AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆನೋಪಾಸ್ ವೇಳೆ ರಾತ್ರಿ ಬೆವರು, ಮೂಡ್ ಸ್ವಿಂಗ್: ಮಹಿಳೆಯರು ತಿಳಿಯಬೇಕಾದ ಸಂಗತಿಗಳು

ಮೆನೋಪಾಸ್ ಮಹಿಳೆಯರ ಜೀವನದಲ್ಲಿ ಸಂಭವಿಸುವ ಸಹಜ ಬದಲಾವಣೆಯಾಗಿದೆ. ಈ ಅವಧಿಯಲ್ಲಿ ಹಾರ್ಮೋನ್‌ಗಳ ಮಟ್ಟ ಬದಲಾಗುವುದರಿಂದ ಹಠಾತ್ ಬಿಸಿ ಅನುಭವ, ರಾತ್ರಿ ಬೆವರು, ಮನಸ್ಥಿತಿಯ ಏರಿಳಿತ, ತೂಕ ಹೆಚ್ಚಳ ಮತ್ತು ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವರಿಗೆ ಯೋನಿಯ ಶುಷ್ಕತೆ ಹಾಗೂ ಮೂತ್ರದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಈ ಬದಲಾವಣೆಗಳನ್ನು ಅರ್ಥಮಾಡಿಕೊಂಡು, ಸೂಕ್ತ ಆಹಾರ, ವ್ಯಾಯಾಮ ಮತ್ತು ವೈದ್ಯರ ಸಲಹೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.

ಮೆನೋಪಾಸ್ ವೇಳೆ ರಾತ್ರಿ ಬೆವರು, ಮೂಡ್ ಸ್ವಿಂಗ್: ಮಹಿಳೆಯರು ತಿಳಿಯಬೇಕಾದ ಸಂಗತಿಗಳು
Menopause SymptomsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Oct 16, 2026 | 3:35 PM

Share

ಮಹಿಳೆಯರ ಜೀವನದಲ್ಲಿ ಮೆನೋಪಾಸ್ ಒಂದು ಸಹಜ ಜೈವಿಕ ಹಂತವಾಗಿದೆ. ಈ ಅವಧಿಯಲ್ಲಿ ಮುಟ್ಟಿನ ಚಕ್ರ ಶಾಶ್ವತವಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಅಂಡಾಶಯಗಳ ಚಟುವಟಿಕೆ ಕಡಿಮೆಯಾಗುವುದರಿಂದ ಈಸ್ಟ್ರೋಜನ್‌ನಂತಹ ಹಾರ್ಮೋನ್‌ಗಳ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಎಲ್ಲ ಮಹಿಳೆಯರಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡುಬರುವುದಿಲ್ಲವಾದರೂ ಕೆಲವು ಲಕ್ಷಣ ಕಂಡುಬಂದರೆ ತಡಮಾಡದೆಯೇ ವೈದ್ಯರ ಸಲಹೆ ಪಡೆಯಬೇಕು. ಹಾಗಾದರೆ ಮೆನೋಪಾಸ್ ಸಮಯದಲ್ಲಿ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಮತ್ತು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಠಾತ್ ಬಿಸಿ ಅನುಭವ ಮತ್ತು ರಾತ್ರಿ ಬೆವರು ಬರುವುದು

ಮೆನೋಪಾಸ್ ಸಮಯದಲ್ಲಿ ಮುಖ, ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಏಕಾಏಕಿ ಬಿಸಿಯಾಗುವ ಅನುಭವ ಉಂಟಾಗಬಹುದು. ಇದನ್ನು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಕೆಲವರಿಗೆ ಈ ಸಂದರ್ಭದಲ್ಲಿ ಚರ್ಮ ಕೆಂಪಾಗುವುದು ಮತ್ತು ಹೆಚ್ಚು ಬೆವರುವುದು ಕಂಡುಬರುತ್ತದೆ. ರಾತ್ರಿ ಬೆವರಿನಿಂದ ನಿದ್ರೆಗೆ ತೊಂದರೆಯಾಗಬಹುದು.

