ಬಾಗಲಕೋಟೆಯ ಸುಪ್ರಸಿದ್ಧ ತುಳಸಿಗೇರಿ ಆಂಜನೇಯನ ದೇವಸ್ಥಾನಕ್ಕೆ ವಾಮಾಚಾರ ಕಾಟ
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ಆಂಜನೇಯ ದೇವಸ್ಥಾನದ ಹಿಂಬಾಗ ಕಳೆದ 11 ತಿಂಗಳಿನಿಂದ ವಾಮಾಚಾರ ನಡೆಯುತ್ತಿದೆ.
ಇದು ಉತ್ತರ ಕರ್ನಾಟಕದ ಪ್ರಸಿದ್ದ ತುಳಸಿಗೇರಿ ಆಂಜನೇಯ ದೇವಸ್ಥಾನ. ಈ ದೇವಸ್ಥಾನಕ್ಕೆ ರಾಜ್ಯ, ಪರರಾಜ್ಯದಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಇಂತಹ ದೇವಸ್ಥಾನಕ್ಕೆ ವಾಮಾಚಾರದ ಕಾಟ ತಗುಲಿದೆ. ಹೌದು ದೇವಸ್ಥಾನದ ದ್ವಾರಬಾಗಿಲು ಬಳಿ ಕಳೆದ 11 ತಿಂಗಳಿಂದ ವಾಮಾಚಾರದ ಕುರುಹುಗಳು ಕಂಡು ಬರುತ್ತಿವೆ. ಈ ವಾಮಾಚಾರವನ್ನು ಯಾರು ಮಾಡುತ್ತಿರಬಹುದೆಂದು ಗ್ರಾಮದ ಜನರು ತಲೆಕೆಡಿಸಿಕೊಂಡಿದ್ದರು. ಈಗ ವಾಮಾಚಾರ ಯಾರು ಮಾಡುತ್ತಿದ್ದರು ಎಂಬವುದು ತಿಳಿದು ಬಂದಿದೆ. ಅದು ಓರ್ವ ಮಹಿಳೆ. ಸದ್ಯ ಈ ಮಹಿಳೆಯ ವಾಮಾಚಾರದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ಆಂಜನೆಯ ಸ್ವಾಮಿ ದೇವಸ್ಥಾನ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿಯಾಗಿದೆ. ಈ ಪವಿತ್ರ ಆಂಜನೇಯನ ದೇವಸ್ಥಾನಕ್ಕೆ ಯಾರೋ ವಾಮಾಚಾರ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಸಿಸಿ ಕ್ಯಾಮೆರಾದಲ್ಲಿ ಸರೆಯಾದ ದೃಶ್ಯಗಳು. ಸಿಸಿ ಕ್ಯಾಮಾರಾ ದೃಶ್ಯದಲ್ಲಿ ಕಳ್ಳರ ರೀತಿ ಅತ್ತಿತ್ತ ನೋಡುತ್ತಾ ಬರುವ ಮಹಿಳೆ ಕ್ಷಣ ಮಾತ್ರದಲ್ಲಿ ದೇವಸ್ಥಾನದ ಹಿಂಬದಿ ದ್ವಾರದಲ್ಲಿ ಕುಂಕುಮ ತುಂಬಿದ ನಿಂಬೆ ಹಣ್ಣು, ಅಕ್ಕಿ ಇಟ್ಟು ಹೋಗುವುದು ಕಂಡು ಬಂದಿದೆ.
ಅಷ್ಟಕ್ಕೂ ಈ ವಾಮಾಚಾರವನ್ನು ತುಳಸಿಗೇರಿ ಗ್ರಾಮದ ನೀಲವ್ವ ವಡ್ಡರ್ ಎಂಬ ಮಹಿಳೆ ಮಾಡುತ್ತಿದ್ದಾಳೆ ಎಂಬುವುದನ್ನು ತಿಳಿದು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ನೀಲವ್ವ ವಡ್ಡರ್ನ್ನು ವಿಚಾರಿಸಲೆಂದು ಅವಳ ಮನೆಗೆ ಹೋದರೆ, ಬಾಗಿಲಿಗೆ ಬೀಗ ಹಾಕಿ ಮಹಿಳೆ ಊರಿಂದ ಕಾಲ್ಕಿತ್ತಿದ್ದಾಳೆ. ನೀಲವ್ವ ವಡ್ಡರ್ ತನ್ನ ವ್ಯಯಕ್ತಿಕ ವಿಚಾರಕ್ಕಾಗಿ ಹೀಗೆ ಮಾಡುತ್ತಿದ್ದಳಾ ಅಥವಾ ಇದರ ಹಿಂದೆ ಯಾರಿರಬಹುದು ಎಂಬ ಸಂಶಯ ದೇವಸ್ಥಾನದ ಅರ್ಚಕರನ್ನು ಕಾಡುತ್ತಿದೆ. ಇನ್ನು ದೇವಸ್ಥಾನದ ಅರ್ಚಕ ವಲಯದ ಕೆಲವರಲ್ಲಿ ಮನಸ್ತಾಪಗಳಿದ್ದು, ಸದ್ಯ ಪುಜಾರಿಕೆ ಮಾಡುತ್ತಿರುವವರಿಗೆ ಹಾಗೂ ದೇವಸ್ಥಾನಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿರುವ ಶಂಕೆ ಕೂಡ ಇದೆ. ಆದರೆ ನೀಲವ್ವ ವಡ್ಡರ್ ಸಿಕ್ಕ ಮೇಲೆ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ರವಿ ಮೂಕಿ ಟಿವಿ9 ಬಾಗಲಕೋಟೆ
Published On - 6:37 pm, Sat, 12 November 22