AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಗಾರಿಗಾಗಿ ವರ್ಕ್ ಫ್ರಮ್ ಹೋಮ್ ಸಾಧ್ಯವಿಲ್ಲ: ಜಿಬಿಎ ಮನವಿಗೆ ನೋ ಎಂದ ಐಟಿ ಕಂಪನಿಗಳು

ಬೆಂಗಳೂರು ಹೊರ ವರ್ತುಲ ರಸ್ತೆ ವೈಟ್‌ಟಾಪಿಂಗ್ ಕಾಮಗಾರಿಗಾಗಿ GBA 50% ವರ್ಕ್ ಫ್ರಮ್ ಹೋಮ್​​ಗೆ ಮನವಿ ಮಾಡಿತ್ತು. ಆದರೆ, ಐಟಿ ಕಂಪನಿಗಳ ಅಸೋಸಿಯೇಷನ್ ಇದನ್ನು ತಿರಸ್ಕರಿಸಿದೆ. GBA ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದಿಲ್ಲ ಎಂಬ ಭೀತಿ, ಹಾಗೂ ವರ್ಕ್ ಫ್ರಮ್ ಹೋಮ್​ನಿಂದ ಕೆಲಸದ ವೇಗ ತಗ್ಗುವ ಆತಂಕ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಕಾಮಗಾರಿಗಾಗಿ ವರ್ಕ್ ಫ್ರಮ್ ಹೋಮ್ ಸಾಧ್ಯವಿಲ್ಲ: ಜಿಬಿಎ ಮನವಿಗೆ ನೋ ಎಂದ ಐಟಿ ಕಂಪನಿಗಳು
ಜಿಬಿಎ Image Credit source: bbmp.gov.in
ಕಿರಣ್​ ಸೂರ್ಯ
| Edited By: |

Updated on:Aug 21, 2026 | 9:12 PM

Share

ಬೆಂಗಳೂರು, ಆಗಸ್ಟ್​ 21: ಸಿಲಿಕಾನ್ ಸಿಟಿಯ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಉದ್ದೇಶಿತ ವೈಟ್ ಟಾಪಿಂಗ್ ಕಾಮಗಾರಿಗಾಗಿ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಾಡಿದ್ದ ಮನವಿಯನ್ನು ಐಟಿ ಕಂಪನಿಗಳ ಒಕ್ಕೂಟ ತಿರಸ್ಕರಿಸಿದೆ. ಸರ್ಕಾರ ಹೇಳಿದ ಸಮಯಕ್ಕೆ ಕಾಮಗಾರಿ ಆರಂಭವೂ ಮಾಡಲ್ಲ, ಮುಗಿಸುವುದಿಲ್ಲ ಎಂಬುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಸರ್ಕಾರದ ಮನವಿ ತಳ್ಳಿಹಾಕಿದ ಕಂಪನಿಗಳು 

ನಿತ್ಯ ನರಕಯಾತನೆ ತರಿಸುವ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಅಕ್ಟೋಬರ್‌ನಿಂದ ಸುಮಾರು 20 ಕಿ.ಮೀ ರಸ್ತೆಯನ್ನು ವೈಟ್ ಟ್ಯಾಪಿಂಗ್ ಮಾಡಲು ಜಿಬಿಎ ಸಿದ್ಧತೆ ನಡೆಸಿತ್ತು. ಈ ಕಾಮಗಾರಿಯ ವೇಗ ಹೆಚ್ಚಿಸಲು ಹಾಗೂ ರಸ್ತೆಯಲ್ಲಿ ವಾಹನಗಳ ದಟ್ಟಣೆ ತಗ್ಗಿಸಲು ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಡಿ ಎಂದು ಸರ್ಕಾರ ಮನವಿ ಮಾಡಿತ್ತು. ಆದರೆ, ಸರ್ಕಾರದ ವಿಳಂಬ ನೀತಿ ಹಾಗೂ ಕಾರ್ಯವೈಖರಿ ಮೇಲೆ ನಂಬಿಕೆ ಇಲ್ಲದ ಕಾರಣ ಕಂಪನಿಗಳು ಈ ಪ್ರಸ್ತಾವನೆಯನ್ನು ಸಾರಾಸಾಗಟವಾಗಿ ತಳ್ಳಿಹಾಕಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫುಟ್​ಪಾತ್ ಒತ್ತುವರಿ ತೆರವು ಮಾಡಿದರೂ ಮತ್ತೆ ಅತಿಕ್ರಮಣ: ತೆರವುಗೊಂಡ ಜಾಗ ಒಂದೇ ವಾರದಲ್ಲಿ ಯಥಾಸ್ಥಿತಿಗೆ!

