Bengalore Air Show 2025: ಏರ್ ಶೋಗೆ ಮಾಂಸ ಮಾರಾಟ ನಿಷೇಧವೇಕೆ? ವ್ಯಾಪಾರಿಗಳ ವಿರೋಧವೇಕೆ?
ಶತ್ರುಗಳ ಎದೆ ನಡುಗಿಸುವ ಯುದ್ಧ ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸುವುದನ್ನು ಕ್ಷಣ ಕಣ್ತುಂಬಿಕೊಳ್ಳಲು ದಿನಗಣನೆ ಶುರುವಾಗಿದೆ. ಯಲಹಂಕ ವಾಯುನೆಲೆಯಲ್ಲಿ 2025ನೇ ಸಾಲಿನ ಏರ್ ಶೋ ನಡೆಯಲಿದೆ. ಈ ಸಂಬಂಧ ಸಕಲ ತಯಾರಿ ನಡೆಯುತ್ತಿದೆ. ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಅಷ್ಟಕ್ಕೂ ಮಾಂಸ ಮಾರಾಟ ನಿಷೇಧಿಸಿದ್ದೇಕೆ? ಕಾರಣವೇನು? ಮಾಂಸ ಮಾರಾಟ ನಿಷೇಧಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ? ಇಲ್ಲಿದೆ ಓದಿ.
ಬೆಂಗಳೂರು, ಜನವರಿ 27: ಏರೋ ಇಂಡಿಯಾ (Aeroindia) ವತಿಯಿಂದ ಯಲಹಂಕದಲ್ಲಿ ನಡೆಯುವ 2025ನೇ ಸಾಲಿನ ಏರ್ ಶೋಗೆ (Air Show) ಸಿದ್ಧತೆ ಭರದಿಂದ ಸಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್ ಶೋಗೆ ಕೌಂಟ್ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯುವ ಅಂತರರಾಷ್ಟ್ರೀಯ ಏರ್ ಶೋವನ್ನು ನೋಡಲು ಬೆಂಗಳೂರು ಜನ ಕಾತುರರಾಗಿದ್ದಾರೆ. ಏರ್ ಶೋಗೆ ಸಕಲ ತಯಾರಿ ನಡೆಯುತ್ತಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳೋಕೆ ಸಿಟಿಮಂದಿ ಕಾತುರರಾಗಿದ್ದಾರೆ.
ಅಂತರರಾಷ್ಟ್ರೀಯ ಏರ್ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನ ನಿಷೇಧ ಮಾಡಲಾಗುತ್ತೆ. ಅದರಂತೆ, ಈ ಬಾರಿ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲೀಕೆ (BBMP) ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು 26 ದಿನ ಮುಚ್ಚುವಂತೆ ಆದೇಶ ಹೊರಡಿಸಿದೆ. ಪಾಲಿಕೆ ನಿಮಯ ಉಲ್ಲಂಘನೆ ಮಾಡಿದರೇ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ನಂತರವೂ ವ್ಯಾಪಾರಿಗಳು ಮಾಂಸ ಮಾರಾಟ ಮಾಡುತ್ತಿದ್ದಾರೆ.
ಮಾಂಸ ಮಾರಾಟ ನಿಷೇಧ ಏಕೆ?
ಯಲಹಂಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವುದರಿಂದ ಪಕ್ಷಿಗಳ ಹಾರಾಟ ಹೆಚ್ಚಾಗುತ್ತೆ. ಇದರಿಂದ ಏರ್ ಶೋ ಸಂದರ್ಭದಲ್ಲಿ ಯುದ್ಧ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗುತ್ತೆ ಎಂದು ಪಾಲಿಕೆ ಈ ಆದೇಶ ಹೊರಡಿಸಿದೆ. ಪಾಲಿಕೆಯ ಆದೇಶಕ್ಕೆ ಮಾಂಸ ಮಾರಾಟ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಂಸದ ಅಂಗಡಿಗಳು, ಮಾಂಸಾಹಾರ ಹೊಟೇಲ್ಗಳು ಎಂದಿನಂತೆ ಕಾರ್ಯನಿರ್ವಹಿಸ್ತಿವೆ. ಇತ್ತ ಬಾಗಲೂರು ಮುಖ್ಯರಸ್ತೆಯಲ್ಲೂ ಮಟನ್, ಚಿಕನ್ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದಯ, ಪಾಲಿಕೆಯ ಆದೇಶ ಬರೀ ಪತ್ರಕ್ಕೆ ಮಾತ್ರ ಸೀಮಿತವಾಯ್ತ ಎಂಬ ಪ್ರಶ್ನೆ ಉದ್ಭವಿಸಿದೆ. ಯಲಹಂಕ ಸುತ್ತಮುತ್ತ ಎತ್ತರದ ಕಟ್ಟಡಗಳ ಮೇಲೆ ಕ್ರೇನ್ ಬಳಸಿ ಕೆಲಸ ಮಾಡುವುದಕ್ಕೂ ಕೂಡ ಪಾಲಿಕೆ ನಿಷೇಧ ಹೇರಿದೆ.
