Childhood Cancer: ಮಕ್ಕಳ ಕ್ಯಾನ್ಸರ್ ಬಗ್ಗೆ ಇರುವ 8 ತಪ್ಪು ಕಲ್ಪನೆಗಳು ಯಾವುವು? ಇಲ್ಲಿದೆ ಡಾ. ಅಕ್ಷಯ್ ನೀಡಿರುವ ಮಾಹಿತಿ
ಮಗುವಿಗೆ ಕ್ಯಾನ್ಸರ್ ಇದೆ ಎಂಬ ಮಾತು ಕೇಳಿದ ತಕ್ಷಣ ಯಾವುದೇ ಪೋಷಕರಿಗೂ ಆತಂಕವಾಗುವುದು ಸಹಜ. ಆದರೆ ಮಕ್ಕಳಲ್ಲಿ ಕ್ಯಾನ್ಸರ್ ಅಪರೂಪವಾದರೂ, ಅದು ಗುಣಪಡಿಸಲಾಗದ ಕಾಯಿಲೆ ಎಂಬುದು ತಪ್ಪು ಕಲ್ಪನೆ. ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸಿ, ಸರಿಯಾದ ಪರೀಕ್ಷೆ ಮಾಡಿಸಿದರೆ ಅನೇಕ ಬಾಲ್ಯದ ಕ್ಯಾನ್ಸರ್‌ಗಳನ್ನು ಯಶಸ್ವಿಯಾಗಿ ಗುಣಪಡಿಸಬಹುದು. ಹಾಗಾದರೆ ಮಕ್ಕಳ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು? ಈ ಬಗ್ಗೆ ಡಾ. ಅಕ್ಷಯ್ ಗುರವ್ ಅವರು ನೀಡಿದ ಮಾಹಿತಿ ಸ್ಟೋರಿಯಲ್ಲಿದೆ.

ಮಕ್ಕಳಲ್ಲಿ ಕ್ಯಾನ್ಸರ್ ಅಪರೂಪದ ಕಾಯಿಲೆಯಾಗಿದ್ದರೂ ಕೂಡ, ಮಗುವಿನ ಆರೋಗ್ಯದ ಮೇಲೆ ಅತಿ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಯಸ್ಕರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಿಗಿಂತ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳ ಸ್ವರೂಪ ಮತ್ತು ಕಾರಣಗಳು ಬಹಳಷ್ಟು ವಿಭಿನ್ನವಾಗಿವೆ. ಮಕ್ಕಳಲ್ಲಿ ಲ್ಯೂಕೀಮಿ. ಮಯಾ, ಮೆದುಳು ಮತ್ತು ನರಮಂಡಲದ ಗಡ್ಡೆಗಳು, ಲಿಂಫೋಮಾ, ನ್ಯೂರೋಬ್ಲಾಸ್ಟೋಮಾ, ವಿಲ್ಮ್ಸ್ ಟ್ಯೂಮರ್ ಹಾಗೂ ಎಲುಬಿನ ಕ್ಯಾನ್ಸರ್‌ಗಳು ಪ್ರಮುಖವಾಗಿ ಕಂಡುಬರುತ್ತವೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಹಾಸನ ಎಸ್ ಡಿ ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ. ಅಕ್ಷಯ್ ಗುರವ್ ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ಕಲ್ಪನೆಗಳ ಮತ್ತು ನಿಜವಾದ ಸಂಗತಿಗಳು ಯಾವುದು ಎಂಬುದರ ಬಗ್ಗೆ ವಿವರಿಸಿದ್ದಾರೆ.
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಆರಂಭದಲ್ಲಿ ಗುರುತಿಸುವುದು, ನಿಖರವಾದ ರೋಗನಿರ್ಣಯ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಕ್ಯಾನ್ಸರ್‌ನ ವಿಧ, ಹಂತ ಮತ್ತು ಮಗುವಿನ ಆರೋಗ್ಯದ ಸ್ಥಿತಿಯನ್ನು ಆಧರಿಸಿ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಲಾಗುತ್ತದೆ. ಚಿಕಿತ್ಸೆಯಲ್ಲಿ ಮುಖ್ಯವಾಗಿ ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ, ಗುರಿನಿರ್ದಿಷ್ಟ ಚಿಕಿತ್ಸೆ (Targeted Therapy) ಹಾಗೂ ಕೆಲವು ಸಂದರ್ಭಗಳಲ್ಲಿ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಮುಂತಾದ ವಿಧಾನಗಳನ್ನು ಬಳಸಲಾಗುತ್ತದೆ.
