ಹಾಲಿನ ದರ 3 ರೂ ಹೆಚ್ಚಳಕ್ಕೆ ತೀರ್ಮಾನ, ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಹಾಲು ಪ್ಯಾಕೇಟ್ ದರ 3 ರೂ. ಹೆಚ್ಚಳ ಮಾಡಿ ನೇರವಾಗಿ ರೈತರಿಗೆ ಕೊಡಲು ಒಕ್ಕೂಟಗಳೇ ನಿರ್ಧರಿಸಿವೆ. ಗ್ರಾಹಕರಿಗೂ ಹೆಚ್ಚು ಹೊರೆ ಆಗುವ ಹಾಗೆ ಮಾಡಲಾಗುವುದಿಲ್ಲ. ಹೀಗಾಗಿ ಸಿಎಂ ಸರಿಯಾದ ನಿರ್ಧಾರಕ್ಕೆ ಬರ್ತಾರೆ ಎಂದು ಹೇಳಿದರು.
ಬೆಂಗಳೂರು: ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ನಲ್ಲೂ ತೀರ್ಮಾನ ಆಗಿದೆ. ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ ಎಂದು ವಿಧಾನಪರಿಷತ್ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದರು. ಕರ್ನಾಟಕದಲ್ಲಿ 16 ಮಿಲ್ಕ್ ಯೂನಿಯನ್ ಇದೆ. ಹಾಲು ಉತ್ಪಾದಕರ ಜತೆ ಗ್ರಾಹಕರನ್ನೂ ನೋಡಬೇಕಾಗುತ್ತದೆ. ಹಾಲು ಪ್ಯಾಕೇಟ್ ದರ 3 ರೂ. ಹೆಚ್ಚಳ ಮಾಡಿ ನೇರವಾಗಿ ರೈತರಿಗೆ ಕೊಡಲು ಒಕ್ಕೂಟಗಳೇ ನಿರ್ಧರಿಸಿವೆ. ಗ್ರಾಹಕರಿಗೂ ಹೆಚ್ಚು ಹೊರೆ ಆಗುವ ಹಾಗೆ ಮಾಡಲಾಗುವುದಿಲ್ಲ. ಹೀಗಾಗಿ ಸಿಎಂ ಸರಿಯಾದ ನಿರ್ಧಾರಕ್ಕೆ ಬರ್ತಾರೆ ಎಂದು ಹೇಳಿದರು.
ಹಾಲಿನ ದರ ಹೆಚ್ಚಳಕ್ಕೆ ಸಹಾಯಧನ ನೀಡುವಂತೆ ಕಾಂಗ್ರೆಸ್ ಸದಸ್ಯ ಎಸ್.ರವಿ ಮನವಿ
ರಾಜ್ಯದಲ್ಲಿ ಮಳೆಯಿಂದ ಹಾಲು ಉತ್ಪಾದನೆ ಇಳಿಕೆಯಾಗಿದೆ. ಹಾಲಿನ ದರ ಹೆಚ್ಚಳಕ್ಕೆ ಸಹಾಯಧನ ನೀಡುವಂತೆ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಮನವಿ ಮಾಡಿದರು. ಕೊರೊನಾ ವೇಳೆ ಹಾಲು ಒಕ್ಕೂಟಗಳು ಸ್ಥಗಿತವಾಗಿರಲಿಲ್ಲ. ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ 15 ಲಕ್ಷ ಲೀ. ಹಾಲು ಉತ್ಪಾದನೆ ಮಾಡಲಾಗುತ್ತಿತ್ತು. ಮಾರಾಟವಾಗದಿದ್ದಾಗ ಒಕ್ಕೂಟಗಳೇ ರೈತರ ನೆರವಿಗೆ ಬಂದಿದ್ದವು. ಈ ಬಾರಿ ಮಳೆ ತೀವ್ರತೆಯಿಂದ ಹಸುಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಹಾಲು ಉತ್ಪಾದನೆ ಕೂಡ ಕಡಿಮೆಯಾಗಿದೆ. ಆದ್ದರಿಂದ ಕೂಡಲೇ ಹಾಲಿನ ದರ ಹೆಚ್ಚಳ ಮಾಡಿ ಎಂದು ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಒತ್ತಾಯಿಸಿದರು.
ಹಾಲಿನ ದರ ಹೆಚ್ಚಳಕ್ಕೆ ಮುಂದಾದ ಕೆಎಂಎಫ್
ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿರುವ ಕೆಎಂಎಫ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುಮೋದನೆ ಇಲ್ಲದಿದ್ದರೂ ಹಾಲಿನ ಬೆಲೆಯನ್ನು ಒಂದು ಲೀಟರ್ಗೆ 3 ರೂಪಾಯಿ ಹೆಚ್ಚಿಸಲು ಮುಂದಾಗಿದೆ. ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿನಿಂದ ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಅಧ್ಯಕ್ಷರು ತಮ್ಮ ಅಧಿಕಾರ ದರ ಏರಿಕೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಕೆಎಂಎಫ್‌ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಲಾಗಿದೆ.
ಕೆಎಂಎಫ್ ಜಾರಿಗೊಳಿಸಿರುವ ಹಲವು ಯೋಜನೆಗಳಿಗೆ ಸರ್ಕಾರದ ಆರ್ಥಿಕ ನೆರವು ಇದೆ. ಹೀಗಾಗಿ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:03 pm, Tue, 13 September 22