World Hypertension Day 2021: ವಿಶ್ವ ಹೈಪರ್ಟೆನ್ಶನ್ ದಿನದ ಉದ್ದೇಶವೇನು? ಅಧಿಕ ರಕ್ತದೊತ್ತಡ ನಿಯಂತ್ರಣ ಹೇಗೆ?
World Hypertension Day 2021: ಅಧಿಕ ರಕ್ತದೊತ್ತಡದ ಹಾಗೂ ಇದರಿಂದ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಯ ಕುರಿತಾಗಿ ತಿಳಿಹೇಳಲು ಜೊತೆಗೆ ನಿಯಂತ್ರಣದ ಕುರಿತಾಗಿ ಜಾಗೃತಿ ಮೂಡಿಸಲು ವರ್ಡ್ ಹೈಪರ್ಟೆನ್ಶನ್ ದಿನವನ್ನು(WHD) ಆಚರಿಸಲಾಗುತ್ತದೆ.
ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತಾಗಿ ಕಾಳಜಿ ವಹಿಸುವುದು ಮುಖ್ಯ. ಹೆಚ್ಚು ಬಿಪಿ, ತಲೆನೋವು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಕೊರೊನಾ ಭೀತಿಯಲ್ಲಿರುವ ಈ ಸಮಯದಲ್ಲಿ ಜನರಿಗೆ ರಕ್ತದೊತ್ತಡ ಕಾಯಿಲೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಕ್ರಮದ ಕುರಿತಾಗಿ ತಿಳಿ ಹೇಳುವುದು ಅತ್ಯವಶ್ಯಕವಾಗಿದೆ.
ಅಧಿಕ ರಕ್ತದೊತ್ತಡದ ಹಾಗೂ ಇದರಿಂದ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಯ ಕುರಿತಾಗಿ ತಿಳಿಹೇಳಲು ಜೊತೆಗೆ ನಿಯಂತ್ರಣದ ಕುರಿತಾಗಿ ಜಾಗೃತಿ ಮೂಡಿಸಲು ವರ್ಡ್ ಹೈಪರ್ಟೆನ್ಶನ್ ದಿನವನ್ನು(WHD) ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವುದು ಹೆಚ್ಚು.
ಮೊದಲಿ ಬಾರಿಗೆ 2005 ಮೇ ತಿಂಗಳಿನಲ್ಲಿ ವರ್ಡ್ ಹೈಪರ್ಟೆನ್ಶನ್ ದಿನವನ್ನು ಆಚರಿಸಲಾಯಿತು. ಅಧಿಕ ರಕ್ತದೊತ್ತಡದಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಪಾರ್ಶ್ವವಾಯುಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ರಕ್ತದೊತ್ತಡದಿಂದ ಉಂಟಾಗುವ ಅದೆಷ್ಟೋ ಕಾಯಿಲೆಗಳ ಕುರಿತಾಗಿ ಜನರಿಗೆ ಅರಿವು ಮೂಡಿಸಲು ಮತ್ತು ಆರೋಗ್ಯದ ಕುರಿತಾಗಿ ತಿಳಿ ಹೇಳುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಪ್ರಸ್ತುತ ಸಮಯದಲ್ಲಿ ಜನರು ತಮಗಾಗಿ ಸಮಯವನ್ನು ಮೀಸಲಿಡುತ್ತಿಲ್ಲ. ಅದರಲ್ಲಿಯೂ ಕೊರೊನಾ ಸೋಂಕಿನ ಭೀತಿ ಜನರಿಗೆ ಹೆಚ್ಚು ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಜನರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇದು ಮಾನವರ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಮನಸ್ಸಿನ ನಿಯಂತ್ರಣ ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಒಳಿತು.
