ಪ್ರತಿಭಟನೆಗೆ ಫ್ರೀಡಂ ಪಾರ್ಕ್‌ನ ಸಭಾಂಗಣ ಬಳಸಿಕೊಂಡು ಬಾಡಿಗೆ ಪಾವತಿಸದ ಸಿಜೆಪಿ: ಆರ್.ಅಶೋಕ್ ಕಿಡಿ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಸಭಾಂಗಣ ಬಳಸಿಕೊಂಡು ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜಿರಳೆ ಪಾರ್ಟಿಯವರಿಂದ ಎಷ್ಟು ಬಾಡಿಗೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಕೂಡಲೇ ನೀಡಿ. ಇಲ್ಲವಾದರೆ ಎಲ್ಲ ಸಂಘಟನೆಗಳಿಗೂ ಸಂಪೂರ್ಣ ಉಚಿತವಾಗಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಿ ಎಂದವರು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 12: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ಕ್ರಮದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಕ್ಟೋಬರ್ 8ರಂದು ಪ್ರತಿಭಟನೆ ನಡೆಸಿತ್ತು. ನಟ ಪ್ರಕಾಶ್ ರಾಜ್, ಅಭಿಜಿತ್ ದೀಪ್ಕೆ, ಯೂಟ್ಯೂಬರ್ ಧ್ರುವ ರಾಠಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಪ್ರತಿಭಟನೆಗೆ ಫ್ರೀಡಂ ಪಾರ್ಕ್‌ನ ಸಭಾಂಗಣ ಬಳಸಿಕೊಂಡ ಸಿಜೆಪಿ ಬಾಡಿಗೆಯನ್ನೇ ಪಾವತಿಸಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಸರ್ಕಾರದಿಂದ ಬಿಟ್ಟಿ ಭಾಗ್ಯ ಯೋಜನೆ ಜಾರಿ’
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಜಿರಳೆಗಳ ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯ ಯೋಜನೆ ಜಾರಿ ಮಾಡಿದೆ. ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಸಂಘ, ಸಂಸ್ಥೆಗಳು ಫ್ರೀಡಂ ಪಾರ್ಕ್‌ನ ಸಭಾಂಗಣ ಬಳಸಿಕೊಂಡರೆ 1 ಲಕ್ಷ ರೂ. ಬಾಡಿಗೆ ಪಾವತಿಸಬೇಕು. ಆದರೆ ಜಿರಳೆ ಪಾರ್ಟಿಯವರು ನಡೆಸಿದ ಪ್ರತಿಭಟನೆಗೆ ಒಂದು ರೂಪಾಯಿ ಕೂಡ ಪಾವತಿಸಿಲ್ಲ. ಬೆಂಗಳೂರಿನ ಒಬ್ಬ ಶಾಸಕರು ಹಾಗೂ ಮುಖಂಡರು ಬಾಡಿಗೆ ತೆಗೆದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಮೌಖಿಕ ಸೂಚನೆ ಕೂಡ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ತನಗೆ ಅನುಕೂಲವಾಗುವಂತೆ ಪ್ರತಿಭಟನೆ ಮಾಡುವವರಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಅದು ಕೂಡ ಕೇಂದ್ರ ಸರ್ಕಾರದ ವಿರುದ್ಧ, ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಿದರಂತೂ ಸಂಪೂರ್ಣ ಉಚಿತ ಸ್ಕೀಮು ನೀಡುತ್ತದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಎಸ್ಐಆರ್ ವಿರುದ್ಧ ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ: ಆಯೋಗದ ವಿರುದ್ಧ ಗುಡುಗಿದ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್ ರಾಜ್
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಇಲ್ಲಿ ಬರದಿಂದ ಕಂಗೆಟ್ಟ ರೈತರು, ಗೌರವಧನ ಹೆಚ್ಚಳವಾಗದೆ ನೋವಿನಲ್ಲಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೂಡ ಪ್ರತಿಭಟನೆ ನಡೆಸುತ್ತಾರೆ. ಹಾಗೆಂದೂ ಅವರೆಲ್ಲರಿಗೂ ಉಚಿತವಾಗಿ ಸಭಾಂಗಣವನ್ನು ನೀಡಲಾಗಿದೆಯೇ? ಜಿರಳೆ ಪಾರ್ಟಿಯವರಿಂದ ಎಷ್ಟು ಬಾಡಿಗೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಕೂಡಲೇ ನೀಡಿ. ಇಲ್ಲವಾದರೆ ಎಲ್ಲ ಸಂಘಟನೆಗಳಿಗೂ ಸಂಪೂರ್ಣ ಉಚಿತವಾಗಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಿ ಎಂದವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




