ಮೊಣಕಾನಲಿನ ನೋವು ಉಳುಕು ಮಾತ್ರವಲ್ಲ, ಗಂಭೀರ ಸಮಸ್ಯೆಯೂ ಆಗಿರಬಹುದು! ಡಾ.ಯೋಗೀಶ್ ಡಿ.ಕಾಮತ್ ಹೇಳೋದೇನು?
ಮೊಣಕಾಲಿನ ಚಲನೆ ನೋಡಲು ಸಾಮಾನ್ಯ ಎನಿಸಿದರೂ ಇದು ಒಂದು ಸಂಕೀರ್ಣ ಚಲನೆಯೇ ಆಗಿದೆ. ಮೊಣಕಾಲಿನ ಚಿಪ್ಪಿನ ನೈಸರ್ಗಿಕ ಚಲನೆಯಿಂದ ದೀರ್ಘ ಸಮಯದ ವರೆಗೆ ನಿಂತುಕೊಳ್ಳಲು ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಮೊಣಕಾಲು ನೆರವಾಗುತ್ತದೆ. ಮೂಳೆ, ಸ್ನಾಯು ಹಾಗೂ ಲಿಗಾಮೆಂಟ್ ರಚನೆಯ ಉತ್ತಮವಾದ ಹೊಂದಾಣಿಕೆಯಿಂದ ಕಾಲಿನ ಚಲನೆ ತಡೆಯಿಲ್ಲದಂತೆ ನಡೆಯಲು ಸಹಕಾರಿಯಾಗುತ್ತದೆ. ಆದರೆ ಮೊಣಕಾಲಿಗೆ ಪೆಟ್ಟಾದಾಗ ಯಾವ ರೀತಿಯ ಸಮಸ್ಯೆ ಎಂದು ಪತ್ತೆಹಚ್ಚುವಲ್ಲಿ ಗೊಂದಲವನ್ನೂ ಉಂಟುಮಾಡುತ್ತದೆ. ಅದನ್ನು ಪತ್ತೆ ಮಾಡುವುದು ಹೇಗೆ? ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸೊಂಟ ಮತ್ತು ಮೊಣಕಾಲು ಸರ್ಜನ್ ಮತ್ತು ಸ್ಪೋರ್ಟ್ಸ ಇಂಜ್ಯೂರಿ ತಜ್ಞ ಡಾ.ಯೋಗೀಶ್ ಡಿ.ಕಾಮತ್ ಹೇಳಿದ್ದಾರೆ.

ನಡೆದಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅತಿದೊಡ್ಡ ಕೀಲು ಎಂದರೆ ಅದು ಮೊಣಕಾಲು (Knee pain). ಹೀಗಾಗಿ ಅನೇಕ ಸಂದರ್ಭಗಳಲ್ಲಿ ಈ ಕೀಲು ಹಾನಿಗೊಳಗಾಗುತ್ತದೆ. ವಾಹನ ಅಪಘಾತ, ಕ್ರೀಡಾ ಸಮಯದಲ್ಲಿ ಅವಘಡ, ಅಥವಾ ಜಾರಿ ಬಿದ್ದಾಗ ಮೊಣಕಾಲಿಗೆ ಪೆಟ್ಟಾಗುವುದು ಹೆಚ್ಚು. ಹೀಗಾಗಿ ಈ ಮೊಣಕಾಲಿನ ನೋವು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಆದರೆ ಈ ನೋವು ಯಾವುದೋ ಉಳುಕುವಿಕೆಯಿಂದ ಉಂಟಾಗಿದ್ದೋ ಅಥವಾ ಕೀಲು ಗಂಭೀರವಾಗಿ ಸಮಸ್ಯೆಗೆ ಗುರಿಯಾಗಿದೆಯೋ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಇಲ್ಲದಿದ್ದಲ್ಲಿ ದೀರ್ಘಕಾಲದ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ.