ಶವಾಸನ ವಿಧಾನ- ಆರಾಮದಾಯಕವಾಗಿ ಬೆನ್ನಿನ ಭಾಗವನ್ನು ನೇರವಾಗಿರಿಸಿಕೊಂಡು ಮಲಗಿಕೊಳ್ಳಿ. ದೇಹ ಸಡಿಲವಾಗಿರಲಿ. ಕಾಲುಗಳು ನೇರವಾಗಿರಲಿ. ಕಾಲಿನ ಪಕ್ಕದಲ್ಲಿ ಎರಡೂ ಕೈಗಳನ್ನು ನೇರವಾಗಿ ಇಳಿಬಿಡಿ. ಯಾವುದೇ ಕಾರಣಕ್ಕೂ ದೇಹವನ್ನು ಬಿಗಿಗೊಳಿಸಬೇಡಿ. ಆದಷ್ಟೂ ಸಡಿಲವಾಗಿರಲಿ. ಮನಸ್ಸು ವಿಶ್ರಾಂತಿಯ ಭಾವ ಹೊಂದಿರಲಿ. ದೇಹದ ಸುಸ್ತು, ಹೆದರಿಕೆ, ಅಂಜಿಕೆ ಎಲ್ಲವನ್ನೂ ದೂರಸರಿಸಿ. ಮನಸ್ಸು ಏಕಾಗ್ರತೆಯಿಂದಿರಲಿ. ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗಳೆಲ್ಲವೂ ಒಳ್ಳೆಯ ರೀತಿಯದ್ದಾಗಿರಲಿ. ನಿರ್ಗಳವಾಗಿ ಸರಾಗವಾಗಿ ಉಸಿರಾಟ ಕ್ರಿಯೆ ಇರಲಿ. ಕಣ್ಣುಗಳು ಮುಚ್ಚಿರಲಿ.
ಪ್ರಯೋಜನಗಳು ನಿರ್ಗಳವಾಗಿ ಸರಾಗವಾಗಿ ಉಸಿರಾಟ ಕ್ರಿಯೆ ನಡೆಯುತ್ತಿರುವಾಗ ನರಮಂಡಲವು ಸಡಿಲಗೊಳ್ಳುತ್ತದೆ. ರಕ್ತ ಸಂಚಾರವು ಅರಾಮದಾಯಕವಾಗಿ ನಡೆಯುತ್ತದೆ. ರಕ್ತದೊತ್ತಡ ಉಂಟಾದಾಗ ದೇಹ ಒತ್ತಡಕ್ಕೆ ಸಿಲುಕಿರುತ್ತದೆ. ಮನಸ್ಸು ಹೆದರುತ್ತದೆ. ಈ ಯೋಗಾಸನವನ್ನು ಪ್ರತಿನಿತ್ಯ ಮಾಡುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
ಅನುಲೋಮ- ವಿಲೋಮ ಪ್ರಾಣಾಯಾಮ ವಿಧಾನ- ಕಣ್ಣು ಮುಚ್ಚಿ ಶಿಸ್ತುಬದ್ದವಾಗಿ ಕುಳಿತು ಮೊಣಕಾಲಿನ ಮೇಲೆ ನಿಮ್ಮ ಕೈಗಳನ್ನು ಇಟ್ಟುಕೊಟ್ಟಿ. ನಂತರ ಎಡಗೈ ಚಿನ್ಮುದ್ರೆ ಅಥವಾ ಜ್ಞಾನಮುದ್ರೆ ಇರಲಿ. ಬಲಗೈನಲ್ಲಿ ನಾಸಿಕ ಮುದ್ರೆ ಅಂದರೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಮಡಚಿ, ಉಂಗುರ ಬೆರಳು ಹಾಗೂ ಕಿರುಬೆರಳು ನೇರವಾಗಿರಬೇಕು. ನಂತರದ ಹಂತದಲ್ಲಿ ಬಲಗೈ ಹೆಬ್ಬೆರಳನ್ನು ಮೂಗಿನ ಬಲಭಾಗದ ಮೂಗಿನ ಹೊಳ್ಳೆಯ ಮೇರೆ ಇರಿಸಿ, ನಿಧಾನವಾಗಿ ಬಲಹೊಳೆಯನ್ನು ಒತ್ತಿ, ಮೂಗಿನ ಎಡಬದಿಯ ಹೊಳ್ಳೆಯಿಂದ ನಿಧಾನವಾಗಿ ಉಸಿರು ಎಳೆದುಕೊಳ್ಳಿ. ಎಡಮೂಗಿನ ಹೊಳ್ಳೆಯ ಮೇಲೆ ಉಂಗುರಬೆರಳು ಹಾಗೂ ಕಿರುಬೆರಳನ್ನು ಇರಿಸಿ, ಸ್ವಲ್ಪ ಒತ್ತಿ ಬಲಮೂಗಿನಿಂದ ನಿಧಾನವಾಗಿ ಉಸಿರನ್ನು ಹೊರಬಿಡಬೇಕು. ನಂತರ ಬಲಮೂಗಿನಿಂದ ಉಸಿರನ್ನು ಒಳಗೆಳೆದುಕೊಂಡು ಬಲಹೊಳ್ಳೆಯನ್ನು ಬಲಗೈಯ ಹೆಬ್ಬೆರಳಿನಿಂದ ಸ್ವಲ್ಪ ಒತ್ತಿ ಹಿಡಿದು, ಎಡಮೂಗಿನಿಂದ ಉಸಿರನ್ನು ಹೊರಗೆ ಬಿಡಬೇಕು. ಈ ಪ್ರಾಣಾಯಾಮವನ್ನು ಎಡಮೂಗಿನಿಂದ ಪ್ರಾರಂಭ ಮಾಡಿ ಬಲಮೂಗಿನಿಂದ ಉಸಿರನ್ನು ಹೊರಬಿಡುವುದರ ಮೂಲಕ ಕೊನೆಗೊಳಿಸಬೇಕು.
