ಶಕ್ತಿ ಯೋಜನೆ: ನಾಲ್ಕು ಸಾರಿಗೆ ನಿಗಮಗಳಿಗೆ 430 ಕೋಟಿ ಬಿಡುಗಡೆಗೆ ಸರ್ಕಾರ ಆದೇಶ
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಮರುಪಾವತಿಯ ಆರನೇ ಕಂತಿನ ರೂಪದಲ್ಲಿ 430 ಕೋಟಿ ರೂಪಾಯಿ ಅನುದಾನ ಬಿಡುಗಡೆ ಸಂಬಂಧ ಸರ್ಕಾರ ಆದೇಶಿಸಿದೆ. ಯೋಜನೆಯಡಿ ವಾಸ್ತವವಾಗಿ ಆಗಿರುವ ವೆಚ್ಚದ ಸಮಗ್ರ ವಿವರಗಳನ್ನು ನೋಡಲ್ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಗೆ ಸಲ್ಲಿಸಬೇಕು. ಸ್ಮಾರ್ಟ್ ಕಾರ್ಡ್‌ಗಳ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ.

ಬೆಂಗಳೂರು, ಅಕ್ಟೋಬರ್ 11: ಮಹಿಳೆಯರಿಗೆ ಸಾಮಾನ್ಯ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಸಂಬಂಧ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಗಳಿಗೆ ಒಟ್ಟು 430 ಕೋಟಿ ರೂಪಾಯಿ ಬಿಡುಗಡೆ ಮಾಡೋದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಶಕ್ತಿ ಯೋಜನೆಗಾಗಿ ಸಾರಿಗೆ ನಿಗಮಗಳಿಗೆ ನೀಡಲಾಗುತ್ತಿರುವ ಮರುಪಾವತಿಯ ಆರನೇ ಕಂತು ಇದಾಗಿದೆ. ಒಟ್ಟು 430 ಕೋಟಿ ರೂಪಾಯಿಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 164.34 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಎನ್‌ಡಬ್ಲ್ಯೂಕೆಆರ್‌ಟಿಸಿ) 105.39 ಕೋಟಿ ರೂ., ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 81.82 ಕೋಟಿ ರೂ. ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 78.43 ಕೋಟಿ ರೂ. ದೊರೆಯಲಿದೆ.
ಸಾರಿಗೆ ನಿಗಮಗಳಿಗೆ 5,651 ಕೋಟಿ ರೂ. ಬಾಕಿ?
ಎರಡು ವಾರಗಳ ಹಿಂದೆ ಕೆಎಸ್‌ಆರ್‌ಟಿಸಿ ಆಹ್ವಾನಿಸಿದ್ದ ಪ್ರಸ್ತಾವನೆಗಳ ಕೋರಿಕೆ (ಆರ್‌ಎಫ್‌ಪಿ) ಈ ಬೆಳವಣಿಗೆಗೆ ಸಂಬಂಧಿಸಿದೆ. ಜೂನ್ 2023ರಿಂದ ಜುಲೈ 2026ರವರೆಗೆ ಶಕ್ತಿ ಯೋಜನೆಗಾಗಿ ಸಾರಿಗೆ ನಿಗಮಗಳು 20,956 ಕೋಟಿ ರೂಪಾಯಿ ವೆಚ್ಚ ಮಾಡಿವೆ. ಆದರೆ, ಈ ಅವಧಿಯಲ್ಲಿ 15,305 ಕೋಟಿ ರೂಪಾಯಿ ಮಾತ್ರ ಮರುಪಾವತಿಯಾಗಿದ್ದು, ಇನ್ನೂ 5,651 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಆರ್‌ಎಫ್‌ಪಿ ದಾಖಲೆಯಲ್ಲಿ ತಿಳಿಸಲಾಗಿದೆ. ನಾಲ್ಕು ಸಾರಿಗೆ ನಿಗಮಗಳು ಒಟ್ಟು 26,054 ಬಸ್‌ಗಳನ್ನು ನಿರ್ವಹಿಸುತ್ತಿದ್ದು, ಪ್ರತಿದಿನ 1.20 ಕೋಟಿ ಪ್ರಯಾಣಿಕರ ಬೋರ್ಡಿಂಗ್‌ಗಳನ್ನು ದಾಖಲಿಸುತ್ತವೆ. ಇದರಲ್ಲಿ ಶಕ್ತಿ ಯೋಜನೆಯಡಿ ನಡೆಯುವ 75.68 ಲಕ್ಷ ಪ್ರಯಾಣಗಳೂ ಸೇರಿವೆ ಎನ್ನಲಾಗಿದೆ.
ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣ: ಆಧಾರ್ ಬದಲಿಗೆ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾದ ಸರ್ಕಾರ
ಹಣ ಮರುಪಾವತಿಗೆ ಸರ್ಕಾರದ ಷರತ್ತುಗಳು
ಇತ್ತೀಚಿನ 430 ಕೋಟಿ ರೂ. ಬಿಡುಗಡೆಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಯೋಜನೆಯಡಿ ವಾಸ್ತವವಾಗಿ ಆಗಿರುವ ವೆಚ್ಚದ ಸಮಗ್ರ ವಿವರಗಳನ್ನು ನೋಡಲ್ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಗೆ ಸಲ್ಲಿಸಬೇಕು. ಸ್ಮಾರ್ಟ್ ಕಾರ್ಡ್‌ಗಳ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಷರತ್ತುಗಳನ್ನು ಸಾರಿಗೆ ನಿಗಮಗಳು ಪಾಲಿಸಿದ ನಂತರವೇ ಬಿಡುಗಡೆಯಾದ ಅನುದಾನದ ಬಳಕೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Sun, 11 October 26




