ಎಚ್ಚರ! ನೀವು ತಿನ್ನುವ ಕರಿದ ತಿಂಡಿ ಎಣ್ಣೆಯಲ್ಲೇ ಅಪಾಯಕಾರಿ ಟ್ರಾನ್ಸ್ ಫ್ಯಾಟ್, 40ಕ್ಕೂ ಹೆಚ್ಚು ಕಡೆ ಅಸುರಕ್ಷಿತ ಎಣ್ಣೆ ಪತ್ತೆ
ಬೆಂಗಳೂರು ಸೇರಿದಂತೆ ವಿವಿಧ ಆಹಾರ ಮಳಿಗೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯ ಮಾದರಿಗಳ ಪರೀಕ್ಷೆಯಲ್ಲಿ 40ಕ್ಕೂ ಹೆಚ್ಚು ಕಡೆ ಅಸುರಕ್ಷಿತ ಗುಣಮಟ್ಟ ಪತ್ತೆಯಾಗಿದೆ. ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ನೀಡಿ 28.91 ಲಕ್ಷ ರೂ.ದಂಡ ವಿಧಿಸಿರುವ ಆಹಾರ ಸುರಕ್ಷತಾ ಇಲಾಖೆ ಇದೀಗ ಹೊಸ ಮಾರ್ಗಸೂಚಿಗೆ ಮುಂದಾಗಿದೆ.

ಮುಖ್ಯಾಂಶಗಳು
- ಬೆಂಗಳೂರಿನ 40ಕ್ಕೂ ಹೆಚ್ಚು ಕಡೆ ಬಳಸುತ್ತಿದ್ದ ಅಡುಗೆ ಎಣ್ಣೆ ಅಸುರಕ್ಷಿತ
- ಹೃದಯ ಸಂಬಂಧಿ ಕಾಯಿಲೆಗಳು, ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣ
- ಅಧಿಕ ಟ್ರಾನ್ಸ್ ಫ್ಯಾಟ್ ಎಣ್ಣೆಯಲ್ಲಿ ಮಾಡಿದ ತಿಂಡಿ ಸೇವನೆಯಿಂದ ಕ್ಯಾನ್ಸರ್ ಅಪಾಯ
ಬೆಂಗಳೂರು, ಜುಲೈ 23: ಹೋಟೆಲ್, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳು ಹಾಗೂ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಕರಿದ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇಲಾಖೆಯು ಬೆಂಗಳೂರಿನಲ್ಲಿ (Bengaluru) ನಡೆಸಿದ ತಪಾಸಣೆಯಲ್ಲಿ 40ಕ್ಕೂ ಹೆಚ್ಚು ಕಡೆ ಬಳಸುತ್ತಿದ್ದ ಅಡುಗೆ ಎಣ್ಣೆ ಸುರಕ್ಷಿತ ಗುಣಮಟ್ಟ ಹೊಂದಿರಲಿಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಅಡುಗೆ ಎಣ್ಣೆಯಲ್ಲಿ ಅಪಾಯಕಾರಿ ಟ್ರಾನ್ಸ್ ಫ್ಯಾಟ್ ಪತ್ತೆಯಾಗಿದೆ.
40ಕ್ಕೂ ಹೆಚ್ಚು ಹೋಟೆಲ್ ಮಾಲೀಕರಿಗೆ ನೋಟಿಸ್
ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಆಹಾರ ಮಳಿಗೆಗಳಿಂದ ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ಟ್ರಾನ್ಸ್ ಫ್ಯಾಟ್ ಇರುವ ಅಂಶ ಪತ್ತೆಯಾಗಿದೆ. ಇದರ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಒಟ್ಟು 28.91 ಲಕ್ಷ ರೂ. ದಂಡ ವಿಧಿಸಲಾಗಿದೆ.
ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್‌ಗೆ ದಾರಿ
ತಜ್ಞರ ಪ್ರಕಾರ, ಟ್ರಾನ್ಸ್ ಫ್ಯಾಟ್ ಅಧಿಕವಾಗಿರುವ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಫ್ಯಾಟಿ ಲಿವರ್ ಸಮಸ್ಯೆ ಹಾಗೂ ಕೆಲವು ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕರಿದ ಎಣ್ಣೆಯನ್ನು ಪದೇ ಪದೇ ಬಳಸುವುದನ್ನು ನಿಯಂತ್ರಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಎಣ್ಣೆಯ ಮರುಬಳಕೆ, ಗುಣಮಟ್ಟ ನಿಯಣತ್ರಣಕ್ಕೆ ಹೊಸ ಮಾರ್ಗಸೂಚಿ
ಈ ಹಿನ್ನೆಲೆಯಲ್ಲಿ ಹೋಟೆಲ್, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳಿಗೆ ಬಳಸಿದ ಎಣ್ಣೆಯ ಮರುಬಳಕೆ ಹಾಗೂ ಗುಣಮಟ್ಟ ನಿಯಂತ್ರಣ ಕುರಿತು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಹಾಗೂ ಹೆಚ್ಚಿನ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ: ಜಂಕ್ ಫುಡ್ ವಿರುದ್ಧ ಸಮರ ಸಾರಿದ ಆಹಾರ ಸುರಕ್ಷಿತ ಇಲಾಖೆ
ಸಾರ್ವಜನಿಕರು ರಸ್ತೆ ಬದಿ ಹಾಗೂ ವಿವಿಧ ಆಹಾರ ಮಳಿಗೆಗಳಲ್ಲಿ ಕರಿದ ಆಹಾರ ಸೇವಿಸುವಾಗ ಸ್ವಚ್ಛತೆ ಮತ್ತು ಎಣ್ಣೆಯ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Thu, 23 July 26




