ಐಟಿ ನೀತಿ 2020-25: ಏನಿದೆ ಏನಿಲ್ಲ? ಕನ್ನಡಿಗರಿಗೆ ಏನುಪಯೋಗ?

ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್​-2020ರ ಭಾಗವಾಗಿ ರಾಜ್ಯ ಸರ್ಕಾರ ಮುಂದಿನ ಐದು ವರ್ಷಗಳಿಗೆ ಹೊಸ ಐಟಿ ನೀತಿ ಜಾರಿಗೆ ತಂದಿದೆ. ದೇಶದ ಐಟಿ ಉದ್ದಿಮೆಯಲ್ಲಿ ದೊಡ್ಡ ಹೆಸರಿರುವ ಕರ್ನಾಟಕದ ಪಾಲನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಸ ನೀತಿಯದ್ದಾಗಿದ್ದು ಈ ಮೂಲಕ ಐಟಿ ಕ್ಷೇತ್ರದ ವಿಕೇಂದ್ರೀಕರಣವನ್ನು ಪ್ರತಿಪಾದಿಸಲಾಗಿದೆ. ಈ ಕುರಿತು ಟಿವಿ9 ಡಿಜಿಟಲ್​ನೊಂದಿಗೆ ಮಾತನಾಡಿದ ಮೈಲ್ಯಾಂಗ್  ಬುಕ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಸಂತ್ ಶೆಟ್ಟಿ ಈ ನೀತಿಯ ಸಾಧಕ ಬಾಧಕಗಳ ಕುರಿತು ವಿವರಿಸಿದ್ದು ಹೀಗೆ. ಐಟಿ ಕ್ಷೇತ್ರದ ವಿಕೇಂದ್ರೀಕರಣ […]

ಐಟಿ ನೀತಿ 2020-25: ಏನಿದೆ ಏನಿಲ್ಲ? ಕನ್ನಡಿಗರಿಗೆ ಏನುಪಯೋಗ?
Follow us
Skanda
|

Updated on:Nov 23, 2020 | 5:51 PM

ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್​-2020ರ ಭಾಗವಾಗಿ ರಾಜ್ಯ ಸರ್ಕಾರ ಮುಂದಿನ ಐದು ವರ್ಷಗಳಿಗೆ ಹೊಸ ಐಟಿ ನೀತಿ ಜಾರಿಗೆ ತಂದಿದೆ. ದೇಶದ ಐಟಿ ಉದ್ದಿಮೆಯಲ್ಲಿ ದೊಡ್ಡ ಹೆಸರಿರುವ ಕರ್ನಾಟಕದ ಪಾಲನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಸ ನೀತಿಯದ್ದಾಗಿದ್ದು ಈ ಮೂಲಕ ಐಟಿ ಕ್ಷೇತ್ರದ ವಿಕೇಂದ್ರೀಕರಣವನ್ನು ಪ್ರತಿಪಾದಿಸಲಾಗಿದೆ. ಈ ಕುರಿತು ಟಿವಿ9 ಡಿಜಿಟಲ್​ನೊಂದಿಗೆ ಮಾತನಾಡಿದ ಮೈಲ್ಯಾಂಗ್  ಬುಕ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಸಂತ್ ಶೆಟ್ಟಿ ಈ ನೀತಿಯ ಸಾಧಕ ಬಾಧಕಗಳ ಕುರಿತು ವಿವರಿಸಿದ್ದು ಹೀಗೆ.

ಐಟಿ ಕ್ಷೇತ್ರದ ವಿಕೇಂದ್ರೀಕರಣ ಬೆಂಗಳೂರು ಈಗಾಗಲೇ ಅಭಿವೃದ್ಧಿಯಾಗಿದೆ. ಜಾಗತಿಕ ಮಟ್ಟದ ಐಟಿ ಉದ್ದಿಮೆಯಲ್ಲಿ ಗುರುತಿಸಿಕೊಂಡಿದೆ. ಆದರೆ, ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಐಟಿ ಉದ್ದಿಮೆಯನ್ನು ವಿಸ್ತರಿಸಲು ಹೊಸ ಐಟಿ ನೀತಿ ಸಹಕಾರಿಯಾಗಲಿದೆ. ಹುಬ್ಬಳ್ಳಿ, ಮೈಸೂರು, ಮಂಗಳೂರು, ಬೆಳಗಾವಿ, ಕಲಬುರ್ಗಿ ನಗರಗಳು ಐಟಿ ಉದ್ದಿಮೆಯನ್ನು ವಿಸ್ತರಿಸುವ ಸಾಧ್ಯತೆಗಳನ್ನು ಹೊಂದಿವೆ. ಅಲ್ಲದೇ, ಆ ಭಾಗದಲ್ಲಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಎಲ್ಲರೂ ಬೆಂಗಳೂರಿಗೆ ಕೆಲಸ ಅರಸಿ ಬರುವುದನ್ನು ಕಡಿಮೆಗೊಳಿಸುವುದು ಈ ನೀತಿಯ ಮೂಲ ಉದ್ದೇಶ.

