ಕೆಪಿಎಸ್ಸಿ ಹಗರಣ: ಕೊನೆಗೂ ಸಿಐಡಿ ಮುಂದೆ ವಿಚಾರಣೆಗೆ ಹಾಜರಾದ ನಾಪತ್ತೆಯಾಗಿದ್ದ ಶಾಂತಾ ಹೊಸಮನಿ
ಕೆಪಿಎಸ್‍ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಕೊನೆಗೂ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ನೇಮಕಾತಿ ಸಂಬಂಧ ಮಮಿತಾ ಎಂಬ ಅಭ್ಯರ್ಥಿಯ ಜೊತೆ ಮೂರು ಬಾರಿ ಫೋನ್ ಮೂಲಕ KPSC ಸದಸ್ಯೆ ಶಾಂತಾ ಹೊಸಮನಿ ಮಾತುಕತೆ ನಡೆಸಿದ್ದರು. ಸಂದರ್ಶನಕ್ಕೂ ಮೊದಲೇ ಅಭ್ಯರ್ಥಿಯ ಜೊತೆ ಸಂಭಾಷಣೆ ನಡೆಸುವ ಆರೋಪ ಅವರ ಮೇಲಿದೆ.

ಬೆಂಗಳೂರು, ಸೆಪ್ಟೆಂಬರ್ 17: ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಪ್ರಕರಣ ಸಂಬಂಧ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಕೊನೆಗೂ ಸಿಐಡಿ ಕಚೇರಿಕಗೆ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಅವರು ಕೊನೆಗೂ ವಿಚಾರಣೆಗೆ ಆಗಮಿಸಿದ್ದಾರೆ. ಹಗರಣ ಬಹಿರಂಗವಾದ ಬೆನ್ನಲ್ಲೇ ಶಾಂತಾ ನಾಪತ್ತೆಯಾಗಿದ್ದರು. ವಿಚಾರಣೆ ಸಂಬಂಧ ಸಿಐಡಿ ಅಧಿಕಾರಿಗಳು ಅವರಿಗೆಬ ನೋಟಿಸ್ ನೀಡಿದ್ದರು. ಅಲ್ಲದೆ, ಆರೋಪಿಯ ಪತ್ತೆಗಾಗಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಸಿದ್ದರು.
ಶಾಂತಾ ಹೊಸಮನಿ ಮೇಲಿರುವ ಆರೋಪಗಳೇನು?
ನೇಮಕಾತಿ ಸಂಬಂಧ ಮಮಿತಾ ಎಂಬ ಅಭ್ಯರ್ಥಿಯ ಜೊತೆ ಮೂರು ಬಾರಿ ಫೋನ್ ಮೂಲಕ KPSC ಸದಸ್ಯೆ ಶಾಂತಾ ಹೊಸಮನಿ ಮಾತುಕತೆ ನಡೆಸಿದ್ದರು. ಸಂದರ್ಶನಕ್ಕೂ ಮೊದಲೇ ಅಭ್ಯರ್ಥಿಯ ಜೊತೆ ಸಂಭಾಷಣೆ ನಡೆಸುವ ಆರೋಪ ಅವರ ಮೇಲಿದ್ದು, ಇಡಿ ಅಧಿಕಾರಿಗಳಿಗೂ ಸಿಗದೇ ಅವರು ಎಸ್ಕೇಪ್ ಆಗಿದ್ದರು. ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಮಾತ್ರವಲ್ಲದೆ RWD ಇಲಾಖೆ ಮತ್ತು AEE ಅಕ್ರಮದಲ್ಲೂ ಶಾಂತಾ ಹೆಸರು ತಳಕುಹಾಕಿಕೊಂಡಿದೆ. 2023ರಲ್ಲಿ AEE ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು. ಆದರೆ ಸದಸ್ಯರಿಗೆ ತಿಳಿಸಿದೆ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತ ಹೊಸಮನಿ ಮುಂದಾಗಿದ್ದರು. ಆಗಿನ ಕಾರ್ಯದರ್ಶಿ ಮೂಲಕ ಪ್ರಕಟಣೆಗೆ ಮುಂದಾಗಿದ್ದರು. ಆದರೆ ಕೆಲ ಸದಸ್ಯರ ಆಕ್ಷೇಪದಿಂದ ಪಟ್ಟಿ ಪ್ರಕಟವಾಗಿರಲಿಲ್ಲ. ಬಳಿಕ ಉಪ ಸಮಿತಿಯಿಂದ ಶಾಂತ ಹೊಸಮನಿ ಹೊರಗಿಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿತ್ತು.
ಇದನ್ನೂ ಓದಿ: ಕೆಪಿಎಸ್ಸಿ ಹಗರಣ: ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಿತ್ತು ಪ್ರಶ್ನೆ; ಸ್ಫೋಟಕ ಮಾಹಿತಿ ಬಹಿರಂಗ
ಜಾರಿ ನಿರ್ದೇಶನಾಲಯ (ED) ಆಗಸ್ಟ್ 18 ರಂದು ಶಾಂತಾ ಹೊಸಮನಿ ಹಾಗೂ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಪ್ರಮುಖರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ತದನಂತರ ಸೆಪ್ಟೆಂಬರ್‌ನಲ್ಲಿ ಸಿಐಡಿ ಅಧಿಕಾರಿಗಳು ಸಹ ಇವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಷ್ಟೆಲ್ಲ ನಡೆದರೂ ಶಾಂತಾ ಹೊಸಮನಿ ಮಾತ್ರ ಅಧಿಕಾರಿಗಳ ಕೈಗೆ ಸಿಗದೆ ಸತಾಯಿಸುತ್ತಿದ್ದರು. ಆದರೀಗ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಕೊನೆಗೂ ಅವರು ಸಿಐಡಿ ಮುಂದೆ ಪ್ರತ್ಯಕ್ಷವಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Thu, 17 September 26