ಏರ್ ಶೋಗೆ ಭರದ ಸಿದ್ದತೆ
ಯಲಹಂಕದ ಏರ್ ಬೇಸ್ ಸುತ್ತಮುತ್ತ ಏರ್ ಶೋ ತಯಾರಿ ಗರಿಗೆದರಿದ್ದು, ರಸ್ತೆಗಳಲ್ಲಿರುವ ಡಿವೈಡರ್ ಗಳಿಗೆ ಕಬ್ಬಿಣದ ಗ್ರಿಲ್ ಹಾಕಿ ಬಣ್ಣ ಬಳಿಯಲಾಗುತ್ತಿದೆ. ಏರ್ ಬೇಸ್ ಸುತ್ತಮುತ್ತ ಹೆಚ್ಚು ಜನ ಸೇರುವ ಹಿನ್ನೆಲೆಯಲ್ಲಿ ಹೊಸದಾಗಿ ಕಬ್ಬಿಣದ ಗ್ರಿಲ್ಗಳನ್ನ ಅಳವಡಿಸಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆವಹಿಸಲಾಗುತ್ತಿದೆ.
ಯಲಹಂಕ ಮುಖ್ಯರಸ್ತೆ ಸುತ್ತಮುತ್ತ ಸಾರ್ವಜನಿಕರ ಸಂಚಾರ, ಟ್ರಾಫಿಕ್ ನಿಯಂತ್ರಣಕ್ಕೂ ಮುನ್ನೆಚ್ಚರಿಕೆ ವಹಿಸಲು ತಯಾರಿ ಶುರುವಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಲೋಹದ ಹಕ್ಕಿಗಳ ಮೈನವಿರೇಳಿಸುವ ಪ್ರದರ್ಶನಕ್ಕೆ ಈಗಾಗಲೇ ಸ್ಥಳೀಯ ವಿಮಾನಗಳು, ಚಾಪರ್ಗಳು ಯಲಹಂಕ ಏರ್ ಬೇಸ್ನಲ್ಲಿ ಬೀಡುಬಿಟ್ಟಿದ್ದರೇ, ವಿದೇಶಗಳಿಂದ ಆಗಮಿಸುವ ಫೈಟರ್ ಜೆಟ್ಗಳು, ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಎಲ್ಲರ ಗಮನ ಸೆಳೆಯುವ ಸೂರ್ಯಕಿರಣ್ ವಿಮಾನಗಳ ತಂಡ ಸೇರಿದಂತೆ ವಿಭಿನ್ನ ಯುದ್ಧ ವಿಮಾನಗಳ ಬರುವಿಕೆಗಾಗಿ ಕೌಂಟ್ ಡೌನ್ ಶುರುವಾಗಿದೆ.
ಇದನ್ನೂ ಓದಿ: ಚೆನ್ನೈ ಏರ್ ಶೋ ವೇಳೆ ಐವರು ಸಾವು; ‘ಕಳಪೆ ನಿರ್ವಹಣೆ’ ಆರೋಪ ತಿರಸ್ಕರಿಸಿದ ಸ್ಟಾಲಿನ್
ಸದ್ಯ 1996 ರಲ್ಲಿ ಆರಂಭವಾದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ವಾಯುಸೇನೆ, ಬಾಹ್ಯಾಕಾಶ ಇಲಾಖೆ ಸಹಕಾರ ನೀಡುತ್ತ ಬಂದಿದೆ. ಅಂದಿನಿಂದ ಇಂದಿನ ತನಕ ನಡೆಯುತ್ತ ಬಂದಿರುವ ಏರ್ ಶೋ, ಯುದ್ಧ ವಿಮಾನಗಳ ಶಕ್ತಿ, ಸಾಮರ್ಥ್ಯವನ್ನ ಅನಾವರಣ ಮಾಡುವ ಜೊತೆಗೆ ನಮ್ಮ ಭಾರತೀಯ ಸೇನೆಯ ವಾಯುಸೇನೆಯ ಬಲ ಪ್ರದರ್ಶನದ ಜೊತೆಗೆ ವಿದೇಶಗಳ ವಾಯುಸೇನೆಯ ಶೂರತ್ವ ಪ್ರದರ್ಶಿಸಲು ವೇದಿಕೆ ಸೃಷ್ಟಿಸಿಕೊಡುತ್ತಿದೆ. ಏರ್ ಶೋ ಅಂಗಳದಲ್ಲಿ ಸೇನೆಯ ವಿವಿಧ ಸ್ಟಾಕ್ಗಳು ಕೂಡ ತಲೆ ಎತ್ತುವ ಮೂಲಕ ಭಾರತೀಯ ಸೈನ್ಯದ ತಾಂತ್ರಿಕತೆ, ಶಕ್ತಿ ಸಾಮರ್ಥ್ಯಗಳನ್ನು ಜನರಿಗೆ ತಿಳಿಸೋ ಪ್ರಯತ್ನ ನಡೆಯುತ್ತ ಬಂದಿದೆ.
ವೈಮಾನಿಕ ಪ್ರದರ್ಶನದ ವಿಶೇಷತೆಗಳೇನು?