ಬೆಂಗಳೂರಿಗೆ ಇದೆಯಾ ಧಾರಣಾ ಸಾಮರ್ಥ್ಯ? ಬೆಂಗಳೂರು ಈಗಾಗಲೇ ತುಂಬಿತುಳುಕುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಹೂಡಿಕೆಗಳಾದರೆ ಸಂಪೂರ್ಣವಾಗಿ ಬೆಂಗಳೂರನ್ನೇ ಅವಲಂಬಿಸುವುದು ಕಷ್ಟ. ಅಲ್ಲದೇ ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದಲೂ ಐಟಿ ಕ್ಷೇತ್ರದ ವಿಕೇಂದ್ರೀಕರಣ ಅವಶ್ಯಕ. ನಗರ ನಿರ್ವಹಣೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಐಟಿ ನೀತಿಯು ಹೊಸ ಹೂಡಿಕೆಗಳಿಗೆ ಎರಡು ಮತ್ತು ಮೂರನೇ ಹಂತದ ನಗರಗಳ ದಾರಿ ತೋರಿಸಲಿದೆ. ಇದೇ ಕಾರಣದಿಂದ ಬೆಂಗಳೂರು ಹೊರತುಪಡಿಸಿ ಇತರೇ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆಗೆ 3 ಕೋಟಿ ರೂಪಾಯಿ ಹಣಕಾಸು ನೆರವನ್ನೂ ಸರ್ಕಾರ ಒದಗಿಸಲಿದೆ.

ವಿಕೇಂದ್ರೀಕರಣ ಅನಿವಾರ್ಯ ಬೆಂಗಳೂರಿನ ಧಾರಣಾ ಸಾಮರ್ಥ್ಯದ ದೃಷ್ಟಿಯಲ್ಲಿ ವಿಕೇಂದ್ರೀಕರಣ ಅನಿವಾರ್ಯವಾಗಿದ್ದು ಇತರ ನಗರಗಳಲ್ಲಿ ಕಂಪನಿಗಳ ಸ್ಥಾಪನೆಯಾಗಲೇಬೇಕು. ಆದರೆ, ಹೊಸ ಐಡಿಯಾಗಳನ್ನು ಹೊತ್ತ ಟ್ಯಾಲೆಂಟ್​ಗಳು ವೈವಿಧ್ಯತೆ ಮತ್ತು ಅವಕಾಶಗಳ ಲಭ್ಯತೆಯಿಂದ ಬೆಂಗಳೂರನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದುವರೆಗೆ ಮನೆಯಿಂದ ಕೆಲಸ ನಿರ್ವಹಿಸುವ ಆಯ್ಕೆಯನ್ನು ನೀಡದ ಕಂಪನಿಗಳು ಸಹ ಪ್ಯಾಂಡೆಮಿಕ್​ನಿಂದ ಈ ಅವಕಾಶ ನೀಡಿವೆ. ಸರ್ಕಾರ ಮತ್ತು ಕಂಪನಿಗಳು ವಿಕೇಂದ್ರೀಕರಣದ ಒಟ್ಟೊಟ್ಟಿಗೆ ಗುಣಮಟ್ಟದ ವರ್ಕ್​ ಫ್ರಂ ಹೋಮ್ ಅವಕಾಶದತ್ತ ಗಮನಹರಿಸಿದರೆ ಇನ್ನಷ್ಟು ಅನುಕೂಲ.

ಕನ್ನಡ, ಕನ್ನಡಿಗರಿಗೆ ಏನಾದ್ರೂ ಸಹಾಯ ಆಗುತ್ತಾ? ಇದೆಲ್ಲದರೊಟ್ಟಿಗೆ ಕನ್ನಡ ಭಾಷೆಯ ಕಡೆಗೂ ಗಮನ ಅಗತ್ಯವಾಗಿದೆ. ಜಗತ್ತಿನ ಐಟಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದರೂ ನಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಉದ್ಯೋಗ, ಕನ್ನಡದ ಫಾಂಟ್, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಈ ವಿಷಯಗಳತ್ತ ಹೆಚ್ಚು ಗಮನಹರಿಸಬೇಕಿದೆ. ಆದರೆ, ಕನ್ನಡಕ್ಕೆ ಅಥವಾ ಕನ್ನಡಿಗರಿಗೆ ಏನಾದರೂ ಸಹಾಯವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.