ಮೊಣಕಾಲಿನ ಚಲನೆ ನೋಡಲು ಸಾಮಾನ್ಯ ಎನಿಸಿದರೂ ಇದು ಒಂದು ಸಂಕೀರ್ಣ ಚಲನೆಯೇ ಆಗಿದೆ. ಮೊಣಕಾಲಿನ ಚಿಪ್ಪಿನ ನೈಸರ್ಗಿಕ ಚಲನೆಯಿಂದ ದೀರ್ಘ ಸಮಯದ ವರೆಗೆ ನಿಂತುಕೊಳ್ಳಲು ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಮೊಣಕಾಲು ನೆರವಾಗುತ್ತದೆ. ಮೂಳೆ, ಸ್ನಾಯು ಹಾಗೂ ಲಿಗಾಮೆಂಟ್ ರಚನೆಯ ಉತ್ತಮವಾದ ಹೊಂದಾಣಿಕೆಯಿಂದ ಕಾಲಿನ ಚಲನೆ ತಡೆಯಿಲ್ಲದಂತೆ ನಡೆಯಲು ಸಹಕಾರಿಯಾಗುತ್ತದೆ. ಆದರೆ ಮೊಣಕಾಲಿಗೆ ಪೆಟ್ಟಾದಾಗ ಯಾವ ರೀತಿಯ ಸಮಸ್ಯೆ ಎಂದು ಪತ್ತೆಹಚ್ಚುವಲ್ಲಿ ಗೊಂದಲವನ್ನೂ ಉಂಟುಮಾಡುತ್ತದೆ.
ಗಂಭೀರವಾದ ಗಾಯವಾದಾಗ ವೈದ್ಯಕೀಯ ನೆರವು ಅತ್ಯಗತ್ಯ , ಆದರೆ ಬಹಳಷ್ಟು ಮೊಣಕಾಲಿನ ಸಮಸ್ಯೆಯನ್ನ ಸಣ್ಣ ಉಳುಕಿನ ಸಮಸ್ಯೆ , ನಡೆದಾಡಲು ತಡೆಯಿಲ್ಲ ಎಂದು ಭಾವಿಸಿ ಕಡೆಗಣಿಸಲಾಗುತ್ತದೆ. ದಿನ ಕಳೆದಂತೆ ಕಂಡುಬರುವ ಕೆಲ ಗಂಭೀರ ಸಮಸ್ಯೆಯ ಲಕ್ಷಣವನ್ನೂ ಕಡೆಗಣಿಸಲಾಗುತ್ತದೆ. ಹಲವರು ‘ನೀ ಕ್ಯಾಪ್’ ಧರಿಸಿ ಸ್ವಯಂ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ನೋವು ತಾಳಲಾರದೇ ವೈದ್ಯರ ನೆರವು ಕೋರಿ ಬರುವಾಗ ಸಮಸ್ಯೆ ಗಂಭೀರ ಹಂತವನ್ನು ತಲುಪಿರುತ್ತದೆ. ಹೀಗಿರುವಾಗ ಮೊಣಕಾಲಿನ ನೋವಿನ ಬಗ್ಗೆ ಕೆಲವು ಅಂಶಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ.
1) ಅವಘಡದ ಬಳಿಕ ಕಾಲು ವಕ್ರವಾಗಿ ಕಾಣುತ್ತಿದೆಯೇ ಅಥವಾ ಅತೀವ ನೋವು , ದೊಡ್ಡ ಗಾಯದೊಂದಿಗೆ ರಕ್ತಸ್ರಾವವಾಗುತ್ತಿದೆಯೇ? ಇದು ಮೂಳೆ ಮುರಿತವಿರಬಹುದು. ನಾಜೂಕಾಗಿ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವುದು ಅನಿವಾರ್ಯ.