ಪ್ರಯೋಜನಗಳು ಈ ಪ್ರಾಣಾಯಾಮದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ರಕ್ತದೊತ್ತಡವನ್ನು ನಿಯಂತ್ರಿಸಲು ಯೋಗ ಧ್ಯಾನ ಸಹಾಯ ಮಾಡುತ್ತದೆ. ಮತ್ತು ನಿದ್ರೆಯ ಕೊರತೆಯನ್ನು ದೂರ ಮಾಡಲು ಅನುಲೋಮ, ವಿಲೋಮ ಪ್ರಾಣಾಯಾಮ ಸಹಾಯ ಮಾಡುತ್ತದೆ.
ಭುಜಂಗಾಸನ ವಿಧಾನ- ಮೊದಲು ನಿಧಾನವಾಗಿ ಹೊಟ್ಟೆಯ ಮೇಲೆ ಮಲಗಿ ಇದೀಗ ಎರಡು ಹಸ್ತಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ಊರಿ. ಕಾಲ್ಬೆರಳುಗಳು ಹಿಂದಕ್ಕೆ ಚಾಚಿರಲಿ. ಸಂಪೂರ್ಣವಾಗಿ ಎದೆಯ ಭಾಗ ಮೇಲಕ್ಕೆ ಬಂದಿರಬೇಕು. ಕಣ್ಣಿನ ದೃಷ್ಟಿ ಮೇಲೆ ಹಾಗೂ ಎರಡೂ ಭುಜಗಳು ಹಿಂದಕ್ಕೆ ಬಾಗಿರಲಿ. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಸ್ಥಿತಿಯಲ್ಲಿರುವಾಗ ಸಹಜವಾದ ಉಸಿರಾಟ ಕ್ರಿಯೆ ಪ್ರಾರಂಭಿಸಿ. ದೇಹಕ್ಕೆ ಯಾವುದೇ ಒತ್ತಡ ಕೊಡದೇ ಆರಾಮಾಗಿ ಇರಿ. ಉಸಿರನ್ನು ಹೊರಹಾಕುತ್ತಾ ಪೂರ್ತಿ ಕೆಳಗೆ ಬರಬೇಕು. ಹಣೆಯನ್ನು ನೆಲಕ್ಕೆ ತಾಗಿಸಿ ವಿಶ್ರಾಂತಿ ಮಾಡಬೇಕು.
ಪ್ರಯೋಜನಗಳು ದೇಹದ ನರಭಾಗಗಳನ್ನು ಸದೃಢಗೊಳಿಸಲು ಈ ಆಸನ ಸಹಾಯಕ. ಶ್ವಾಸಕೋಶಗಳು ಹಿಗ್ಗುವುದರಿಂದ ಉಸಿರಾಟ ಸಂಭಂದಿತ ತೊಂದರೆ ಇರುವವರಿಗೆ ಈ ಆಸನ ಸಹಾಕಯವಾಗುತ್ತದೆ. ಉಸಿರಾಟ ಕ್ರಿಯೆ ಸರಾಗವಾಗುತ್ತದೆ. ಮತ್ತು ಹೃದಯ ಚೈತನ್ಯಗೊಳ್ಳಲು ಸಹಾಯಕ.
ಇದನ್ನೂ ಓದಿ: World Hypertension Day 2021: ಹೈಪರ್ ಟೆನ್ಶನ್ ನಿಯಂತ್ರಣ ಹೇಗೆ ಸಾಧ್ಯ? ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಪರಿಹಾರವಿದೆಯೇ?