ಸಚಿವ ಸತೀಶ್ ಜಾರಕಿಹೊಳಿ ಇಲಾಖೆಗೆ ಗುತ್ತಿಗೆದಾರರಿಂದ ಬಹುಪರಾಕ್: ಭ್ರಷ್ಟಾಚಾರ ಆರೋಪದ ನಡುವೆ ಮಹತ್ವದ ಬೆಳವಣಿಗೆ
ಲೋಕೋಪಯೋಗಿ ಇಲಾಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದಕ್ಕಾಗಿ ಗುತ್ತಿಗೆದಾರರ ಸಂಘವು ಸಚಿವ ಸತೀಶ್ ಜಾರಕಿಹೊಳಿ ಅವರ ಇಲಾಖೆಯನ್ನು ಶ್ಲಾಘಿಸಿದೆ. ಜೊತೆಗೆ, 38,000 ಕೋಟಿ ಬಾಕಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 29: ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಜಾಗಗಳ ಮೇಲೆ ಇಡಿ ದಾಳಿ ವೇಳೆ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಷ್ಟಚಾರ ಸಂಬಂಧ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿತ್ತು. ಈ ನಡುವೆ ಸಿಎಂ ಡಿ.ಕೆ.ಶಿವಕುಮಾರ್ಗೆ ಬರೆದ ಪತ್ರದಲ್ಲಿ ಸತೀಶ್ ಜಾರಕಿಹೊಳಿ ಇಲಾಖೆ ಬಗ್ಗೆ ಗುತ್ತಿಗೆದಾರರು ಹಾಡಿಹೊಗಳಿದ್ದಾರೆ. PWD ಇಲಾಖೆಯ ಟೆಂಡರ್ನಲ್ಲಿ ಪಾರದರ್ಶಕತೆ ಇದೆ. ಹಣ ಬಿಡುಗಡೆಯ ವಿಚಾರದಲ್ಲೂ ಪಾರದರ್ಶಕತೆ ಇದೆ ಎಂದು ತಿಳಿಸಿದ್ದಾರೆ.
ಸಿಎಂಗೆ ಗುತ್ತಿಗೆದಾರರು ಬರೆದ ಪತ್ರದಲ್ಲಿ ಏನಿದೆ?
2021-22ರಿಂದ ಇಲ್ಲಿಯವರೆಗೂ ಗುತ್ತಿಗೆದಾರರ ಬಾಕಿ ಹಣವು ಇಲಾಖೆಗಳಲ್ಲಿ ಬಿಡುಗಡೆಯಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಜಿ.ಬಿ.ಎ.(ಬೆಂಗಳೂರು ಮಹಾನಗರ ಪಾಲಿಕೆ)ನಲ್ಲಿ ಹೊರತು ಪಡಿಸಿ ಇತರೇ ಬೇರೆ ಯಾವುದೇ ಇಲಾಖೆಗಳು ಟೆಂಡರ್ ಮತ್ತು ಹಣ ಬಿಡುಗಡೆ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಭರವಸೆ ಪ್ರಕಾರ ಬಾಕಿ ಇರುವ ರೂ.38,000.00 ಕೋಟಿ ಮೊತ್ತವನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಬಿಗಿಯಾಗಲಿದೆ ಇಡಿ ಕುಣಿಕೆ: ದೆಹಲಿ ಅಧಿಕಾರಿಗಳಿಂದ ನಡೆಯಲಿದ್ಯಂತೆ ತನಿಖೆ
2017-18, 2018-19 ವ್ಯಾಟಿನಿಂದ ಜಿ.ಎಸ್.ಟಿ. ವ್ಯತ್ಯಾಸದ ಮೊತ್ತ 8%ನ್ನು ತುರ್ತಾಗಿ ನೀಡಲು ಅರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು ಶಿಪಾರಸ್ಸು ಮಾಡಬೇಕು. ಇ-ಸಂಗ್ರಹಣಾ ವೇದಿಕೆಯ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನಲ್ಲಿ (Contract Management Module) ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರದ ಆದೇಶ ರದ್ದುಪಡಿಸಬೇಕು. ಕರ್ನಾಟಕ ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಸಕರು ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ನೀಡುವ ವಿಚಾರವಾಗಿ ಆದ್ಯತೆ ನೀಡಬೇಕು. ಜೊತೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯ ಗುತ್ತಿಗೆದಾರರಿಗೆ ಪ್ರೋತ್ಸಾಹ ನೀಡಬಾರದು. ಈ ವಿಚಾರವಾಗಿ ಮುಖ್ಯಮಂತ್ರಿಗಳು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಪತ್ರ ಮುಖೇನ ಆಗ್ರಹಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




