ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ
ಬಾಗಲಕೋಟೆ ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಕೂಡಲಸಂಗಮದಂತಹ ಐತಿಹಾಸಿಕ ಪ್ರವಾಸಿ ತಾಣಗಳು ಬೇಸಿಗೆಯ ಬಿಸಿಲ ಬೇಗೆಗೆ ಕಂಗೆಟ್ಟಿವೆ. 39-40 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದರಿಂದ ಸ್ಥಳೀಯ ವ್ಯಾಪಾರ-ವಹಿವಾಟುಕ್ಕೂ ತೀವ್ರ ಹೊಡೆತ ಬಿದ್ದಿದೆ. ಪ್ರವಾಸೋದ್ಯಮಕ್ಕೂ ಬಿಸಿಲ ಎಫೆಕ್ಟ್ ತಟ್ಟಿದೆ.

ಬಾಗಲಕೋಟೆ, ಮೇ 11: ಜಿಲ್ಲೆಯಲ್ಲಿ ಚಾಲುಕ್ಯರ ಐತಿಹಾಸಿಕ ಸ್ಥಳಗಳು, ಬಸವಣ್ಣನವರ ಐಕ್ಯ ಸ್ಥಳ ಮತ್ತು ಸಂಗಮನಾಥ ದೇಗುಲ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಮುಖ ಜಿಲ್ಲೆ ಬಾಗಲಕೋಟೆ (bagalkot). ಆದರೆ ಜಿಲ್ಲೆಗೆ ಇದೀಗ ಪ್ರವಾಸಿಗರ ಬರ ಎದುರಾಗಿದೆ. ಇದಕ್ಕೆ ಕಾರಣ ನೆತ್ತಿ ಸುಡುತ್ತಿರುವ ಬಿರುಬಿಸಿಲು (Heatwave). 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿರುವ ತಾಪಮಾನಕ್ಕೆ ಪ್ರವಾಸಿಗರು ಪ್ರವಾಸಿ ತಾಣಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಉಪಹಾರ, ಲಾಡ್ಜ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೂ ಹೊಡೆತ ಬಿದ್ದಿದೆ.
ಮುಖ್ಯಾಂಶಗಳು
- ಬಾಗಲಕೋಟೆ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಭಣ
- ಬಾದಾಮಿ, ಐಹೊಳೆ, ಕೂಡಲಸಂಗಮ ತಾಣಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿತ
- ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರಕ್ಕೂ ತಟ್ಟಿದ ಬಿಸಿಲ ಎಫೆಕ್ಟ್
ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಾದಾಮಿಯ ಗುಹಾಂತರ ದೇಗುಲಗಳು, ಐಹೊಳೆ-ಪಟ್ಟದಕಲ್ಲಿನ ಶಿಲ್ಪಕಲೆ, ಶರಣರ ನಾಡಿನ ಸಾಕ್ಷಿಯಾದ ಬಸವಣ್ಣನ ಐಕ್ಯ ಮಂಟಪ ಹಾಗೂ ಸಂಗಮನಾಥ ದೇಗುಲ. ಇವೆಲ್ಲವೂ ಈಗ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ 39 ರಿಂದ 40 ಡಿಗ್ರಿ ದಾಟುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯನ್ನೇ ಬಿಟ್ಟು ಹೊರಬರದ ಜನ, ಈ ರಣಬಿಸಿಲಿನಲ್ಲಿ ಪ್ರವಾಸಿ ತಾಣಗಳಿಗೆ ಬರುವುದಾದರೂ ಹೇಗೆ? ಇದರಿಂದಾಗಿ ಬಾದಾಮಿ, ಐಹೊಳೆ ಹಾಗೂ ಕೂಡಲಸಂಗಮಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ
ಜಿಲ್ಲೆಯ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಬಿಸಿಲ ಬೇಗೆಯ ಕಾರಣ ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ.
- 2025 ಜನವರಿಯಿಂದ ಏಪ್ರಿಲ್ವರೆಗೆ 1971 ವಿದೇಶಿ ಪ್ರವಾಸಿಗರು ಐಹೊಳೆಗೆ ಭೇಟಿ ನೀಡಿದ್ದರು. ಆದರೆ 2026ರಲ್ಲಿ ಜನವರಿಯಿಂದ ಏಪ್ರಿಲ್ವರೆಗೆ 1687 ಮಾತ್ರ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
- ಬಾದಾಮಿಗೆ 2025 ಜನವರಿಯಿಂದ ಏಪ್ರಿಲ್ವರೆಗೆ 2849 ಜನ, 2026 ಜನವರಿಯಿಂದ ಏಪ್ರಿಲ್ವರೆಗೆ 3091 ಪ್ರವಾಸಿಗರು ಭೇಟಿ ನೀಡಿದ್ದಾರೆ.
- ಇನ್ನು 2025ರಲ್ಲಿ ಜನವರಿಯಿಂದ ಏಪ್ರಿಲ್ವರೆಗೆ 2326 ಮತ್ತು 2026 ಜನವರಿಯಿಂದ ಏಪ್ರಿಲ್ವರೆಗೆ 2185 ಜನರು ಮಾತ್ರ ಭೇಟಿ ನೀಡಿದ್ದಾರೆ.
ಪ್ರವಾಸಿಗರು ಬಾರದ ಹಿನ್ನೆಲೆ ಒಂದೆಡೆ ಪ್ರವಾಸೋದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಮತ್ತೊಂದೆಡೆ ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿದೆ. ಹೆಚ್ಚು ಪ್ರವಾಸಿಗರು ಭೇಟಿ ವೇಳೆ ಆಗುತ್ತಿದ್ದ ವ್ಯಾಪಾರ ಈ ಬಾರಿ ಇಲ್ಲ. ಉಪಹಾರ, ವಸತಿಗಾಗಿ ಹೋಟೆಲ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೆ ಹೊಡೆತ ಬಿದ್ದಿದೆ.
ಅಧಿಕಾರಿಗಳು ಹೇಳುವುದೇನು?
ಇನ್ನು ಬಿರುಬಿಸಿಲ ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಿ ಮಿತ್ರರು ತುರ್ತು ಸಹಾಯಕ್ಕೆ ಸಿದ್ಧರಿದ್ದಾರೆ. ಆದರೆ ಬಿಸಿಲು ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ನಿಜ ಎಂದು ಪ್ರಭಾರ ಡಿಡಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಮಾತು.
ಇದನ್ನೂ ಓದಿ: ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ
ಒಟ್ಟಿನಲ್ಲಿ, ಬಿಸಿಲ ಬೇಗೆಗೆ ಚಾಲುಕ್ಯರ ನಾಡಿನ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇದು ಪ್ರವಾಸೋದ್ಯಮ ಸೇರಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Mon, 11 May 26




