Purple Day For Epilepsy 2026: ಮಾರ್ಚ್ 26 ರಂದು ನೇರಳೆ ದಿನವನ್ನು ಆಚರಿಸುವುದೇಕೆ ಗೊತ್ತಾ?
ಎಪಿಲೆಪ್ಸಿ ಅಥವಾ ಅಪಸ್ಮಾರ ಎಂಬುದು ಮೆದುಳಿನ ನರ ಸಮಸ್ಯೆಯಾಗಿದ್ದು, ಈ ಕಾಯಿಲೆಗೆ ಸಕಾಲದಲ್ಲಿ ರೋಗ ನಿರ್ಣಯವನ್ನು ಮಾಡುವುದು ಬಹಳ ಮುಖ್ಯವಾಗಿದೆ. ಅಪಸ್ಮಾರ ಕಾಯಿಲೆಯನ್ನು ಪ್ರತಿನಿಧಿಸುವ ಬಣ್ಣ ಪರ್ಪಲ್ ಅಥವಾ ನೇರಳೆ ಆಗಿರುವುದರಿಂದ, ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 26 ರಂದು ಪ್ರಪಂಚದಾದ್ಯಂತ ಪರ್ಪಲ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವನ್ನು ತಿಳಿಯೋಣ ಬನ್ನಿ.

ಅಪಸ್ಮಾರ ಅಥವಾ ಎಪಿಲೆಪ್ಸಿ (Epilepsy) ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಉಂಟಾಗುವ ಹಠಾತ್ ಬದಲಾವಣೆಯಿಂದ ಅಪಸ್ಮಾರ ಸಂಭವಿಸುತ್ತದೆ. ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಸಕಾಲದಲ್ಲಿ ರೋಗ ನಿರ್ಣಯವನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ 50 ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಇಂದಿಗೂ ಕೂಡ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇರಳೆ ದಿನದ ಇತಿಹಾಸವೇನು?
ಪ್ರತಿ ವರ್ಷ ಮಾರ್ಚ್ 26 ರಂದು ನೇರಳೆ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ. ಈ ರೋಗವು ಲ್ಯಾವೆಂಡರ್ ಹೂವಿನಿಂದ ಪ್ರೇರಿತವಾಗಿದೆ ಮತ್ತು ಒಂಟಿತನವನ್ನು ಪ್ರತಿನಿಧಿಸುತ್ತದೆ. ಇದನ್ನು ಮೊದಲು 2008 ರಲ್ಲಿ ಅಪಸ್ಮಾರದಿಂದ ಬಳಲುತ್ತಿರುವ 9 ವರ್ಷದ ಹುಡುಗಿ ಕ್ಯಾಸಿಡಿ ಮೇಗನ್ ಪ್ರಾರಂಭಿಸಿದಳು.
ಕೆನಡಾದ ಒಂಬತ್ತು ವರ್ಷದ ಕ್ಯಾಸಿಡಿ ಮೇಗನ್, ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆ ತನ್ನ ಈ ಕಾಯಿಲೆಯೊಂದಿಗಿನ ಹೋರಾಟದಿಂದ ಪ್ರೇರಿತರಾಗಿ 2008 ರಲ್ಲಿ ಪರ್ಪಲ್ ಡೇ ಅನ್ನು ಸ್ಥಾಪಿಸಿದಳು. ಕ್ಯಾಸಿಡಿಯ ಈ ಪ್ರಯತ್ನಗಳನ್ನು ಕೆನಡಾದ ಎಪಿಲೆಪ್ಸಿ ಅಸೋಸಿಯೇಷನ್ ಆಫ್ ದಿ ಮ್ಯಾರಿಟೈಮ್ಸ್ (EAM) ಹಾಗೂ ನ್ಯೂಯಾರ್ಕ್‌ನ ಅನಿತಾ ಕೌಫ್‌ಮನ್ ಫೌಂಡೇಶನ್ ಬೆಂಬಲಿಸಿದವು ಮತ್ತು ಅಂತಿಮವಾಗಿ ಆ ದಿನವು ಅಂತರರಾಷ್ಟ್ರೀಯ ಕಾರ್ಯಕ್ರಮವಾಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಅನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಟಿಬಿ ರೋಗದ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?
ಅಪಸ್ಮಾರ ಜಾಗೃತಿ ದಿನದ ಮಹತ್ವವೇನು?
- ಅಪಸ್ಮಾರದ ನೇರಳೆ ದಿನವು ಮಹತ್ವದ್ದಾಗಿದೆ ಏಕೆಂದರೆ ಇದು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
- ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
- ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
- ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
