ವಾಯುವಜ್ರ ಬಸ್ಸಿನಲ್ಲಿ ಅಮೂಲ್ಯ ಲಗೇಜ್ ಕಳೆದುಕೊಂಡ ಕಾಂಬೋಡಿಯಾ ರಾಯಭಾರ ಕಚೇರಿ ಅಧಿಕಾರಿ, 24 ಗಂಟೆಯಲ್ಲಿ ಹುಡುಕಿಕೊಟ್ಟ ಬಿಎಂಟಿಸಿ ಸಿಬ್ಬಂದಿ!
ಪ್ರಯಾಣಿಕರಾದ ಯಷಿ ಸುರಾನಾ ತಮ್ಮ ಅಮೂಲ್ಯ ಲಗೇಜ್ ತಮ್ಮ ಕೈತಪ್ಪಿದೆ ಎಂದೇ ಬಗೆದಿದ್ದರು. ಕೊನೆಗೆ ತಮ್ಮ ಕಚೇರಿ ಬಳಿಯಿರುವ ಶಾಂತಿನಗರ ಬಿಎಂಟಿಸಿ ಕಚೇರಿಗೆ ಎಡತಾಕಿದ್ದಾರೆ. ಅಲ್ಲಿ ಸಿಕ್ಕಸಿಕ್ಕವರನ್ನೆಲ್ಲಾ ತಮಗೆ ನೆರವು ನೀಡುವಂತೆ ತಾವು ಕಲಿತ ಅರೆಬರೆ ಕನ್ನಡದಲ್ಲಿಯೇ ಕೇಳಿದ್ದಾರೆ. ಆಗ ದೈವದಂತೆ ಅವರ ರಕ್ಷಣೆಗೆ ಬಂದಿದ್ದು ಸಾರ್ವಜನಿಕ ದೂರು ವಿಭಾಗದ ಮಹಿಳಾ ಅಧಿಕಾರಿ ರಾಜರಾಜೇಶ್ವರಿ ಸತ್ಯ ಕುಮಾರ್ ಮತ್ತು ಅವರ ತಂಡ!
ಆ ಯುವ ಮಹಿಳಾ ಅಧಿಕಾರಿ ಕಳೆದ 6 ವರ್ಷಗಳಿಂದ ಬೆಂಗಳೂರಿನಲ್ಲಿರುವ ಕಾಂಬೋಡಿಯಾ ರಾಯಭಾರ ಕಚೇರಿಯಲ್ಲಿ (Consulate of Cambodia in Bangalore) ಹಿರಿಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ಕೋಲ್ಕತ್ತಾದ್ದವರು. ಹೆಸರು ಯಷಿ ಸುರಾನಾ ಧಾರಿವಾಲ್. 2 ದಿನಗಳ ಹಿಂದೆ ರಾಯಭಾರ ಕಚೇರಿ ಕಾರ್ಯದ ನಿಮಿತ್ತ ಕೊಯಮತ್ತೂರಿಗೆ ತೆರಳಿದ್ದವರು, ಶುಕ್ರವಾರ (2.2.2024) ರಾತ್ರಿ 7 ಗಂಟೆ ನಂತರ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬಂದಿಳಿದಿದ್ದರು. ವಿಮಾನ ನಿಲ್ದಾಣದಿಂದ ಮನೆಗೆ ತೆರಳಲು ಅವರು ಹತ್ತಿದ್ದು ಬಿಎಂಟಿಸಿ ಸಂಸ್ಥೆಯ ಹೆಮ್ಮೆಯ ವಾಯುವಜ್ರ ಬಸ್ (Airport Vayu Vajra Services). ಬಸ್ಸಿನಲ್ಲಿ ತಮ್ಮ ಲಗೇಜ್ ಸಮೇತ ಸುಖಾಸೀನರಾಗಿ ಪ್ರಯಾಣ ಬೆಳಸಿದವರೆ ಹೆಬ್ಬಾಳ ಬಳಿ ಬಸ್ಸಿಂದ ಇಳಿದಿದ್ದಾರೆ. ಅಗಲೇ ಯಡವಟ್ಟು ನಡೆದಿರುವುದು. ಹರಿಬರಿಯಲ್ಲಿ ತಾವು ಬಸ್ಸಿಂದ ಇಳಿದರೆ ಹೊರತು ತಮ್ಮ ಅಮೂಲ್ಯ ಲಗೇಜ್ ಅನ್ನು ಬಸ್ಸಿನಲ್ಲಿಯೇ ಬಿಟ್ಟು ಇಳಿದಿದ್ದರು.
