ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಯಿಂದ ಎರಡೂವರೆ ಗಂಟೆ ಪ್ರಯಾಣದ ಸಮಯ ಉಳಿಯಲಿದೆ; ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ
ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಟಲೈಟ್ ರಿಂಗ್ ರೋಡ್ ಪ್ರಾಜೆಕ್ಟ್ ಮಾಡಲಿದ್ದೇವೆ. 288 ಕಿ.ಮೀ ರಿಂಗ್ ರೋಡ್ ಇದಾಗಲಿದ್ದು, ಇದರಿಂದ ಬಹಳಷ್ಟು ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ (Bengaluru- Chennai Expressway) ಕಾಮಗಾರಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಈಗಾಗಲೇ 36% ಕಾಮಗಾರಿ ಪೂರ್ಣಗೊಂಡಿದೆ. ಈಗ ಚೆನ್ನೈಗೆ ತೆರಳಲು 5 ಗಂಟೆ ಬೇಕಾಗುತ್ತಿದೆ. ಆದರೆ, ಈ ಹೆದ್ದಾರಿಯಿಂದ 2 ಗಂಟೆ 15 ನಿಮಿಷಕ್ಕೆ ಬೆಂಗಳೂರಿನಿಂದ (Bangalore) ಚೆನ್ನೈಗೆ ತೆರಳಬಹುದು. 2024ರ ಜನವರಿಯೊಳಗೆ ನಾವು ಎಕ್ಸ್ಪ್ರೆಸ್ವೇ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಅರಣ್ಯ ಇಲಾಖೆಯಿಂದ ಕೆಲವು ಪರ್ಮಿಷನ್ ಸಿಕ್ಕ ನಂತರ ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎಂದಿದ್ದಾರೆ.
ಕರ್ನಾಟಕದ 3 ಪ್ಯಾಕೇಜ್ಗಳ ಪರಿಶೀಲನೆ ಮಾಡಲಾಗಿದೆ. ಇದು ಮೊದಲ ಹಂತದ ಯೋಜನೆಯಾಗಿದೆ. ಈ ಹಂತದಲ್ಲಿ ಕರ್ನಾಟಕದಲ್ಲಿ ಒಟ್ಟು 71 ಕಿ.ಮೀ. ಹೆದ್ದಾರಿ ನಿರ್ಮಾಣ ಆಗಲಿದೆ. 5,100 ಕೋಟಿ ರೂ. ಯೋಜನೆ ಇದಾಗಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ನಾವು 16,730 ಕೋಟಿ ರೂ. ಮೌಲ್ಯದ ಈ 262 ಕಿಮೀ ಉದ್ದದ 8 ಲೇನ್ ಹೆದ್ದಾರಿಯನ್ನು ನಿರ್ಮಿಸುತ್ತಿದ್ದೇವೆ. ಇದನ್ನು ಗಂಟೆಗೆ 120 ಕಿಮೀ ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರ 300 ಕಿಮೀ.ಯಿಂದ 262 ಕಿಮೀಗೆ ಕಡಿಮೆಯಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿ 2 ದಿನ ರಾಜ್ಯ ಪ್ರವಾಸ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸಮೀಕ್ಷೆ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 26 ಹೊಸ ಹಸಿರು ಮೋಟಾರು ಮಾರ್ಗಗಳಲ್ಲಿ 262-ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕೂಡ ಒಂದಾಗಿದೆ. ಮೇ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದರ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದ್ದರು. 14,870 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡ ನಂತರ ಈ ಎಕ್ಸ್ಪ್ರೆಸ್ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಸಾಗಲಿದೆ.
Interacting with Media on the progress of Bengaluru – Chennai Expressway, Karnataka https://t.co/u5OXQnoZLo
— Nitin Gadkari (@nitin_gadkari) January 5, 2023
ನಾವು ಅಮೃತ್ ಸರೋವರ್ಗಳನ್ನು ಮಾಡಲಿದ್ದೇವೆ. ಹಳ್ಳಿಯ ನೀರು ಹಳ್ಳಿಯಲ್ಲಿಯೇ ಇರಬೇಕು, ನಗರದ ನೀರು ನಗರದಲ್ಲಿರಬೇಕು. ಹರಿಯುವ ನೀರನ್ನು ನಿಲ್ಲಿಸಬೇಕು, ನಿಂತ ನೀರನ್ನು ಭೂಮಿಗೆ ಇಳಿಯುವಂತೆ ಮಾಡಬೇಕು. ಅದರನ್ವಯ ನಾವು ಕರ್ನಾಟಕದ ಪ್ರಮುಖ ನಗರಗಳಿಗೆ ಅಮೃತ್ ಸರೋವರ ನಿರ್ಮಾಣ ಮಾಡುವ ಯೋಚನೆ ಇದೆ. ಅರಣ್ಯದ ಜಾಗ ಬರುವ ಕಡೆಗಳಲ್ಲಿ ಫ್ಲೈಓರ್ ನಿರ್ಮಾಣ ಮಾಡುವುದಕ್ಕಿಂತಲೂ ಅರಣ್ಯ ಬರುವ ಜಾಗದಲ್ಲಿ ಅಂಡರ್ ಪಾಸ್ ಮಾಡುವ ಯೋಚನೆ ಇದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Nitin Gadkari: ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ ವೈಮಾನಿಕ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು ಟ್ರಾಫಿಕ್ಗೆ ಕಡಿವಾಣ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಟಲೈಟ್ ರಿಂಗ್ ರೋಡ್ ಪ್ರಾಜೆಕ್ಟ್ ಮಾಡಲಿದ್ದೇವೆ. 288 ಕಿ.ಮೀ ರಿಂಗ್ ರೋಡ್ ಇದಾಗಲಿದ್ದು, ಇದರಿಂದ ಬಹಳಷ್ಟು ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ. ಬೆಂಗಳೂರು ನಗರದ ಹೊರವಲಯದ ಪಟ್ಟಣಗಳಿಗೆ ಈ ರಿಂಗ್ ರಸ್ತೆ ಸಂಪರ್ಕ ಕಲ್ಪಿಸಲಿದೆ. ಹೊಸಕೋಟೆ, ದೊಡ್ಡಬಳ್ಳಪುರ, ದೇವನಹಳ್ಳಿ, ಆನೇಕಲ್ ಮುಖಾಂತರ ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದೆ. ಯಾವುದೇ ಫ್ಲೈಓರ್ ಮಾಡಿದರೂ ಡಬಲ್ ಡೆಕ್ಕರ್ ಮಾಡಲು ಚರ್ಚೆ ನಡೆಯುತ್ತಿದೆ. ಏಕೆಂದರೆ, 10 ವರ್ಷದ ನಂತರ ಮತ್ತೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯ ಇರುವುದಿಲ್ಲ. ಹೀಗಾಗಿ ಡಬಲ್ ಡೆಕ್ಕರ್ ಮಾಡೋದು ಒಳ್ಳೆಯದು. ಆದರೂ ರಾಜ್ಯ ಸರ್ಕಾರ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
ಬೆಂಗಳೂರಿನಿಂದ ಶೇಖರಿಸಲ್ಪಟ್ಟ ತಾಜ್ಯಗಳಿಂದ ರಸ್ತೆಗಳ ನಿರ್ಮಾಣ ಮಾಡಬಹುದಾ? ಎಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಇದೇನಾದರೂ ಸಾಧ್ಯವಾದರೆ ಮಾಲಿನ್ಯ ಕಡಿಮೆ ಆಗೋದರ ಜತೆಗೆ ಕಾಮಗಾರಿಯ ವೆಚ್ಚ ಕಡಿಮೆ ಆಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಗೇ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ವೈಯಕ್ತಿಕ ವಾಹನದ ಬದಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ಜನರನ್ನು ಉತ್ತೇಜಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 5 January 23