ಐಟಿ ಕಂಪನಿಗಳ ಅಸೋಸಿಯೇಷನ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು, ಸತತ ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಕಂಪನಿಗಳ ಕೆಲಸದ ವೇಗ ಮತ್ತು ಉತ್ಪಾದಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತಪಡಿಸಿವೆ. ನಗರದ ಯಾವುದೇ ಭಾಗದಲ್ಲೂ ಜಿಬಿಎ ಹೇಳಿದ ಸಮಯಕ್ಕೆ ಸರಿಯಾಗಿ ಕಾಮಗಾರಿ ಆರಂಭಿಸಿಲ್ಲ ಹಾಗೂ ಮುಗಿಸಿಲ್ಲ. ಈಗಾಗಲೇ ಈ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ, ವೈಟ್ ಟಾಪಿಂಗ್ ಕಾಮಗಾರಿಯೂ ಆರಂಭವಾದರೆ ಅದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದು ಅನುಮಾನ. ಒಂದು ವೇಳೆ ಕಾಮಗಾರಿ ವಿಳಂಬವಾದರೆ ಅನಿವಾರ್ಯವಾಗಿ ದೀರ್ಘಕಾಲದವರೆಗೆ ವರ್ಕ್ ಫ್ರಮ್ ಹೋಮ್ ವಿಸ್ತರಿಸಬೇಕಾಗುತ್ತದೆ ಎಂದು ಕಂಪನಿಗಳ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಪರ್ಯಾಯ ಸಲಹೆ ನೀಡಿದ ಅಸೋಸಿಯೇಷನ್

ಕೇವಲ ಮನವಿಯನ್ನು ತಿರಸ್ಕರಿಸುವುದಷ್ಟೇ ಅಲ್ಲದೆ, ಯೋಜನೆ ಸುಸೂತ್ರವಾಗಿ ನಡೆಯಲು ಅಸೋಸಿಯೇಷನ್ ಸರ್ಕಾರಕ್ಕೆ ಪರ್ಯಾಯ ಸಲಹೆಗಳನ್ನೂ ಮುಂದಿಟ್ಟಿದೆ. ಅಕ್ಟೋಬರ್ ಬದಲಿಗೆ ನವೆಂಬರ್ ಬಳಿಕ ಹಂತ-ಹಂತವಾಗಿ ಕಾಮಗಾರಿ ಆರಂಭಿಸಿದರೆ ವಾಹನಗಳ ಓಡಾಟ ತುಸು ಕಡಿಮೆಯಾಗಲಿದೆ. ಅಲ್ಲದೆ ಮುಖ್ಯ ರಸ್ತೆಯ ಕಾಮಗಾರಿಗೆ ಕೈಹಾಕುವ ಮುನ್ನ ಸರ್ವೀಸ್ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಈ ಮೂಲಕ ಸಂಚಾರಕ್ಕೆ ಅಡ್ಡಿಯಾಗದಂತೆ ಯೋಜನೆಯನ್ನು ನಿರ್ವಹಿಸಬಹುದು ಎಂಬ ಅಭಿಪ್ರಾಯವನ್ನು ಜಿಬಿಎ ಮುಂದಿಡಲು ಒಕ್ಕೂಟ ನಿರ್ಧರಿಸಿದೆ.

ಇದನ್ನೂ ಓದಿ: ಬೆಳಗ್ಗೆ 10 ಗಂಟೆಯಾದರೂ ಖಾಲಿ ಕಚೇರಿ; ಬೆಂಗಳೂರಿನ ಟ್ರಾಫಿಕ್ ವಿರುದ್ಧ ಉದ್ಯಮಿ ಆಕ್ರೋಶ

ಸದ್ಯಕ್ಕೆ ಐಟಿ ಸಂಸ್ಥೆಗಳು ಹಾಗೂ ಸರ್ಕಾರದ ನಡುವೆ ಹೊಂದಾಣಿಕೆಯಾಗದಿದ್ದರೆ ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:11 pm, Fri, 21 August 26

Follow Us