2) ಅವಘಡದ ಬಳಿಕ ವ್ಯಕ್ತಿಗೆ ಮೊಣಕಾಲನ್ನು ಬಗ್ಗಿಸಲು ಹಾಗೂ ನೇರಮಾಡಲು ಸಾಧ್ಯವಾದರೆ ಮತ್ತು ಕಾಲನ್ನು ನೇರವಾಗಿ ಮೇಲಕ್ಕೆತ್ತಲು ಸಮಸ್ಯೆಯಾಗದಿದ್ದಲ್ಲಿ ಇದು ಯಾವುದೇ ಮೂಳೆ ಅಥವಾ ಸ್ನಾಯು ಮುರಿತದ ಸಮಸ್ಯೆ ಅಲ್ಲ ಎನ್ನಬಹುದು. ವ್ಯಕ್ತಿಗೆ ಆರಾಮದ ಅವಶ್ಯಕತೆ ಇರುತ್ತದೆ. ಜೊತೆಗೆ ಊತವಿದ್ದಲ್ಲಿ ಐಸ್ ಪ್ಯಾಕ್ ಇಟ್ಟು ಊತವನ್ನು ಕಡಿಮೆ ಮಾಡಬಹುದು. ನಿಧಾನವಾಗಿ ಉತ್ತಮ ಬೆಂಬಲದೊಂದಿಗೆ ಕೆಲ ಹೆಜ್ಜೆ ನಡೆಯುವುದು ಉತ್ತಮ.
3) ಮೊಣಕಾಲಿಗೆ ಪೆಟ್ಟಾದಾಗ ಊತ ಕಂಡುಬಂದಲ್ಲಿ, ಊತದ ಬೆಳವಣಿಗೆಯನ್ನು ಗಮನಿಸಿ. ನಡೆಯಲು ಸಾಧ್ಯವಾದರೂ ಊತ ಹೆಚ್ಚಾಗುತ್ತಿದ್ದಲ್ಲಿ ಇದು ಮೊಣಕಾಲಿನ ಒಳಗೆ ಸಣ್ಣ ಮುರಿತ ಅಥವಾ ಲಿಗಾಮೆಂಟ್‌ಗೆ ಪೆಟ್ಟಾಗಿರುವ ಸಾಧ್ಯತೆ ಇರುತ್ತದೆ. ತಕ್ಷಣವಲ್ಲದಿದ್ದರೂ ವೈದ್ಯರ ತಪಾಸಣೆಯ ಅಗತ್ಯವಿರುತ್ತದೆ.
4) ಯಾವುದೇ ಗಾಯ, ಊತ, ರಕ್ತಸ್ರಾವ, ನಡೆಯಲು ಸಮಸ್ಯೆ ಇಲ್ಲದೇ ಕೇವಲ ನೋವು ಕಂಡುಬಂದಲ್ಲಿ, ಮನೆಯಲ್ಲೇ ಆರಾಮ ತೆಗೆದುಕೊಳ್ಳಿ, ನೋವಿನ ಲೇಪನವನ್ನು ಹಚ್ಚಿ. ಆದರೆ 2-3 ದಿನಗಳ ಬಳಿಕವೂ ನೋವು ಮುಂದುವರೆದಲ್ಲಿ ವೈದ್ಯರನ್ನು ಸಂಪರ್ಕಿಸಿ.
5) ಊತ, ಮೊನಚಾದ ನೋವು ಮೂರು ವಾರಗಳ ಬಳಿಕವೂ ಮುಂದುವರೆದರೆ, ಇನ್ನೂ ನಿರ್ಲಕ್ಷಿಸುವುದು ಸರಿಯಲ್ಲ. ಇದು ಚಿಕಿತ್ಸೆಗೆ ನಿಲುಕದ ಸಮಸ್ಯೆಯಾಗಿ ಬದಲಾಗಬಹುದು.
