತಡವಾಗಿ ತಿನ್ನುವವರಿದ್ದಾರೆ. ಇತರ ವ್ಯಕ್ತಿಗಳಿಗೆ ಊಟದ ಸಮಯದಲ್ಲಿ ವ್ಯತ್ಯಯ ಉಂಟಾದರೆ ಹೆಚ್ಚಿನ ಪರಿಣಾಮ ಬೀರದೇ ಹೋದರೂ ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಈ ಸಮಯದ ವ್ಯತ್ಯಯ ವಿರುದ್ಧ ರೀತಿಯ ಪರಿಣಾಮ ಬೀರಬಹುದು. ಅಂದರೆ ತೂಕ ಇಳಿಯುವ ಬದಲು ಇನ್ನಷ್ಟು ಹೆಚ್ಚಬಹುದು.
ಆಹಾರಗಳನ್ನು ಯಾವಾಗ ಸೇವಿಸಬೇಕು?
ಹಾಗಾದರೆ, ದಿನದ ಮೂರು ಹೊತ್ತಿನ ಆಹಾರಗಳನ್ನು ಯಾವಾಗ ಸೇವಿಸಬೇಕು ? ಈ ಪ್ರಶ್ನೆಗೆ ಉತ್ತರವನ್ನು ಆಯುರ್ವೇದವು ನಮ್ಮ ಶರೀರದ ಮೂಲಕವೇ ತಿಳಿಸಿದೆ. ಹೊರಗೆ ನಿಂತಾಗ ಪೂರ್ವದಿಕ್ಕಿನತ್ತ ಸಮಾನಾಂತರವಾಗಿ ಕೈ ಚಾಚಿದಾಗ ಸೂರ್ಯ ಕೈಬೆರಳಿಗೆ ನೇರವಾಗಿ ಇರುವ ಸಮಯ ಉಪಾಹಾರ, ಸೂರ್ಯ ಸರಿಯಾಗಿ ನೆತ್ತಿಯ ಮೇಲಕ್ಕೆ ಬಂದಾಗ ಮಧ್ಯಾಹ್ನದ ಊಟ, ಸಂಜೆ ಪಶ್ಚಿಮದತ್ತ ಕೈ ಚಾಚಿದಾಗ ಸೂರ್ಯ ಕೈಬೆರಳಿಗೆ ನೇರವಾಗಿ ಇರುವ ಸಮಯ ರಾತ್ರಿಯೂಟದ ಸಮಯ.
ಆದರೆ ಇಂದಿನ ಧಾವಂತದ ಮತ್ತು ರಾತ್ರಿಯಿಡೀ ಚಟುವಟಿಕೆಯಿಂದಿರುವ ವ್ಯಸ್ತ ಜೀವನದಲ್ಲಿ ಈ ಹೊತ್ತುಗಳನ್ನು ಪಾಲಿಸಲು ಬಹುತೇಕ ಯಾರಿಂದಲೂ ಸಾಧ್ಯವಿಲ್ಲ. ಹಾಗಾದರೆ ತೂಕ ಇಳಿಸಬೇಕಾದರೆ ಏನು ಮಾಡಬೇಕು ? ಯಾವ ಹೊತ್ತುಗಳನ್ನು ಪಾಲಿಸಬೇಕು ? ಬನ್ನಿ, ಈ ಪ್ರಶ್ನೆಗಳಿಗೆ ಆಹಾರತಜ್ಞರು ನೀಡುವ ಉತ್ತರಗಳನ್ನು ನೋಡೋಣ.
ಬೆಳಗಿನ ಉಪಾಹಾರ
ಬೆಳಗಿನ ಉಪಾಹಾರವನ್ನು ದಿನದ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಜೀವರಾಸಾಯನಿಕ ಕ್ರಿಯೆಗೆ ಚಾಲನೆ ನೀಡಲು ಸಹಾಯ ಮಾಡುತ್ತದೆ ಮತ್ತು ದಿನವನ್ನು ಮುಂದುವರಿಸಲು ನಿಮಗೆ ಚೈತನ್ಯವನ್ನು ನೀಡುತ್ತದೆ.
ಬೆಳಗಿನ ಉಪಾಹಾರಕ್ಕಾಗಿ ಪ್ರೋಟೀನ್, ಕಾರ್ಬೋಹೈಡ್ರೇಟುಗಳು ಮತ್ತು ಕೊಬ್ಬಿನ ಮಿಶ್ರಣವನ್ನು ಸೇವಿಸಬೇಕು. ಬೆಳಗಿನ ಉಪಾಹಾರದ ಸಮಯದ ಬಗ್ಗೆ ಹೇಳುವುದಾದರೆ ನಿಮ್ಮ ಹಿಂದಿನ ದಿನದ ರಾತ್ರಿಯೂಟ ಮತ್ತು ನಿಮ್ಮ ಉಪಾಹಾರವನ್ನು ನೀವು ಸೇವಿಸುವ ಸಮಯದ ನಡುವೆ ಕನಿಷ್ಟ 12 ಗಂಟೆಗಳ ಅಂತರವಿರಬೇಕು.