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ಕಲ್ಪನೆಗಳು (Myths) ಮತ್ತು ನಿಜವಾದ ಸಂಗತಿಗಳು (Facts)
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳ ಕುರಿತು ಸಮಾಜದಲ್ಲಿ ಅನೇಕ ರೀತಿಯ ತಪ್ಪು ಕಲ್ಪನೆಗಳು ಮತ್ತು ಭಯಗಳು ಇವೆ. ಇಂತಹ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಕ್ಯಾನ್ಸರ್ ಕುರಿತು ಸರಿಯಾದ ಜಾಗೃತಿ ಮತ್ತು ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ತಲುಪಿಸುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಅನೇಕ ಮಕ್ಕಳ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಮಿಥ್ಸ್ (ತಪ್ಪು ಕಲ್ಪನೆಗಳು) ಮತ್ತು ಫ್ಯಾಕ್ಟ್ಸ್ (ವಾಸ್ತವಾಂಶಗಳು) ಇಲ್ಲಿವೆ.
ಮಿಥ್ಸ್: ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬರುವುದಿಲ್ಲ.
ಫ್ಯಾಕ್ಟ್ಸ್: ಕ್ಯಾನ್ಸರ್ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ವಿಶೇಷವಾಗಿ ಲ್ಯೂಕೀಮಿಯಾ, ಲಿಂಫೋಮಾ, ಮೆದುಳಿನ ಗಡ್ಡೆಗಳು ಹಾಗೂ ಇತರ ಕೆಲವು ವಿಧದ ಕ್ಯಾನ್ಸರ್‌ಗಳು ಕಂಡುಬರುತ್ತವೆ. ಆದ್ದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸಾಮಾನ್ಯ ಅಥವಾ ನಿರಂತರ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.
ಮಿಥ್ಸ್: ಕ್ಯಾನ್ಸರ್ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಫ್ಯಾಕ್ಟ್ಸ್: ಕ್ಯಾನ್ಸರ್ ಯಾವುದೇ ಕಾರಣಕ್ಕೂ ಸಾಂಕ್ರಾಮಿಕ ರೋಗವಲ್ಲ. ಕ್ಯಾನ್ಸರ್ ಪೀಡಿತ ಮಗುವಿನೊಂದಿಗೆ ಆಟವಾಡುವುದರಿಂದ, ಸ್ಪರ್ಶಿಸುವುದರಿಂದ, ಜೊತೆಯಲ್ಲಿ ಇರುವುದರಿಂದ ಅಥವಾ ಆಹಾರ ಹಂಚಿಕೊಳ್ಳುವುದರಿಂದ ಕ್ಯಾನ್ಸರ್ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಹರಡುವುದಿಲ್ಲ. ಆದ್ದರಿಂದ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಪ್ರತ್ಯೇಕಿಸುವ ಅಗತ್ಯವಿಲ್ಲ; ಅವರೊಂದಿಗೆ ಪ್ರೀತಿ, ಸಹಾನುಭೂತಿ ಮತ್ತು ಆತ್ಮೀಯತೆಯಿಂದ ವರ್ತಿಸಬೇಕು.
ಮಿಥ್ಸ್: ಪೋಷಕರ ತಪ್ಪು ಅಭ್ಯಾಸಗಳು, ನಿರ್ಲಕ್ಷ್ಯತೆ ಅಥವಾ ಪಾಪಕರ್ಮಗಳಿಂದ ಮಕ್ಕಳಿಗೆ ಕ್ಯಾನ್ಸರ್ ಬರುತ್ತದೆ.
ಫ್ಯಾಕ್ಟ್ಸ್: ಮಕ್ಕಳಲ್ಲಿ ಕಂಡುಬರುವ ಬಹುತೇಕ ಕ್ಯಾನ್ಸರ್‌ಗಳಿಗೆ ಪೋಷಕರ ನಡವಳಿಕೆ, ಪಾಪಕರ್ಮ ಅಥವಾ ಜೀವನಶೈಲಿ ಕಾರಣವಲ್ಲ. ಜೀವಕೋಶಗಳ DNAಯಲ್ಲಿ ಉಂಟಾಗುವ ಆಕಸ್ಮಿಕ ಜನ್ಯ ರೂಪಾಂತರಗಳು (Genetic Mutations) ಜೀವಕೋಶಗಳ ಅಸಹಜ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ ಮಗುವಿಗೆ ಕ್ಯಾನ್ಸರ್ ಬಂದಾಗ ಪೋಷಕರು ತಮ್ಮನ್ನು ತಾವು ದೂಷಿಸಿಕೊಳ್ಳಬೇಕಾಗಿಲ್ಲ.
