ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲು
ಶಾಸಕ, ಶಾಸಕರ ಪುತ್ರ, ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ದೇವದಾಸ ಶೇರಖಾನೆ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ
ಬೆಳಗಾವಿ: ಶಾಸಕ ಶ್ರೀಮಂತ ಪಾಟೀಲ್ ಮತ್ತು ಅವರ ಮಗ ಶ್ರೀನಿವಾಸ ಯೋಗೇಶ್ ಪಾಟೀಲ್ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ದೇವದಾಸ ಶೇರಖಾನೆ ಎನ್ನುವವರ ಜಮೀನು ಅತಿಕ್ರಮಿಸಿ ಗೊಬ್ಬರ ಕಾರ್ಖಾನೆ, ಕೆರೆ ನಿರ್ಮಿಸಲಾಗಿದೆ. ಈ ಕುರಿತು ಪ್ರಶ್ನಿಸಿದ್ದಕ್ಕೆ ಶಾಸಕ, ಶಾಸಕರ ಪುತ್ರ, ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ದೇವದಾಸ ಶೇರಖಾನೆ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮತ್ತು ಪುತ್ರ ಶ್ರೀನಿವಾಸ ಯೋಗೇಶ್ ಪಾಟೀಲ್ ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತಾಂತರಗೊಂಡ ಕ್ರಿಶ್ಚಿಯನ್ನರಿಂದ ಹಲ್ಲೆ ಆರೋಪ ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನಲ್ಲಿ ಮತಾಂತರಗೊಂಡ ಕ್ರಿಶ್ಚಿಯನ್ರಿಂದ ಬೋವಿ ಸಮಾಜಕ್ಕೆ ಸೇರಿದ ಗ್ರಾಮಸ್ಥರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಗೃಹ ಸಚಿವರಿಗೆ ಬಿಜೆಪಿಯ ಜಿಲ್ಲಾ ಮುಖಂಡರು ದೂರು ಸಲ್ಲಿಸಿದ್ದಾರೆ. ವಿಕಾಸಸೌಧದಲ್ಲಿ ಸಚಿವರನ್ನು ಭೇಟಿಯಾದ ಮುಖಂಡರು ಈ ಸಂಬಂಧ ದೂರು ಸಲ್ಲಿಸಿದರು.
ಅಪಘಾತ: ಇಬ್ಬರ ಸಾವು ಕ್ಯಾಂಟರ್-ಬೈಕ್ ಮುಖಾಮುಖಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಿನಲ್ಲಿ ನಡೆದಿದೆ. ತುಮಕೂರಿನ ಅಶೋಕ್ ಕುಮಾರ್, ರವಿಕುಮಾರ್ ಮೃತರು. ಅಪಘಾತದ ಬಳಿಕ ಕ್ಯಾಂಟರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪಾದಚಾರಿಗೆ ಬೈಕ್ ಡಿಕ್ಕಿ, ಹಲ್ಲೆಯಿಂದ ಬೈಕ್ ಸವಾರ ಸಾವು ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸಿಟ್ಟಿಗೆದ್ದ ಪಾದಚಾರಿ, ಬೈಕ್ ಸವಾರನನ್ನು ಕಾಲಿನಿಂದ ಒದ್ದ ಘಟನೆ ಕಿತ್ತೂರಿನ ಚೌಕಿಮಠ ಕ್ರಾಸ್ನಲ್ಲಿ ನಡೆದಿದೆ. ಮೃತನನ್ನು ಬೈಕ್ ಸವಾರ ವಿಜಯ ಮಹಾಂತೇಶ್ ಹಿರೇಮಠ (67) ಎಂದು ಗುರುತಿಸಲಾಗಿದೆ. ಬೈಕ್ಗೆ ಹಿಂದಿನಿಂದ ಕಾರು ಗುದ್ದಿದ ಕಾರಣ, ಬೈಕ್ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆಯಿತು. ಕೋಪಗೊಂಡ ಪಾದಚಾರಿ ಸವಾರನ ಮೇಲೆ ಹಲ್ಲೆ ನಡೆಸಿದ ಕಾರಣ ವಿಜಯ ಮಹಾಂತೇಶ್ ಸ್ಥಳದಲ್ಲಿಯೇ ಮೃತಪಟ್ಟರು. ಘಟನೆಯ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್ ಇದನ್ನೂ ಓದಿ: ಬೆಳಗಾವಿ: 4 ಪ್ರಮುಖ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ; ಸವದತ್ತಿ ಯಲ್ಲಮ್ಮ ದೇಗುಲ ಸದ್ಯಕ್ಕಿಲ್ಲ ಓಪನ್