ಆದರೆ ಸ್ವಲ್ಪಹೊತ್ತಿನಲ್ಲಿಯೇ ತಾವು ಯಡವಟ್ಟು ಮಾಡಿಕೊಂಡಿರುವುದು ಅವರ ಅರಿವಿಗೆ ಬಂದಿದೆ. ತಡಮಾಡದೆ ತಕ್ಷಣ ಆಟೋ ಹಿಡಿದು ಆ ಬಸ್ಸನ್ನು ಹಿಂಬಾಲಿಸಲು ಕೋರಿದ್ದಾರೆ. ಆಟೋ ಡ್ರೈವರ್ ಸಾಹಸಪಟ್ಟು ಎಲ್ಲ ವಾಯುವಜ್ರಗಳ ಹಿಂದೆಯೂ ನುಸುಳಿದ್ದಾರೆ. ಆದರೆ ಬೆಂಗಳೂರು ಮಹಾನಗರದ ಮಹಾ ಟ್ರಾಫಿಕ್ನಲ್ಲಿ ಆ ಬಸ್ಸು ಮಾಯವಾಗಿದೆ. ಇನ್ನು ಬಸ್ಸಿನ ಹಿಂದೆ ಹೋಗುವುದರಲ್ಲಿ ಪ್ರಯೋಜನ ಇಲ್ಲವೆಂದು ಅರಿತ ಪ್ರಯಾಣಿಕರಾದ ಯಷಿ ಸುರಾನಾ ಅದೇ ಆಟೋದಲ್ಲಿ ಸೀದಾ ಏರ್ಪೋರ್ಟ್ಗೆ ವಾಪಸಾಗಿದ್ದಾರೆ. ಅಲ್ಲಿದ್ದ ಬಿಎಂಟಿಸಿ ಅಧಿಕಾರಿಗಳ ಗಮನಕ್ಕೆ ತಮ್ಮ ಅಚಾತುರ್ಯದ ಕೆಲಸವನ್ನು ಗಮನಕ್ಕೆ ತಂದಿದ್ದಾರೆ.
ರಾತ್ರಿ 7.30 ರಿಂದ 8 ಗಂಟೆ ಸಮಯದಲ್ಲಿ ತಾವು ವಾಯುವಜ್ರ ಬಸ್ ಹತ್ತಿದ್ದು, ಇಳಿಯುವಾಗ ಲಗೇಜ್ ಕಳೆದುಕೊಂಡಿದ್ದು, ಅದರಲ್ಲಿ ಅಮೂಲ್ಯ ದಾಖಲೆ ಪತ್ರಗಳು ಇದ್ದವು ಎಂದು ಬಿಎಂಟಿಸಿ ಸಿಬ್ಬಂದಿಗೆ ತಿಳಿಸಿದ್ದಾರೆ. ಈ ಮಧ್ಯೆ ಅವರಿಂದ ಇನ್ನೂ ಒಂದು ಅಚಾತುರ್ಯ ನಡೆದಿತ್ತು. ಅಮೂಲ್ಯವಾದ ಬಸ್ ಟಿಕೆಟ್ ಅನ್ನು ಅವರು ಕಳೆದುಕೊಂಡಿದ್ದರು. ಹಾಗಾಗಿ ನಿರ್ದಿಷ್ಟವಾಗಿ ಇಂತಹುದೇ ಬಸ್ಸಿನಲ್ಲಿ ತಾವು ಪ್ರಯಾಣಿಸಿದ್ದಾಗಿ ಹೇಳಲು ಯಷಿ ಸುರಾನಾ ವಿಫಲರಾಗಿದ್ದಾರೆ. ಇದರಿಂದ ಪ್ರಕರಣ ಇನ್ನಷ್ಟು ಕಗ್ಗಂಟಾಗಿದೆ. ಆದರೂ ತಮ್ಮ ಪಡಿಪಾಟಲನ್ನು ಸೂಕ್ಷ್ಮವಾಗಿ ವಿವರಿಸಿ ಸಹಾಯ ಮಾಡಲು ಕೋರಿದ್ದಾರೆ. ಅಲ್ಲಿದ್ದ ಬಸ್ ಸಿಬ್ಬಂದಿ ಮತ್ತು ಪೊಲೀಸರು ಸಹ ಯಷಿ ಸುರಾನಾ ಮನವಿಯನ್ನು ಆಲಿಸಿ, ನೆರವಿಗೆ ಮುಂದಾಗಿದ್ದಾರೆ. ಆದರೆ ತಕ್ಷಣಕ್ಕೆ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ತಮ್ಮ ಅಮೂಲ್ಯ ಲಗೇಜ್ ತಮ್ಮ ಕೈತಪ್ಪಿದಂತೆಯೇ ಎಂದು ಬಗೆದು ನಿದ್ದೆಯಿಲ್ಲ ರಾತ್ರಿ ಕಳೆದಿದ್ದಾರೆ. ಕೊನೆಗೆ ಶನಿವಾರ ತಮ್ಮ ಕಚೇರಿ ಬಳಿಯಿರುವ ಶಾಂತಿನಗರ ಬಿಎಂಟಿಸಿ ಕಚೇರಿಗೆ ಎಡತಾಕಿದ್ದಾರೆ. ಅಲ್ಲಿ ಸಿಕ್ಕಸಿಕ್ಕವರನ್ನೆಲ್ಲಾ ತಮಗೆ ನೆರವು ನೀಡುವಂತೆ ತಾವು ಕಲಿತ ಅರೆಬರೆ ಕನ್ನಡದಲ್ಲಿಯೇ ಕೇಳಿದ್ದಾರೆ. ಆದರೆ ಅಲ್ಲಿ ಅವರಿಗೆ ಸಿಕ್ಕಿದ ಸಿಬ್ಬಂದಿಯೂ ಪರಿಸ್ಥಿತಿಯ ಗಂಭೀರತೆ ಅರಿಯದೆ ಕೈಚೆಲ್ಲಿದ್ದಾರೆ. ಆದರೆ ಆಗ ದೈವದಂತೆ ರಕ್ಷಣೆಗೆ ಬಂದಿದ್ದು ಸಾರ್ವಜನಿಕ ದೂರು ವಿಭಾಗದ ಮಹಿಳಾ ಅಧಿಕಾರಿ ರಾಜರಾಜೇಶ್ವರಿ ಸತ್ಯ ಕುಮಾರ್ ಮತ್ತು ಅವರ ತಂಡ!
ಡ್ಯೂಟಿ ಮುಗಿದು ಮನೆಗೆ ತೆರಳಬೇಕಿದ್ದ ರಾಜರಾಜೇಶ್ವರಿ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಮ್ಮ ತಂಡದ ಸಹಾಯದೊಂದಿಗೆ ಯುದ್ದೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಇಳಿದರು. ಶುಕ್ರವಾರ ರಾತ್ರಿ 7.30 ರಿಂದ 8.00 ನಡುವೆ ಸಮಚಾರದಲ್ಲಿದ್ದ ಎಲ್ಲ ಬಿಎಂಟಿಸಿ ವಾಯುವಜ್ರ ಬಸ್ಗಳ್ಳನ್ನು ಏರ್ ಪೋರ್ಟ್ ಬಿಎಂಟಿಸಿ ಸಹಾಯವಾಣಿಯಲ್ಲಿ ಪರಿಶೀಲಿಸತೊಡಗಿದ್ದಾರೆ. ಸಂಬಂಧಪಟ್ಟವರಿಗೆ ಒಂದೇ ಸಮನೆ ಫೋನ್ಗಳನ್ನು ಮಾಡುತ್ತಾ ಸದರಿ ಬಸ್ ಅನ್ನು ಪತ್ತೆ ಹಚ್ಚುವ ಹರಸಾಹಸದಲ್ಲಿ ತೊಡಗಿದರು. ಯಷಿ ಸುರಾನಾ ಬಳಿ ಪ್ರಯಾಣದ ಚೀಟಿ ಇಲ್ಲದ ಕಾರಣ ವಾಹನದ ಮಾಹಿತಿ ಪತ್ತೆ ಹಚ್ಚಲು ತೊಡಕಾಗಿದೆ.