ಸಾಕಷ್ಟು ಜನರು ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕಾಗಬಹುದು ಎಂದು ಹೆದರಿ ತಜ್ಞರಿಂದ ದೂರವಿರುತ್ತಾರೆ. ಆದರೆ ಸಮಸ್ಯೆಯನ್ನು ನಿರ್ಲಕ್ಷಿಸುವುದರಿಂದ ಮತ್ತಷ್ಟು ಗಂಭೀರವಾಗಬಹುದು. ತಜ್ಞರು ಸಲಹೆ ನೀಡುವ ಶಸ್ತ್ರಚಿಕಿತ್ಸೆಗಳು ಶೀಘ್ರವಾಗಿ ಗುಣಮುಖವಾಗಲು ನೆರವಾಗುತ್ತದೆ. ಲಿಗಾಮೆಂಟ್ ಹಾಗೂ ಕಾರ್ಟಿಲೇಜ್ ಸಮಸ್ಯೆಗೆ ದೀರ್ಘಕಾಲದ ಪರಿಹಾರವನ್ನು ನೀಡಬಲ್ಲದು. ಕ್ರೀಡಾಪಟುಗಳು ಸಮಸ್ಯೆಯಿಂದ ಹೊರಬಂದು ಮತ್ತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಕ.
ಇದನ್ನೂ ಓದಿ: ದೇಹದಲ್ಲಿ ಸಂಗ್ರಹವಾದ ಕೆಟ್ಟ ತ್ಯಾಜ್ಯ ಹೊರಹಾಕಲು ಈ ರೀತಿ ಮಾಡಿ
ಯುವಕರಲ್ಲಿ ಆರ್ಥರೈಟೀಸ್ ಹೆಚ್ಚಳ
ಯುವಕರಲ್ಲಿ ಆರ್ಥರೈಟಿಸ್ ಸಮಸ್ಯೆ ಹೆಚ್ಚಳದೊಂದಿಗೆ ಭಾರತ ಆರ್ಥರೈಟೀಸ್ ರಾಜಧಾನಿಯಾಗಿ ಬದಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಅವೈಜ್ಞಾನಿಕ ಭಂಗಿಯಲ್ಲಿ ಕುಳಿತುಕೊಳ್ಳುವುದು, ವ್ಯಾಯಾಮಗಳನ್ನು ಕಡೆಗಣಿಸುವುದು ಈ ಸಮಸ್ಯೆಗೆ ಮೂಲ ಕಾರಣ. ಇದರಿಂದ ಸಣ್ಣಪುಟ್ಟ ಗಾಯಗಳೂ ದೊಡ್ಡ ಸಮಸ್ಯೆಗೆ ಕಾರಣವಾಗುತ್ತವೆ. ಹೀಗಾಗಿ ಮೊಣಕಾಲು ನೋವಿಗೆ ಸಂಬಂಧಿಸಿ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಇದರಿಂದ ಮೊಣಕಾಲಿನ ಒಳಗೆ ಕೆಲವು ರಚನೆಗಳಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ಆರ್ಥರೈಟಿಸ್ ಸಮಸ್ಯೆ ಪತ್ತೆಹಚ್ಚಿದ್ದಲ್ಲಿ ಕೆಲವು ವ್ಯಾಯಾಮ, ಕುಳಿತುಕೊಳ್ಳುವ, ನಡೆಯುವ ಭಂಗಿಯನ್ನು ಸರಿಪಡಿಸುವ ಮೂಲಕ ಆರ್ಥರೈಟೀಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಡಾ.ಯೋಗೀಶ್ ಡಿ.ಕಾಮತ್, (ಸೊಂಟ ಮತ್ತು ಮೊಣಕಾಲು ಸರ್ಜನ್ ಮತ್ತು ಸ್ಪೋರ್ಟ್ಸ ಇಂಜ್ಯೂರಿ ತಜ್ಞರು, ಕೆಎಂಸಿ ಆಸ್ಪತ್ರೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ಮಂಗಳೂರು)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Wed, 26 March 25