ಈ ಏರೋ ಇಂಡಿಯಾ ಪ್ರದರ್ಶನದಲ್ಲಿ, ಭಾರತೀಯ ಏರೋಸ್ಪೇಸ್ ಮತ್ತು ವಾಯುಯಾನ ಉದ್ಯಮದ ಅನೇಕ ತಯಾರಕರು ಮತ್ತು ಸೇವಾ ಪೂರೈಕೆದಾರರು ತಮ್ಮ ಉತ್ಪನ್ನಗಳ ಸಂಭಾವ್ಯ ಖರೀದಿದಾರರನ್ನು ಭೇಟಿಯಾಗುವ ಅವಕಾಶ ಕೂಡ ಸಿಗುತ್ತಿರುವುದು ಸೇನೆಗಳನ್ನು ಬಲಪಡಿಸಲು ಅಡಿಪಾಯ ಹಾಕಿಕೊಡುತ್ತಿವೆ. 1996ರ ನಂತರ, ಏರ್ ಶೋನ 4ನೇ ಆವೃತ್ತಿ 2003 ರಲ್ಲಿ ನಡೆಯಿತು. ಜಗತ್ತಿನ 22 ದೇಶಗಳ ಸುಮಾರು 176 ಪ್ರದರ್ಶಕರು ಈ ಏರ್ ಶೋನಲ್ಲಿ ಭಾಗಿಯಾಗುವ ಮೂಲಕ ಸೇನಾ ವಿಮಾನಗಳು, ತಾಂತ್ರಿಕ ಜ್ಞಾನವನ್ನ ವಿನಿಮಯಮಾಡಿಕೊಳ್ಳುವ ಮೂಲಕ ಏರ್ ಶೋ ಯಶಸ್ವಿಗೆ ಕಾರಣವಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಏರೋ ಇಂಡಿಯಾ ವಿಶ್ವದ ಪ್ರಮುಖ ಮತ್ತು ಅತಿದೊಡ್ಡ ಮಿಲಿಟರಿ ವಾಯುಯಾನ ಪ್ರದರ್ಶನಗಳಲ್ಲಿ ಒಂದಾಗಿದೆ. ಮೈಕೋಯಾನ್ ಮಿಗ್-35 ಮತ್ತು ಎಫ್-16, ಐಎನ್ ಸೂಪರ್ ವೈಪರ್ ಅನ್ನು ಮೊದಲ ಬಾರಿಗೆ ಏರೋ ಇಂಡಿಯಾದ 6 ಮತ್ತು 7ನೇ ಆವೃತ್ತಿಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಹಲವು ವೈಶಿಷ್ಟ್ಯತೆಗಳನ್ನು ಏರ್ ಶೋ ಹುಟ್ಟುಹಾಕಿದೆ.
ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಏರ್ ಶೋ ಸದ್ದುಮಾಡಿದ್ದು, ವಿದೇಶಗಳಿಂದ ಸಾವಿರಾರು ಜನರು ಆಗಮಿಸಿ ಲೋಹದ ಹಕ್ಕಿಗಳ ಕಲರವವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ಜಾಗ್ವಾರ್ಗಳು, ಮಿಗ್, ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಹೀಗೆ ಹತ್ತು ಹಲವು ವಿಭಿನ್ನ ವಿಮಾನಗಳು ತಮ್ಮದೇ ಶೈಲಿಯಲ್ಲಿ ಆಗಸಕ್ಕೆ ಜಿಗಿದು ಕಮಾಲ್ ಮಾಡುವ ದೃಶ್ಯ ನೋಡುಗರ ಎದೆ ಬಡಿತ ಹೆಚ್ಚಿಸುತ್ತವೆ.
ರಕ್ಷಣಾ ಇಲಾಖೆ, ಭಾರತೀಯ ವಾಯು ಸೇನೆ, ಹೆಚ್.ಎ.ಎಲ್, ಡಿ.ಆರ್.ಡಿ.ಒ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಜಂಟಿಯಾಗಿ ಆಯೋಜಿಸುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ದೇಶ ವಿದೇಶಗಳ ವೈಮಾನಿಕ ಕ್ಷೇತ್ರದ ನೂರಾರು ಕಂಪನಿಗಳು ಭಾಗವಹಿಸಲಿವೆ.
ಯುದ್ಧವಿಮಾನ, ಹೆಲಿಕಾಪ್ಟರ್, ನಾಗರೀಕ ವಿಮಾನ, ಸಣ್ಣ ವಿಮಾನಗಳು, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ರಾಡಾರ್ ವ್ಯವಸ್ಥೆ ಸೇರಿದಂತೆ ರಕ್ಷಣಾ ವಲಯ ಮತ್ತು ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಉತ್ಪನ್ನಗಳು, ಬಿಡಿ ಭಾಗಗಳು, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಉತ್ಪನ್ನಗಳು ಪ್ರದರ್ಶನದಲ್ಲಿ ಗಮನ ಸೆಳೆಯಲು ಸಜ್ಜಾಗಿವೆ.