ಮನಸ್ಥಿತಿಯಲ್ಲಿ ಬದಲಾವಣೆ

ಈ ಅವಧಿಯಲ್ಲಿ ಕೆಲ ಮಹಿಳೆಯರಿಗೆ ಕಿರಿಕಿರಿ, ಆತಂಕ, ದುಃಖ ಅಥವಾ ಮನಸ್ಥಿತಿಯಲ್ಲಿ ಏರಿಳಿತ ಉಂಟಾಗಬಹುದು. ನಿದ್ರೆಯ ಕೊರತೆಯೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಕೂಡ ಕೆಲವರಲ್ಲಿ ಕಂಡುಬರಬಹುದು.

ಇದನ್ನೂ ಓದಿ: ಫುಡ್ ಪಾಯ್ಸನಿಂಗ್‌ನಿಂದ ಹೊಟ್ಟೆ ನೋವು ಕಂಡುಬಂದರೆ ಈ ಸರಳ ಕ್ರಮ ಅನುಸರಿಸಿ

ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ

ಸಾಮಾನ್ಯವಾಗಿ ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲು ಈಸ್ಟ್ರೋಜನ್ ಪ್ರಮುಖ ಪಾತ್ರ ವಹಿಸುತ್ತದೆ. ಮೆನೋಪಾಸ್ ನಂತರ ಈ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಮೂಳೆಗಳ ಸಾಂದ್ರತೆ ಕುಸಿಯುವ ಅಪಾಯ ಹೆಚ್ಚುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಾಗಬಹುದು. ಕ್ಯಾಲ್ಸಿಯಂಯುಕ್ತ ಆಹಾರ, ಸೂಕ್ತ ವ್ಯಾಯಾಮ ಮತ್ತು ವೈದ್ಯರ ಸಲಹೆ ಮುಖ್ಯವಾಗಿವೆ.

ತೂಕ ಹೆಚ್ಚಳ ಮತ್ತು ಚಯಾಪಚಯದಲ್ಲಿ ಬದಲಾವಣೆ

ಮೆನೋಪಾಸ್ ಅವಧಿಯಲ್ಲಿ ಕೆಲ ಮಹಿಳೆಯರಿಗೆ ತೂಕ ಹೆಚ್ಚಾಗಬಹುದು. ವಯಸ್ಸು, ದೈಹಿಕ ಚಟುವಟಿಕೆ, ನಿದ್ರೆ ಮತ್ತು ಹಾರ್ಮೋನ್‌ಗಳ ಬದಲಾವಣೆ ಇದಕ್ಕೆ ಕಾರಣವಾಗಬಹುದು. ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಸಹಾಯಕವಾಗುತ್ತವೆ.

ಯೋನಿಯ ಶುಷ್ಕತೆ ಮತ್ತು ಮೂತ್ರದ ಸಮಸ್ಯೆಗಳು

ಈಸ್ಟ್ರೋಜನ್ ಮಟ್ಟ ಕಡಿಮೆಯಾಗುವುದರಿಂದ ಯೋನಿಯ ಭಾಗದಲ್ಲಿ ಶುಷ್ಕತೆ, ತುರಿಕೆ ಅಥವಾ ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವರಿಗೆ ಮೂತ್ರ ವಿಸರ್ಜನೆಯ ವೇಳೆ ಉರಿ ಮತ್ತು ಪದೇಪದೇ ಮೂತ್ರದ ಸೋಂಕು ಉಂಟಾಗುವ ಸಮಸ್ಯೆಗಳೂ ಎದುರಾಗಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಮೆನೋಪಾಸ್ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ?

ಮೆನೋಪಾಸ್ ಕಾಯಿಲೆಯಲ್ಲ, ಮಹಿಳೆಯರ ಜೀವನದ ಸಹಜ ಹಂತ. ಪೌಷ್ಟಿಕ ಆಹಾರ ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಲಕ್ಷಣಗಳು ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕು.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More