ಬಿಎಂಟಿಸಿಯ 27 ಸಾವಿರ ಸಿಬ್ಬಂದಿಗೆ ಬ್ಯಾಡ್ ನ್ಯೂಸ್: ಈ ತಿಂಗಳು ಸಂಬಳ ಡೌಟ್!
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು 8,000 ಕೋಟಿ ರೂ ನಷ್ಟ ಎದುರಿಸುತ್ತಿವೆ. ಸಂಬಳ ಕೊಡಲು ಹಣವಿಲ್ಲ ಎಂದು ಸ್ವತಃ ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದರು. ಈ ಬೆನ್ನಲ್ಲೇ ಬಿಎಂಟಿಸಿ ಸಿಬ್ಬಂದಿಗೆ ಈ ತಿಂಗಳು ಸಂಬಳ ಆಗುವುದು ಅನುಮಾನ ಎನ್ನಲಾಗುತ್ತಿದೆ. ಆ ಮೂಲಕ ದೊಡ್ಡ ಶಾಕ್ ಎದುರಾಗಿದೆ.

ಮುಖ್ಯಾಂಶಗಳು
- ಬಿಎಂಟಿಸಿ ನೌಕರರಿಗೆ ಸಂಬಳ ನೀಡಲು ನಿಗಮದಲ್ಲಿ ಹಣ ಇಲ್ಲ
- ಬಿಎಂಟಿಸಿ ನೌಕರರಿಗೆ ಸಂಬಳ ನೀಡಲು ಪ್ರತಿ ತಿಂಗಳು 102 ಕೋಟಿ ರೂ ಬೇಕು
- ಬೆಂಗಳೂರಿನಲ್ಲಿ ಸಾರಿಗೆ ನೌಕರರ ಸಂಘದ ಮುಖಂಡ ಜಗದೀಶ್ ಹೇಳಿಕೆ
ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ (ಬಿಎಂಟಿಸಿ) ಹಣ ಇಲ್ಲ. ಹೀಗಾಗಿ ಸಿಬ್ಬಂದಿಗೆ ಈ ತಿಂಗಳು ವೇತನ ಸಿಗುವುದು ಅನುಮಾನ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಜಗದೀಶ್ ತಿಳಿಸಿದ್ದಾರೆ. ಆ ಮೂಲಕ ಸೆಕ್ಯುರಿಟಿಗಳು ಸೇರಿದಂತೆ ಒಟ್ಟು 27 ಸಾವಿರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಪ್ರತಿ ತಿಂಗಳು 102 ಕೋಟಿ ರೂ ಬೇಕು; ಕಲೆಕ್ಷನ್ ಕುಸಿತ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್, ‘ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಚಾಲಕರು, ನಿರ್ವಾಹಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 27 ಸಾವಿರ ನೌಕರರಿಗೆ ಸಂಬಳ ನೀಡಲು ಪ್ರತಿ ತಿಂಗಳು ಬರೋಬ್ಬರಿ 102 ಕೋಟಿ ರೂ ಹಣ ಬೇಕು. ಆದರೆ, ಈ ಬಾರಿ ಬಸ್ಗಳ ಆದಾಯ ಸಂಗ್ರಹ ತೀವ್ರವಾಗಿ ಕುಸಿದಿದ್ದು, ನಿಗಮದಲ್ಲಿ ವೇತನ ಪಾವತಿಸಲು ಹಣವಿಲ್ಲದಂತಾಗಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಯಲ್ಲಿದ್ದು, ಇದರಿಂದಾಗಿ ಸಂಸ್ಥೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ಮುಖಂಡರು ಹೇಳಿದ್ದಾರೆ.
ವೇತನ ಪಾವತಿ ದಿನಾಂಕ ಮುಂದೂಡಿಕೆ ಅಥವಾ ಅರ್ಧ ಸಂಬಳ
‘ಸಾಮಾನ್ಯವಾಗಿ ಬಿಎಂಟಿಸಿಯಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಂದು ಭದ್ರತಾ ಸಿಬ್ಬಂದಿಗೆ, 6ನೇ ತಾರೀಖಿನಂದು ಡ್ರೈವರ್, ಕಂಡಕ್ಟರ್ ಹಾಗೂ ಮೆಕ್ಯಾನಿಕ್‌ಗಳಿಗೆ ಮತ್ತು 7ನೇ ತಾರೀಖಿನಂದು ಅಧಿಕಾರಿಗಳಿಗೆ ವೇತನ ಪಾವತಿ ಮಾಡಲಾಗುತ್ತದೆ. ಆದರೆ ಪ್ರಸಕ್ತ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಈ ಬಾರಿ ಸಂಬಳ ನೀಡುವ ದಿನಾಂಕ ಮುಂದಕ್ಕೆ ಹೋಗಬಹುದು ಅಥವಾ ಸಿಬ್ಬಂದಿಗೆ ಅರ್ಧ ಸಂಬಳವನ್ನು ಮಾತ್ರ ನೀಡಬಹುದು’ ಎಂದು ಅವರು ತಿಳಿಸಿದರು.
ಶಕ್ತಿ ಯೋಜನೆಯ ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಆಗ್ರಹ
‘ಇನ್ನು ರಾಜ್ಯ ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಬರಬೇಕಿರುವ 6,500 ಕೋಟಿ ರೂ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ನೌಕರರ ಮುಖಂಡರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಸಾರಿಗೆ ಸಚಿವರೇ ಸ್ವತಃ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ, ಟಿಕೆಟ್ ದರ ಏರಿಸಲೇಬೇಕು, ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲ’ ಎಂದು ಹೇಳಿರುವುದನ್ನು ಅವರು ಉಲ್ಲೇಖಿಸಿದರು.
ಡಿಸೇಲ್ ಕಂಪನಿಗಳಿಗೆ 600 ಕೋಟಿ ರೂ ಬಾಕಿ
‘ನಿಗಮದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಬಿಎಂಟಿಸಿಯಿಂದ ಡೀಸೆಲ್ ಕಂಪನಿಗಳಿಗೆ 600 ಕೋಟಿ ರೂ ಬಾಕಿ ಪಾವತಿಸಬೇಕಿದೆ. ಇದರ ಜೊತೆಗೆ, ಕಳೆದ ಮೂರು ತಿಂಗಳಿನಿಂದ ಬಸ್‌ಗಳಿಗೆ ಅಗತ್ಯವಿರುವ ಬಿಡಿ ಭಾಗಗಳು ಕೂಡ ಖರೀದಿ ಮಾಡಲಾಗಿಲ್ಲ’ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




