ಆರ್‌ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆರ್‌ಸಿಬಿ vs ಜಿಟಿ ಪಂದ್ಯದ ವೇಳೆ ಭಾರೀ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳು 240 ಸಿಸಿಟಿವಿಗಳ ಸಂಪರ್ಕ ಕಡಿತಗೊಳಿಸಿದ ಘಟನೆ ಬಹಿರಂಗವಾಗಿದೆ. ಈ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ ಅದೇ ಪಂದ್ಯದ ವೇಳೆ ಟಿಕೆಟ್‌ಗಳನ್ನು ಬ್ಲ್ಯಾಕ್ನಲ್ಲಿ ಮಾರುತ್ತಿದ್ದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 27: ಶುಕ್ರವಾರ (ಏ.24) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ದಿನವೇ ಭಾರೀ ಭದ್ರತಾ ಲೋಪ ಉಂಟಾಗಿದ್ದು, ಆತಂಕ ಮೂಡಿಸಿದೆ. ಆರ್‌ಸಿಬಿ (Royal Challengers Bengaluru) ಮತ್ತು ಜಿಟಿ (Gujarat Titans) ನಡುವಿನ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಆ ದಿನ ಸ್ಟೇಡಿಯಂ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇದ್ದುದರಿಂದ ಪೊಲೀಸರು ಗೊಂದಲಕ್ಕೀಡಾದರು. IPL ಪಂದ್ಯದ ದಿನ ಒಮ್ಮೆಲೇ 240 ಸಿಸಿಟಿವಿ ಕ್ಯಾಮೆರಾಗಳು ಆಪ್ ಆಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿದಾಗ ಕೇಳಿ ಬಂದಿದ್ದು ಎರಡು ಹೆಸರುಗಳು. ಐವಿಎಸ್ ಡಿಜಿಟಲ್ ಸಲ್ಯೂಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ. ಪಾಸ್ ಇಲ್ಲದೇ ನಿಷ್ಕ್ರಿಯಗೊಂಡ ಕಾರ್ಡ್ ಬಳಸಿ ಸರ್ವರ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪಿಗಳು ಎನ್‌ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದರೆಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ತನಿಖೆ ವೇಳೆ ಪೊಲೀಸರ ಮುಂದೆ ಬಾಯಿ ಬಿಟ್ಟ ಆರೋಪಿಗಳಿಬ್ಬರು, ಸಂಬಳ ನೀಡಿಲ್ಲವೆಂಬ ಕಾರಣಕ್ಕೆ ಕೇಬಲ್ ಕಟ್ ಮಾಡಿದೆವು ಎಂದು ಒಪ್ಪಿಕೊಂಡಿದ್ದಾರೆ.
ಪೊಲೀಸರ ಸಮಯಪ್ರಜ್ಞೆ
ಪಂದ್ಯದ ದಿನ ಬೆಳಗ್ಗೆ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ನಿರ್ಮಿಸಿದರು. ಭದ್ರತಾ ನ್ಯೂನತೆಗಳ ನಡುವೆಯೂ ಪೊಲೀಸರು ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಕ್ರೀಡಾಂಗಣದಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟ, 10 ಮಂದಿ ಬಂಧನ!
ಆರ್‌ಸಿಬಿ ಮತ್ತು ಜಿಟಿ ನಡುವಿನ ಐಪಿಎಲ್ ಪಂದ್ಯದ ವೇಳೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಎಫ್‌ಐಆರ್ (FIR) ದಾಖಲಾಗಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ P3 ಸ್ಟ್ಯಾಂಡ್‌ನ 6 ಮತ್ತು ರೋಜರ್ ಬಿನ್ನಿ ಸ್ಟ್ಯಾಂಡ್‌ನ 6 ಟಿಕೆಟ್ ಸೇರಿದಂತೆ ಒಟ್ಟು 19 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕೆಎಸ್‌ಸಿಎ (KSCA) ಸದಸ್ಯರಿಗೆ ನೀಡಲಾಗಿದ್ದ ಕಾಂಪ್ಲಿಮೆಂಟರಿ ಟಿಕೆಟ್‌ಗಳೇ ಅತಿ ಹೆಚ್ಚು ಬ್ಲಾಕ್‌ನಲ್ಲಿ ಮಾರಾಟವಾಗಿವೆ. ಈ ಟಿಕೆಟ್‌ಗಳ ಮೇಲೆ ಬೆಲೆ ನಮೂದಾಗಿರುವುದಿಲ್ಲ. ಅಥವಾ ‘ಸೊನ್ನೆ’ ಎಂದು ಬರೆದಿರುತ್ತದೆ. ಇದರ ಮೌಲ್ಯದ ಅರಿವಿಲ್ಲದ ಆರೋಪಿಗಳು, 30-40 ಸಾವಿರ ರೂಪಾಯಿ ಬೆಲೆ ಬಾಳುವ P3 ಸ್ಟ್ಯಾಂಡ್ ಟಿಕೆಟ್‌ಗಳನ್ನು ಕೇವಲ 8-10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಕೆಲವು ಸಾಮಾನ್ಯ ಟಿಕೆಟ್‌ಗಳನ್ನು ಎರಡು-ಮೂರು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!
ಪೊಲೀಸರ ಮಫ್ತಿ ಕಾರ್ಯಾಚರಣೆ
ಟಿಕೆಟ್ ಕೊಳ್ಳುವವರ ಸೋಗಿನಲ್ಲಿ ಮಫ್ತಿಯಲ್ಲಿ ತೆರಳಿದ್ದ ಪೊಲೀಸರು ಚಾಣಾಕ್ಷತನದಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಈ ಆರೋಪಿಗಳಿಗೆ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ನೀಡಿದ ಮೂಲ ವ್ಯಕ್ತಿಗಳು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆನ್‌ಲೈನ್ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿ ಸ್ಥಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ತಂಡಗಳ ಮೇಲೂ ನಿಗಾ ಇಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 am, Mon, 27 April 26