ಮಿಥ್ಸ್: ಬಾಲ್ಯದಲ್ಲಿ ಬರುವ ಕ್ಯಾನ್ಸರ್ ಗುಣಪಡಿಸಲಾಗುವುದಿಲ್ಲ.
ಫ್ಯಾಕ್ಟ್ಸ್: ಸಕಾಲದಲ್ಲಿ ರೋಗನಿರ್ಣಯ ಮಾಡಿ, ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಬಾಲ್ಯದ ಕ್ಯಾನ್ಸರ್‌ಗಳಲ್ಲಿ ಹೆಚ್ಚಿನವು ಗುಣಪಡಿಸಲು ಸಾಧ್ಯವಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಾಲ್ಯದ ಕ್ಯಾನ್ಸರ್‌ಗಳ ಒಟ್ಟಾರೆ ಗುಣಮುಖ ದರ 80%ಕ್ಕಿಂತ ಹೆಚ್ಚಿದೆ. ಆದ್ದರಿಂದ ಆರಂಭಿಕ ಗುರುತಿಸುವಿಕೆ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆಯು ಅತ್ಯಂತ ಮಹತ್ವದ್ದಾಗಿದೆ.
ಮಿಥ್ಸ್: ಕ್ಯಾನ್ಸರ್ ಎಂದರೆ ಸಾವು, ಕೋಮಾ; ಮಕ್ಕಳು ಇದರಿಂದ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ.
ಫ್ಯಾಕ್ಟ್ಸ್: ಇದು ಸಂಪೂರ್ಣ ತಪ್ಪು. ಇಂದಿನ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಾದ ಕಿಮೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ಅಗತ್ಯವಿದ್ದಲ್ಲಿ ರೇಡಿಯೊಥೆರಪಿಗಳ ಮೂಲಕ ಬಾಲ್ಯದ ಅನೇಕ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು. ಸೂಕ್ತ ಚಿಕಿತ್ಸೆ ಮತ್ತು ಸಮಗ್ರ ಆರೈಕೆಯಿಂದ ಅನೇಕ ಮಕ್ಕಳಲ್ಲಿ 80%ಕ್ಕಿಂತಲೂ ಹೆಚ್ಚಿನ ಗುಣಮುಖ ದರ ಸಾಧಿಸಬಹುದು. ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಗುಣಮುಖರಾಗುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ.
ಮಿಥ್ಸ್: ಕೀಮೋಥೆರಪಿ ಅಂದರೆ ಮಗುವಿನ ಜೀವನ ಮುಗಿದಂತೆ.
ಫ್ಯಾಕ್ಟ್ಸ್: ಕೀಮೋಥೆರಪಿ ಚಿಕಿತ್ಸೆಯು ಕೆಲವೊಮ್ಮೆ ಕಷ್ಟಕರವಾಗಿರಬಹುದು ಮತ್ತು ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಆದರೆ ಇದು ಮಗುವಿನ ಜೀವನದ ಅಂತ್ಯ ಎಂದರ್ಥವಲ್ಲ. ಸೂಕ್ತ ವೈದ್ಯಕೀಯ ಆರೈಕೆ, ಪೌಷ್ಟಿಕತೆ ಮತ್ತು ನಿರಂತರ ಮೇಲ್ವಿಚಾರಣೆಯೊಂದಿಗೆ ಅನೇಕ ಮಕ್ಕಳು ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಂತರ ಸಾಮಾನ್ಯ, ಆರೋಗ್ಯಕರ ಮತ್ತು ಸಂತೋಷಕರ ಜೀವನವನ್ನು ನಡೆಸುತ್ತಾರೆ.
ಮಿಥ್ಸ್: ಪ್ರೌಢ ವಯಸ್ಕರಿಗೆ ನೀಡುವ ಕ್ಯಾನ್ಸರ್ ಚಿಕಿತ್ಸೆಯನ್ನೇ ಮಕ್ಕಳಿಗೂ ನೀಡಲಾಗುತ್ತದೆ.