ಕನ್ನಡಿಗರ ದಿನಬಳಕೆಯ ವಸ್ತುಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತದೆ. ಎಷ್ಟೋ ಕೆಲಸಗಳನ್ನು ಮಾಡಲು ಸಹಾಯವಾಗಬಹುದು. ಹಲವರಿಗೆ ಉದ್ಯೋಗ ಲಭಿಸಬಹುದು. ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ ಏನೋ ಉಪಯೋಗವಾಗುತ್ತೆ ಎನ್ನಲಾಗದು. ಐಟಿ ಕ್ಷೇತ್ರದಲ್ಲಿ ಬೆಂಗಳೂರಿಗೆ ಸಿಕ್ಕ ಉನ್ನತ ಪ್ರಾತಿನಿಧ್ಯಕ್ಕೂ, ಕನ್ನಡದಲ್ಲಿನ ಅತ್ಯುತ್ತಮ ಫಾಂಟ್​ಗಳಿಗೂ ಹೋಲಿಕೆಯೇ ಇಲ್ಲ. ಬೆಂಗಳೂರು ಅಭಿವೃದ್ಧಿಯಾದರೆ ಕನ್ನಡವೂ ಬೆಳೆಯುತ್ತೆ ಎಂಬಂತಿಲ್ಲ ಎನ್ನುವುದು ಕಹಿ ಸತ್ಯ.

ಕಲ್ಪನೆಗೆ ಬರದೆ ತಂತ್ರಜ್ಞಾನ ಬಳಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲಿ ಉನ್ನತ ತಂತ್ರಜ್ಞಾನದ ಬಳಕೆಯಿಂದ ಸಹಜವಾಗಿ ಅಭಿವೃದ್ಧಿಯಾಗುತ್ತೆ. ಇಂಟರ್​ನೆಟ್,ಜಿಪಿಎಸ್​ಗಳನ್ನು ಮೊಬೈಲ್​ನಲ್ಲಿ ಬಳಸತೊಡಗಿದ ನಂತರ ಆದ ಬದಲಾವಣೆಗಳೇ ಇದಕ್ಕೆ ಸಾಕ್ಷಿ. ಡ್ರೋಣ್​ನ್ನು ಎಲ್ಲೆಲ್ಲಿ ಬಳಸಬಹುದು ಎಂಬ ಕಲ್ಪನೆಯೂ ನಮಗಿಲ್ಲ.

ಸದ್ಯ ವಿಡಿಯೋ ಚಿತ್ರೀಕರಣಕ್ಕೆ ಮಾತ್ರ ಬಳಸುತ್ತಿದ್ದೇವೆ. ಆದರೆ, ಕೆಲವೇ ವರ್ಷಗಳಲ್ಲಿ ಜೊಮಾಟೊ,ಸ್ವಿಗ್ಗಿಗಳು ಡ್ರೋಣ್ ಮೂಲಕ ಆಹಾರವನ್ನು ಮನೆಬಾಗಿಲಿಗೆ ತಂದುಕೊಡುತ್ತವೆ. ಅಮೇಜಾನ್, ಪ್ಲಿಫ್​ಕಾರ್ಟ್​ಗಳೂ ಇದನ್ನೇ ಅನುಸರಿಸುತ್ತವೆ. ಆಹಾರ ಕ್ಷೇತ್ರದಲ್ಲಿ ಉನ್ನತ ತಂತ್ರಜ್ಞಾನದ ಬಳಕೆ ಧಾನ್ಯಗಳ ಬಾಳಿಕೆಯನ್ನು ಹೆಚ್ಚಿಸಬಹುದು. ನಮಗೆ ಕಲ್ಪನೆಗೆ ಬರದೆ ಎಷ್ಟೋ ಆಧುನಿಕ ತಂತ್ರಜ್ಞಾನವನ್ನು ದಿನನಿತ್ಯ ಬಳಸುತ್ತೇವೆ. -ಗುರುಗಣೇಶ ಭಟ್ ಡಬ್ಗುಳಿ

Published On - 4:44 pm, Mon, 23 November 20