6 ಸಾವಿರ ಮರಗಳ ಹನನ ಮಾಡಿ ಮೌನವಾದ ನಮ್ಮ ಮೆಟ್ರೋ: 1 ಮರಕ್ಕೆ 10 ಸಸಿ ನೆಡುತ್ತೇವೆಂದು ಸುಳ್ಳು ಮಾಹಿತಿ
ನಮ್ಮ ಮೆಟ್ರೋ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳಿಗಾಗಿ 6,169 ಮರಗಳನ್ನು ತೆರವುಗೊಳಿಸಲಾಗಿದ್ದು, ಅವುಗಳಿಗೆ ಬದಲಿಯಾಗಿ 61 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕಿತ್ತು. ಆದರೆ, ಸಸಿಗಳ ನೆಡುವಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳಿಲ್ಲ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸಿಎಜಿ ಮುಂದೆ ಒಪ್ಪಿಕೊಂಡಿದ್ದಾರೆ .

ಮುಖ್ಯಾಂಶಗಳು
- ಮೆಟ್ರೋ ಕಾಮಗಾರಿಗೆ 6,169 ಮರಗಳ ತೆರವು
- ಸಸಿಗಳ ನೆಡುವಿಕೆ ದಾಖಲೆಗಳ ಕೊರತೆ ಆರೋಪ
- ತನಿಖೆ ನಡೆಸಲು ಪರಿಸರ ಹೋರಾಟಗಾರರ ಆಗ್ರಹ
ಬೆಂಗಳೂರು, ಅಕ್ಟೋಬರ್ 13: ನಮ್ಮ ಮೆಟ್ರೋ ಕಾಮಗಾರಿಗಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದ್ದು, ನಿಯಮದ ಪ್ರಕಾರ ಅವುಗಳಿಗೆ ಬದಲಿಯಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕಿತ್ತು. ಆದರೆ, ಮರಗಳಿಗೆ ಬದಲಿಯಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಭಾರತದ ಲೆಕ್ಕಪರಿಶೋಧಕ ಮತ್ತು ಮಹಾಲೆಕ್ಕಪರಿಶೋಧಕರ (CAG) ಮುಂದೆ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಮೆಟ್ರೋ ಕಾಮಗಾರಿಗಾಗಿ ತೆರವುಗೊಳಿಸಿದ ಮರಗಳಿಗೆ ಬದಲಿಯಾಗಿ ಸಸಿಗಳನ್ನು ನೆಡುವ ನಿಯಮ ಪಾಲನೆಯಾಗಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ.
6 ಸಾವಿರಕ್ಕೂ ಹೆಚ್ಚು ಮರಗಳ ತೆರವು
ನಮ್ಮ ಮೆಟ್ರೋ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳಿಗಾಗಿ ಒಟ್ಟು 6,169 ಮರಗಳನ್ನು ತೆರವುಗೊಳಿಸಲಾಗಿತ್ತು ಎಂಬುದು ಬಿಎಂಆರ್ಸಿಎಲ್ ಮಾಹಿತಿಯಿಂದ ತಿಳಿದುಬಂದಿದೆ. ಮೊದಲ ಹಂತದಲ್ಲಿ 2,106 ಮರಗಳನ್ನು ತೆರವುಗೊಳಿಸಲಾಗಿದ್ದು, ಅವುಗಳಿಗೆ ಬದಲಿಯಾಗಿ 21,604 ಸಸಿಗಳನ್ನು ನೆಟ್ಟು ಪೋಷಿಸಬೇಕಿತ್ತು. ಎರಡನೇ ಹಂತದಲ್ಲಿ 4,063 ಮರಗಳನ್ನು ತೆರವುಗೊಳಿಸಲಾಗಿದ್ದು, ಅವುಗಳಿಗೆ ಬದಲಿಯಾಗಿ 40,630 ಸಸಿಗಳನ್ನು ನೆಡಬೇಕಿತ್ತು.
ಒಟ್ಟಾರೆ, ತೆರವುಗೊಳಿಸಿದ ಮರಗಳಿಗೆ ಬದಲಿಯಾಗಿ 61 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳ ಆರೈಕೆ ಮಾಡಬೇಕಿತ್ತು. ಆದರೆ, ಈ ಸಸಿಗಳ ನೆಡುವಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಎಂಆರ್ಸಿಎಲ್ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಒಂದು ಮರಕ್ಕೆ ಹತ್ತು ಸಸಿ ನೆಡುವ ನಿಯಮ
ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು. ಅರಣ್ಯ ಇಲಾಖೆಯ ನಿಯಮದ ಪ್ರಕಾರ, ತೆರವುಗೊಳಿಸಿದ ಅಥವಾ ಸ್ಥಳಾಂತರಿಸಿದ ಪ್ರತಿ ಮರಕ್ಕೆ ಬದಲಿಯಾಗಿ ಹತ್ತು ಎತ್ತರದ ಸಸಿಗಳನ್ನು ನೆಟ್ಟು, ಮೂರು ವರ್ಷಗಳ ಕಾಲ ಅವುಗಳ ಆರೈಕೆ ಮತ್ತು ನಿರ್ವಹಣೆ ಮಾಡಬೇಕಿತ್ತು.
ಮೆಟ್ರೋ ಯೋಜನೆಯ ಆರಂಭದಲ್ಲಿ ಅರಣ್ಯ ಇಲಾಖೆಯೊಂದಿಗೆ ಬಿಎಂಆರ್ಸಿಎಲ್ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ, ಸಸಿಗಳನ್ನು ನೆಟ್ಟು ಪೋಷಣೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳ ಕೊರತೆ ಕುರಿತು ಪ್ರಶ್ನೆಗಳು ಎದ್ದಿವೆ. ನಿಯಮದಂತೆ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ.
ತನಿಖೆಗೆ ಪರಿಸರ ಹೋರಾಟಗಾರರ ಆಗ್ರಹ
ಮೊದಲ ಮತ್ತು ಎರಡನೇ ಹಂತದ ಮೆಟ್ರೋ ಕಾಮಗಾರಿಗಳಿಗಾಗಿ ತೆರವುಗೊಳಿಸಿದ ಸಾವಿರಾರು ಮರಗಳಿಗೆ ಬದಲಿಯಾಗಿ ಸಸಿಗಳನ್ನು ನೆಡುವ ಕಾರ್ಯ ಸಮರ್ಪಕವಾಗಿ ನಡೆದಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಪರಿಸರ ಹೋರಾಟಗಾರರು ಒತ್ತಾಯಿಸಿದ್ದಾರೆ. ನಿಯಮ ಪಾಲನೆಯಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟ ಮೆಟ್ರೋ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಇದನ್ನೂ ಓದಿ: ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ: ಅಲ್ಪಕಾಲ ಸಂಚಾರಕ್ಕೆ ಅಡಚಣೆ
ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ತೆರವುಗೊಳಿಸುವಾಗ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಅಗತ್ಯ. ಹೀಗಾಗಿ, ಸಸಿಗಳನ್ನು ನೆಡುವುದು, ಅವುಗಳ ನಿರ್ವಹಣೆ ಮತ್ತು ಮೂರು ವರ್ಷಗಳ ಆರೈಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ವಾಸ್ತವಾಂಶವನ್ನು ಬಹಿರಂಗಪಡಿಸಬೇಕಿದೆ. ಅರಣ್ಯ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂಬುದು ಪರಿಸರ ಹೋರಾಟಗಾರರ ಒತ್ತಾಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