ಫ್ಯಾಕ್ಟ್ಸ್: ಮಕ್ಕಳ ದೇಹದ ಬೆಳವಣಿಗೆ ಮತ್ತು ದೇಹದ ರಚನೆ ಪ್ರೌಢ ವಯಸ್ಕರಿಗಿಂತ ವಿಭಿನ್ನವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಅವರ ವಯಸ್ಸು, ದೇಹದ ತೂಕ, ಕ್ಯಾನ್ಸರ್‌ನ ವಿಧ ಮತ್ತು ರೋಗದ ಹಂತಕ್ಕೆ ಅನುಗುಣವಾಗಿ ವಿಶೇಷ ಚಿಕಿತ್ಸಾ ವಿಧಾನವನ್ನು ರೂಪಿಸಲಾಗುತ್ತದೆ. ಪೀಡಿಯಾಟ್ರಿಕ್ ಆಂಕಾಲಜಿ (Paediatrci Oncology) ತಜ್ಞರು ಮಕ್ಕಳ ಅಗತ್ಯಕ್ಕೆ ತಕ್ಕಂತೆ ಕಿಮೋಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಹಾಗೂ ಇತರ ಅಗತ್ಯ ಚಿಕಿತ್ಸೆಯನ್ನು ಯೋಜಿಸುತ್ತಾರೆ.
ಮಿಥ್ಸ್: ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಿಲ್ಲ.
ಫ್ಯಾಕ್ಟ್ಸ್: ಇದು ತಪ್ಪು. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಮಕ್ಕಳು ಬೆಳೆದು ದೊಡ್ಡವರಾದ ನಂತರ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು. ಅವರು ಶಿಕ್ಷಣವನ್ನು ಮುಂದುವರಿಸಿ, ಉದ್ಯೋಗದಲ್ಲಿ ಯಶಸ್ವಿಯಾಗಿ ತೊಡಗಿ, ತಮ್ಮ ವೈಯಕ್ತಿಕ ಮತ್ತು ಕುಟುಂಬ ಜೀವನವನ್ನೂ ಸಂತೋಷದಿಂದ ಸಾಗಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಮತ್ತು ಅಗತ್ಯವಿದ್ದಲ್ಲಿ ದೀರ್ಘಕಾಲೀನ ಮೇಲ್ವಿಚಾರಣೆ ಸಹ ಮುಖ್ಯವಾಗಿದೆ.
ಬಾಲ್ಯದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಾದ ದೀರ್ಘಕಾಲದ ಜ್ವರ, ಅತಿಯಾದ ಆಯಾಸಅಥವಾ ಗಡ್ಡೆಗಳು, ಕಾರಣವಿಲ್ಲದ ರಕ್ತಸ್ರಾವ, ಚರ್ಮದ ಬಣ್ಣದಲ್ಲಿ ಬದಲಾವಣೆ, ನಿರಂತರ ನೋವು ಅಥವಾ ತೂಕ ಇಳಿಕೆಗಳನ್ನು ನಿರ್ಲಕ್ಷಿಸದೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅವಶ್ಯಕ. ಸರಿಯಾದ ಮಾಹಿತಿ ಮತ್ತು ಜಾಗೃತಿಯ ಮೂಲಕ ಮಾತ್ರ ಕ್ಯಾನ್ಸರ್ ಕುರಿತು ಇರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಿ, ಕ್ಯಾನ್ಸರ್‌ಬಾಧಿತ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಅಗತ್ಯವಾದ ಬೆಂಬಲವನ್ನು ನೀಡಲು ಸಾಧ್ಯ.
ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾದಾಗ ಭಯಪಡದೆ ಧೈರ್ಯದಿಂದ ಎದುರಿಸುವುದು, ರೋಗದ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಅರ್ಹ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಭಯ ಮತ್ತು ಮೂಢನಂಬಿಕೆಗಳನ್ನು ಬದಿಗೊತ್ತಿ, ಜಾಗೃತಿ ಮತ್ತು ವೈಜ್ಞಾನಿಕ ಅರಿವು ಮೂಡಿಸುವುದೇ ಮಕ್ಕಳ ಆರೋಗ್ಯಕರ ಹಾಗೂ ಭರವಸೆಯ ಭವಿಷ್ಯಕ್ಕೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