ಇಲ್ಲೊಂದು ವಿಷಯ ಹೇಳಬೇಕಿದೆ. ಬಿಎಂಟಿಸಿ ವಾಯುವಜ್ರ ಬಸ್ ಸೇವೆ ಪಡೆಯುವವರಿಗೆ ನೆರವಾಗಲು ವಾಟ್ಸಪ್ ಗ್ರೂಪ್ ಸೇವೆ ಹೊಂದಿದೆ. ಅದರಲ್ಲಿ ಸಂಬಂಧಪಟ್ಟ ಪ್ರಯಾಣಿಕರ ವಿವರಗಳು ಲಭ್ಯವಿರುತ್ತದೆ. ಅಕಸ್ಮಾತ್ ಯಾರಾದರೂ ಲಗೇಜ್ ಕಳೆದುಕೊಂಡಿರುವುದಾಗಲಿ ಅಥವಾ ಸೇವೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಅದನ್ನು ವಾಟ್ಸಪ್ ಗ್ರೂಪ್ ನಲ್ಲಿ ವಿವರಗಳು ರವಾನೆಯಾಗುತ್ತಿರುತ್ತವೆ. ಅಂತಹ ಪ್ರಕರಣಗಳುನ ನಡೆದಾಗ ವಾಯುವಜ್ರ ಬಸ್ ಸಿಬ್ಬಂದಿ ಕೊನೆಗೆ ಅದನ್ನು ಸಂಬಂಧಪಟ್ಟ ಡಿಪೋ ಅಧಿಕಾರಿಗಳಿಗೆ ಒಪ್ಪಿಸುವ ಪರಿಪಾಠವಿದೆ. ಇದು ದೈನಂದಿನ ಪ್ರಕ್ರಿಯೆಯಾಗಿದ್ದು, ನೂರಾರು ಪ್ರಕರಣಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದರೆ ಎಲ್ಲಿಯೂ ಲೋಪವಾಗದಂತೆ ಬಸ್ ಸಿಬ್ಬಂದಿ ಕಳೆದುಕೊಂಡ ಲಗೇಜ್ಅನ್ನು ಪ್ರಾಮಾಣಿಕವಾಗಿ ಡಿಪೊ ಅಧಿಕಾರಿ ಸುಪರ್ದಿಗೆ ನೀಡುತ್ತಾರೆ. ಈ ಪ್ರಕರಣದಲ್ಲಿಯೂ ಅದೇ ನಡೆದಿತ್ತು. ಆದರೆ ಯಷಿ ಸುರಾನಾ ಯಾವ ಬಸ್ ಹತ್ತಿದ್ದರು ಮತ್ತು ಯಾವ ಬಸ್ ಡಿಪೋಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಆದರೂ ಕೈಚೆಲ್ಲದೆ ರಾಜರಾಜೇಶ್ವರಿ ಅವರ ತಂಡ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಕೊನೆಗೆ ಡಿಪೋ 13ರಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಗೇಜ್ ಗಳನ್ನು ಪರಿಶೀಲಿಸಿದಾಗ ಸದರಿ ಲಗೇಜ್ ಪತ್ತೆಯಾಗಿದೆ. ಅದು ಕೆಂಪು ಬಣ್ಣದ ಟ್ರಾಲಿ ಸೂಟ್ಕೇಸ್ ಆಗಿತ್ತು. ಸದರಿ ವಾಯುವಜ್ರ ಬಸ್ಸಿನ ಚಾಲಕರಾದ ವೈ. ಆರ್. ಯಾಸಿನ್ ಹಾಗೂ ಚಾಲಕ ಕಂ ನಿರ್ವಾಹಕ ಶರತ್ ಅವರು ಯಷಿ ಸುರಾನಾ ಅವರ ಲಗೇಜ್ ಅನ್ನು ಪ್ರಾಮಾಣಿಕತೆಯಿಂದ ಕಾಮಾಕ್ಯ ಡಿಪೋಗೆ ಮರಳಿಸಿದ್ದರು. ತಕ್ಷಣ ಅದರ ಫೋಟೋವನ್ನು ವಾಟ್ಸಪ್ ಗ್ರೂಪ್ ನಲ್ಲಿ ಪಡೆದುಕೊಂಡ ತಂಡ ಅದನ್ನು ಯಷಿ ಸುರಾನಾಗೆ ತೋರಿಸಿದ್ದಾರೆ. ಅವರು ತಕ್ಷಣ ಅದನ್ನು ಗುರುತು ಹಿಡಿದು, ಅದು ತಮ್ಮದೇ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿ ಕೇವಲ 20 ನಿಮಿಷಗಳಲ್ಲಿ ರಾಜರಾಜೇಶ್ವರಿ ಅವರ ತಂಡ ತಮ್ಮ ನೆರವಿಗೆ ಧಾವಿಸಿ, ಕಳೆದುಕೊಂಡಿದ್ದ ಲಗೇಜ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ತಮಗೆ ಅಪಾರ ಸಂತೋಷ ತಂದಿದೆ ಎಂದು ಯಷಿ ಸುರಾನಾ ಟಿವಿ9 ಗೆ ತಿಳಿಸಿದ್ದಾರೆ.
