Vote From Home: ಲೋಕಸಭೆ ಚುನಾವಣೆ, ಕರ್ನಾಟಕದಲ್ಲಿ ಮನೆಯಿಂದಲೇ ಮತದಾನ ಮಾಡಲು 12 ಲಕ್ಷ ಮಂದಿಗೆ ಅವಕಾಶ
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಜನ ಮನೆಯಿಂದಲೇ ಮತ ಚಲಾಯಿಸಿದ್ದರು. ಇದೀಗ ವೋಟ್ ಫ್ರಂ ಹೋಮ್ ಬಗ್ಗೆ ಹೆಚ್ಚಿನವರಲ್ಲಿ ಅರಿವು ಮೂಡಿಸುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸುಮಾರು 12 ಲಕ್ಷ ಮಂದಿ ಮನೆಯಿಂದಲೇ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ ಎಂದು ಆಯೋಗ ತಿಳಿಸಿದೆ.
ಬೆಂಗಳೂರು, ಏಪ್ರಿಲ್ 8: ಕರ್ನಾಟಕದಲ್ಲಿ 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು (Senior Citizens) ಮತ್ತು 6.13 ಲಕ್ಷ ವಿಕಲಚೇತನರು (PwD) ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮನೆಯಿಂದಲೇ ಮತ ಚಲಾಯಿಸಲು (VfH) ಅರ್ಹತೆ ಹೊಂದಿದ್ದಾರೆ ಎಂಬುದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ತಿಳಿದುಬಂದಿದೆ. ಮನೆಯಿಂದಲೇ ಮತದಾನ ಮಾಡಲು ಬೇಕಾದ ಅರ್ಜಿ ನಮೂನೆ 12ಡಿ (12D) ವಿತರಿಸುವ ಪ್ರಕ್ರಿಯೆಯನ್ನು ಚುನಾವಾಣಾ ಆಯೋಗದ ಅಧಿಕಾರಿಗಳು ಈಗಾಗಲೇ ಆರಂಭಿಸಿದ್ದಾರೆ.
ಅರ್ಜಿ ನಮೂನೆ 12ಡಿ ಮೂಲಕ ಅರ್ಹ ಮತದಾರರು ಮನೆಯಿಂದ ಮತ ಚಲಾಯಿಸಲು ಸಹಾಯಕ ಚುನಾವಣಾಧಿಕಾರಿಗೆ ಮನವಿ ಮಾಡಲು ಅವಕಾಶ ನೀಡಲಾಗಿದೆ. ತಾವು ಮತ ಚಲಾಯಿಸಲು ಮತಗಟ್ಟೆಗೆ ಹೋಗುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಈ ಅರ್ಜಿ ಮೂಲಕ ತಿಳಿಸಬಹುದಾಗಿದೆ. ಕರ್ನಾಟಕದಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ (ಮೊದಲ ಹಂತದ ಮತದಾನಕ್ಕೆ ಮಾರ್ಚ್ 28 ರಂದು ಅಧಿಸೂಚನೆ ಹೊರಡಿಸಲಾಗಿದೆ) ಐದು ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜನರು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ (https://www.eci,gov,in) ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ ಆಯಾ ವ್ಯಾಪ್ತಿಯ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.
2020 ರ ಬಿಹಾರ ವಿಧಾನಸಭೆ ಚುನಾವಣೆ ವೇಳೆ, ಕೋವಿಡ್ ಸಾಂಕ್ರಾಮಿಕದ ಕಾರಣ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಲಾಗಿತ್ತು.
ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಜನರು ಮನೆಯಿಂದಲೇ ಮತ ಚಲಾಯಿಸಿದ್ದರು. ಮನೆಯಿಂದಲೇ ಮತದಾನಕ್ಕೆ ಮನವಿ ಸಲ್ಲಿಸಿದ್ದ ಸುಮಾರು 80,251 ಹಿರಿಯ ನಾಗರಿಕರ ಪೈಕಿ ಶೇ 95 ರಷ್ಟು (76,120) ಮಂದಿ ಮತದಾನ ಮಾಡಿದ್ದರು. ಮನೆಯಿಂದಲೇ ಮತದಾನಕ್ಕೆ ಮನವಿ ಮಾಡಿದ್ದ 19,280 ಅಂಗವಿಕಲರಲ್ಲಿ ಶೇ 97ಕ್ಕಿಂತ (18,811) ಹೆಚ್ಚು ಮಂದಿ ಮತದಾನ ಮಾಡಿದ್ದರು.
ಇದನ್ನೂ ಓದಿ: Vote From Home: 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ, ಹೇಗಿದೆ ಬ್ಯಾಲೆಟ್ ಪೇಪರ್ ವೋಟಿಂಗ್?
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರು (10,280) ಮನೆಯಿಂದಲೇ ಮತ ಚಲಾಯಿಸಿದ್ದರು. ನಂತರದ ಸ್ಥಾನದಲ್ಲಿ ಬೆಳಗಾವಿ (6,975) ಮತ್ತು ತುಮಕೂರು (6,333) ಇದ್ದವು. ಅಂಗವಿಕಲರ ವಿಭಾಗದಲ್ಲಿ ತುಮಕೂರು ಅತಿ ಹೆಚ್ಚು (2,788) ಮತ್ತು ದಕ್ಷಿಣ ಕನ್ನಡ (1,926) ಮತ್ತು ಬೆಳಗಾವಿ (1,661) ನಂತರದ ಸ್ಥಾನದಲ್ಲಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 am, Mon, 8 April 24