ವಿಶೇಷವಾಗಿ ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳು ಈ ಕ್ರಮವನ್ನು ತಪ್ಪದೇ ಪಾಲಿಸಬೇಕು. ಅಂದ ಮಾತ್ರಕ್ಕೆ ಹಿಂದಿನ ರಾತ್ರಿ ಹನ್ನೊಂದು ಘಂಟೆಗೆ ಊಟ ಮಾಡಿದರೆ ಮರುದಿನ ಬೆಳಿಗ್ಗೆ ಹನ್ನೊಂದು ಘಂಟೆಗೆ ಉಪಾಹಾರ ಸೇವಿಸುವುದು ಎಂದರ್ಥವಲ್ಲ, ಉಪಾಹಾರವನ್ನು ಆದಷ್ಟು ಬೇಗನೇ ನಿರ್ವಹಿಸಬೇಕು, ಆ ಪ್ರಕಾರ ರಾತ್ರಿಯೂಟವನ್ನೂ ಬೇಗನೇ ಮುಗಿಸಬೇಕು.
ಉತ್ತಮ ಕ್ರಮವೆಂದರೆ ರಾತ್ರಿಯ ಕೊನೆಯ ಅಹಾರವಾಗಿ ನೀರನ್ನು ಸೇವಿಸಿ ಮಲಗಿ ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಸೇವಿಸಿ ಕೊಂಚ ಕಾಲ ನಡೆದಾಡಿ 15 ನಿಮಿಷಗಳ ಬಳಿಕ ಉಪಾಹಾರವನ್ನು ಸೇವಿಸುವುದು. ಉದಾಹರಣೆಗೆ ರಾತ್ರಿ 8: 30 ಕ್ಕೆ ನಿಮ್ಮ ಭೋಜನ ಇದ್ದರೆ, ಬೆಳಗ್ಗೆ 8: 30 ರ ಸುಮಾರಿಗೆ ನಿಮ್ಮ ಉಪಾಹಾರ ಸೇವಿಸಬೇಕು.
ಮಧ್ಯಾಹ್ನದ ಊಟ
ಅನೇಕರಿಗೆ ದಿನದ ಅತಿದೊಡ್ಡ ಊಟವಾಗಿದ್ದರೂ, ಊಟದ ಸಮಯವು ತೂಕ ಇಳಿಕೆಯ ಪ್ರಯತ್ನಗಳ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನಿಮ್ಮ ಇಷ್ಟದ ಯಾವುದಾದರೂ ಆಹಾರ ತೂಕ ಹೆಚ್ಚಿಸುವ ಸಂಭವ ಇದ್ದು ಇದನ್ನು ಬಿಡಲು ಸಾಧ್ಯವಿಲ್ಲದೇ ಇದ್ದರೆ ಈ ಆಹಾರವನ್ನು ಮಧ್ಯಾಹ್ನದ ಊಟದಲ್ಲಿ ಸೇವಿಸಿ. ಏಕೆಂದರೆ ದಿನದ ಅವಧಿಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಬಳಸಲ್ಪಡುತ್ತವೆ ಹಾಗೂ ಮಧ್ಯಾಹ್ನದ ಊಟದಿಂದ ದೊರಕುವ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇತರ ಹೊತ್ತಿನ ಅಹಾರಗಳಿಗಿಂತ ಕಡಿಮೆ.
ಅಂದ ಮಾತ್ರಕ್ಕೆ ನೀವು ಈ ಆಹಾರವನ್ನು ನಿಮಗಿಷ್ಟ ಬಂದಷ್ಟು ತಿನ್ನುವುದು ಸರಿಯಲ್ಲ, ಇದರಲ್ಲೂ ಮಿತ ಪ್ರಮಾಣ ಇರುವುದು ಅವಶ್ಯ. ಒಂದು ವೇಳೆ ನಿಮ್ಮ ಬೆಳಗಿನ ಉಪಾಹಾರ ಎಂಟು ಘಂಟೆಗೆ ಆದರೆ ನಿಮ್ಮ ಮಧ್ಯಾಹ್ನದ ಊಟ ಮಧ್ಯಾಹ್ನ ಒಂದರಿಂದ ಎರಡು ಘಂಟೆಯ ನಡುವೆ ಇರುವಂತೆ ನೋಡಿಕೊಳ್ಳಿ. ಈ ಮೂಲಕ ನಿಮ್ಮ ರಾತ್ರಿಯ ಊಟಕ್ಕೂ ಮುನ್ನ ಈ ಆಹಾರ ಪೂರ್ಣವಾಗಿ ಜೀರ್ಣಗೊಳ್ಳಲು ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ಮಧ್ಯಾಹ್ನದ ಊಟ ತಡ ಮಾಡಿದಷ್ಟೂ ರಾತ್ರಿಯೂಟದ ಮೇಲೆ ಇದು ಪ್ರಭಾವ ಬೀರುತ್ತದೆ ಹಾಗೂ ನಿಮ್ಮ ತೂಕ ಇಳಿಕೆಯ ಪ್ರಯತ್ನಗಳು ಫಲ ನೀಡಲಾರವು.