ಮುಂದಿನದೆಲ್ಲಾ ಔಪಚಾರಿಕವಾಗಿ ನಡೆದು, ರೆಡ್ ಟ್ರಾಲಿ ಬ್ಯಾಗ್ ಯಷಿ ಸುರಾನಾ ಅವರದ್ದೆ ಎಂದು ಖಾತ್ರಿಪಡಿಸಿಕೊಂಡು ಇಂಡಿಗೋ ವಿಮಾನದ ಲಗೇಜ್ ಟ್ಯಾಗ್ ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಯಷಿ ಸುರಾನಾರನ್ನು ಕಾಮಾಕ್ಯ ಬಸ್ ಡಿಪೋಗೆ ಕಳಿಸಿದ್ದಾರೆ. ಅಲ್ಲಿ ಮತ್ತೊಮ್ಮೆ ವಿವರಗಳನ್ನು ಚೆಕ್ ಮಾಡಿದ ಅಧಿಕಾರಿಗಳು ಕಳೆದುಕೊಂಡಿದ್ದ ಲಗೇಜ್ ಅನ್ನು ಯಷಿ ಸುರಾನಾಗೆ ಹಸ್ತಾಂತರಿಸಿದ್ದಾರೆ. ಬಿಎಂಟಿಸಿ ಸಿಬ್ಬಂದಿಯ ಕಾರ್ಯತತ್ಪರತೆಗೆ ಯಷಿ ಸುರಾನಾ ತಲೆದೂಗಿದ್ದಾರೆ. ಅಮೂಲ್ಯವಾದ ದಾಖಲೆಗಳಿದ್ದ ಸೂಟ್ಕೇಸ್ ವಾಪಸ್ ಸಿಕ್ಕಿದ್ದಕ್ಕೆ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಈ ರೀತಿಯ ಕಾರ್ಯವೈಖರಿ ಜಾರಿ ಮಾಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಯಷಿ ಸುರಾನಾ ಅಭಿನಂದಿಸಿದ್ದಾರೆ.
ಇನ್ನು ಬಿಎಂಟಿಸಿ ಸಹಾಯವಾಣಿ ಸೇವೆಯ ಬಗ್ಗೆ ಹೇಳಬೇಕೆಂದರೆ ಪ್ರತಿ ನಿತ್ಯ ಹೀಗೆ ಕೆಲವು ಪ್ರಯಾಣಿಕರು ತಮ್ಮ ಲಗೇಜ್ ಬಿಟ್ಟು ಮರೆತು ಹೋಗುತ್ತಾರೆ. ಅಂತಹ ಲಗೇಜ್ಗಳನ್ನು ಚಾಲಕ-ನಿರ್ವಾಹಕ ಸಿಬ್ಬಂದಿ ಜಾಗರೂಕತೆಯಿಂದ ಸಹಾಯವಾಣಿ ಗಮನಕ್ಕೆ ತರುತ್ತಾರೆ. ಲಗೇಜ್ ಕಳೆದುಕೊಂಡವರಿಗೆ ಹೀಗೆ ಪ್ರತಿ ದಿನ ಅವರ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆಯುವಲ್ಲಿ ಬಿಎಂಟಿಸಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಬಿಎಂಟಿಸಿ ನಮ್ಮ ಹೆಮ್ಮೆ – BMTC Helpline number : 77609 91212
ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವ ಸಿಬ್ಬಂದಿಗೆ ಪ್ರತಿ ತಿಂಗಳು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡುವ ಪದ್ಧತಿಯೂ ಇದೆ. ಇದು ಅವರ ಸೇವಾಮನೋಭಾವವನ್ನು ಉತ್ತೇಜಿಸಲು ಸಹಕಾರಿಯಾಗಿದೆ ಮತ್ತು ಪ್ರಯಾಣಿಕರಿಗೂ ನಮ್ಮ ಸೇವೆಯ ಬಗ್ಗೆ ಗೌರವ ವಿಶ್ವಾಸ ಮೂಡಲು ಪ್ರಯೋಜನಕಾರಿಯಾಗಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಪ್ರಭಾಕರ್ ರೆಡ್ಡಿ ಅವರು ಟಿವಿ9 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Sun, 4 February 24