ರಾತ್ರಿಯೂಟ
ತಜ್ಞರು ರಾತ್ರಿಯೂಟವನ್ನು ಆದಷ್ಟು ಬೇಗನೇ ಮುಗಿಸಿ ಬಿಡಲು ಸಲಹೆ ಮಾಡುತ್ತಾರೆ. ಅಲ್ಲದೇ ರಾತ್ರಿಯೂಟದ ತಕ್ಷಣ ಮಲಗಬಾರದು, ಬದಲಿಗೆ ಊಟವಾದ ಬಳಿಕ 2-3 ಘಂಟೆ ಸಮಯವಾದರೂ ಬಿಟ್ಟು ಬಳಿಕ ಮಲಗಬೇಕು. ಈ ಮೂಲಕ ನೀವು ಮಲಗುವ ಮುನ್ನ ಈ ಅಹಾರ ಸಾಕಷ್ಟು ಜೀರ್ಣಗೊಂಡು ರಾತ್ರಿ ಜರುಗುವ ಅನೈಚ್ಛಿಕ ಕಾರ್ಯಗಳು ಯಾವುದೇ ಒತ್ತಡವಿಲ್ಲದೇ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ರಾತ್ರಿ ಊಟದ ಬಳಿಕ ಕೊಂಚ ಹೊತ್ತು ಅಡ್ಡಾಡುವುದೂ ಮುಖ್ಯ.
ಇದೇ ವಿಷಯವನ್ನು ಆಂಗ್ಲ ಸುಭಾಷಿತವೊಂದು ಹೀಗೆ ಹೇಳುತ್ತದೆ – After your lunch sleep for a while, after your dinner walk for a mile. ಈ ಒಂದು ಮೈಲಿಯ ನಡಿಗೆ ರಾತ್ರಿಯೂಟದ ಆಹಾರದಿಂದ ಪಡೆದಿದ್ದ ಕ್ಯಾಲೊರಿಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಸುತ್ತದೆ. ಆದ್ದರಿಂದ ಎಂದಿಗೂ ರಾತ್ರಿ ಊಟ ಮಾಡಿದ ತಕ್ಷಣವೇ ನೇರವಾಗಿ ಮಲಗಬಾರದು. ಮಲಗಿದರೆ ಅದು ಅಜೀರ್ಣಕ್ಕೆ ಕಾರಣವಾಗಬಹುದು ಮತ್ತು ಮರುದಿನ ಬೆಳಿಗ್ಗೆ ಹೊಟ್ಟೆಯುಬ್ಬರಿಕೆ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗಬಹುದು.
ಆರೋಗ್ಯವನ್ನು ಕಾಪಾಡಿಕೊಳ್ಳಿ
ರಾತ್ರಿಯೂಟ ಮಿತವಾಗಿರಬೇಕು. ತುಂಬಿದ ಹೊಟ್ಟೆಯೊಂದಿಗೆ, ನಿಮಗೆ ಸುಖಕರ ನಿದ್ದೆ ಪಡೆಯಲು ಸಾಧ್ಯವಾಗುವುದಿಲ್ಲ, ಅದು ಅಂತಿಮವಾಗಿ ನಿಮ್ಮ ತೂಕ ಇಳಿಸುವ ಯೋಜನೆಗೆ ಅಡ್ಡಗಾಲು ಹಾಕುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ರಾತ್ರಿ 8:00 ರ ಸುಮಾರಿಗೆ ನಿಮ್ಮ ರಾತ್ರಿಯೂಟವನ್ನು ಪೂರೈಸಿ. ಬಳಿಕ ಕೊಂಚ ನಡಿಗೆ, ವಿಶ್ರಾಂತಿ ಹಾಗೂ ಇತರ ಕಾರ್ಯಗಳನ್ನು ಮುಗಿಸಿ ಸುಮಾರು ಹತ್ತು ಅಥವಾ ಹತ್ತೂವರೆಯ ಹೊತ್ತಿಗೆ ನೀವು ನಿದ್ದೆಗೆ ಜಾರಿರಬೇಕು. ಈ ಸಮಯಗಳನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೇ ತೂಕ ಇಳಿಸುವ ನಿಮ್ಮ ಪ್ರಯತ್ನಗಳಿಗೆ ಹೆಚ್ಚಿನ ಫಲ ದೊರಕುತ್ತದೆ. (ಬರಹ -ವಾಟ್ಸಪ್ ಸಂದೇಶ)