‘2023ರಲ್ಲಿ ಎರಡು ಬಾರಿ ಪ್ರಜ್ವಲ್ ಕಾರು ಚಾಲಕನನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದೇಕೆ?’: ಹೊಸ ಬಾಂಬ್ ಸಿಡಿಸಿದ ಹೆಚ್‌ಡಿಕೆ
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾರು ಚಾಲಕನನ್ನು ಕರೆಸಿ ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಪ್ರಮುಖ ದಾಖಲೆ ಹಾಗೂ ಕರೆಗಳ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಸ್ಟಿಂಗ್ ಪ್ರಕರಣ ಸಂಬಂಧ ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ಎಂದವರು ಪ್ರಶ್ನಿಸಿದ್ದಾರೆ.

ಬೆಂಗಳೂರು, ನವೆಂಬರ್ 02: ಪ್ರಜ್ವಲ್ ಪೆನ್‌ಡ್ರೈವ್ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ಆದರೆ ಪೆನ್‌ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ಆ ಕುರಿತ ಕರೆಯ ಮಾಹಿತಿಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 5,6 2023ರಲ್ಲಿ ಕಾರ್ತಿಕ್ ಡಿಕೆಶಿ ಮನೆಗೆ ಹೋಗಿದ್ದು, ಆ ಕ್ಯಾಸೆಟ್ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆ ಆಗಿದ್ಯಾ ಎಂದು ಸಿಎಂರನ್ನು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದು ನನ್ನ ಕುಟುಂಬವನ್ನು ಕಾಂಗ್ರೆಸ್ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದೂ ಅವರು ದೂರಿದ್ದಾರೆ.
‘ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ’
ಸ್ಟಿಂಗ್ ಪ್ರಕರಣ ಸಂಬಂಧ ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಹೀಗಾಗಿ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ. ನಾನು ಕೋರ್ಟ್ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಪ್ರಕರಣ: ಖಾಸಗಿ ಸುದ್ದಿ ವಾಹಿನಿ ಮೇಲೆ ಸಿಸಿಬಿ ದಾಳಿ, ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
‘ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳಲು ಯತ್ನ’
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕಟ್ಟುಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಷಡ್ಯಂತ್ರ ಅಂತಾ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಅವರಿಗೂ ಕ್ಲೀನ್‌ಚಿಟ್ ನೀಡಿದ್ದಾರೆ. ಸ್ಟಿಂಗ್ ಮಾಡಿಸಿದವರನ್ನು ರಕ್ಷಿಸುವುದೇ ನಿಮ್ಮ ಉದ್ದೇಶವಾಗಿದೆ. ಪ್ರಕರಣದಲ್ಲಿ ನಮ್ಮ ಪಕ್ಷದವರ ಪಾತ್ರ ಇದೆ ಅಂತಾ ಸಚಿವರಾದ ಯತೀಂದ್ರ ಖುದ್ದು ಆರೋಪ ಮಾಡಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ದೆಹಲಿಯ ನನ್ನ ಮನೆಯಲ್ಲಿ ಮೊಬೈಲ್ ಹಸ್ತಾಂತರ ಅಂತಾ ಆರೋಪ ಮಾಡಿದ್ದೀರಿ. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದೊಂದು ಹಳ್ಳ ಹಿಡಿಸುವಂತಹ ಕೇಸ್ ಆಗಿದೆ ಎಂದು ಕಿಡಿ ಕಾರಿರುವ ಅವರು, ಏಕೆ ಸ್ಟೇ ತೆಗೆದುಕೊಳ್ಳುತ್ತೀರಿ ಅಂತಾ ಸಿದ್ದರಾಮಯ್ಯಗೆ ಮೊದಲೇ ಹೇಳಿದ್ದೆ. ನಿಮ್ಮ ಹಳೇ ಧ್ವನಿಯನ್ನು ಎತ್ತಿ ಅಂತಾಲೂ ಹೇಳಿದ್ದೆ ಎಂದವರು ತಿಳಿಸಿದ್ದಾರೆ.
‘ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ’
ಸ್ಟಿಂಗ್ ಆಪರೇಷನ್ ಮೂಲ ಪುರುಷ ಏಕೆ ಕೋರ್ಟ್ ಮೊರೆ ಹೋಗಿದ್ದಾನೆ ಎಂದು ಪ್ರಶ್ನಿಸಿರುವ ಹೆಚ್‌ಡಿಕೆ, ನಾನು ಏನಾದ್ರೂ ಮಾಡಬೇಕಾದರೆ ಕದ್ದುಮುಚ್ಚಿ ಮಾಡುವುದಿಲ್ಲ. ರಾಜ್ಯದ ಪೊಲೀಸ್ ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪವೂ ಇದೆ. ನಮಗೂ ಸಮಯ ಬರುತ್ತೆ, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿ. ನಮ್ಮ ಕುಟುಂಬ ಪ್ರಧಾನಿ ಹುದ್ದೆಯನ್ನು ನೋಡಿದ್ದರೂ ಪೊಲೀಸರನ್ನು ಹೆದರಿಸಿಲ್ಲ. ನಾನು ಎರಡು ಸಲ ಸಿಎಂ ಆದರೂ ದ್ವೇಷದ ರಾಜಕಾರಣ ಮಾಡಿಲ್ಲ. ನಮ್ಮ ಮನೆ ಮೇಲೆ ದಾಳಿ ನಡೆಸಲು ಬನ್ನಿ ತಯಾರಿದ್ದೇನೆ ಎಂದವರು ಹೇಳಿದ್ದಾರೆ. ನಾನು ಏನು ಮಾಡಿದ್ದೇನೆಂದು ನನ್ನನ್ನು ವಿಚಾರಣೆಗೆ ಕರೆಯುತ್ತಾರೆ? ಕೇಂದ್ರ ಸಚಿವರನ್ನು ಬಂಧಿಸುತ್ತಾರೆಂದು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಅದು ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ ಎಂದವರು ಹೇಳಿದ್ದಾರೆ.
‘ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ’
ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ ಎಂದೂ ಗುಡಿಗಿರುವ ಅವರು, ನಿನ್ನೆ ರಾಜ್ಯೋತ್ಸವ ಆಚರಣೆ ಬಳಿಕ ಎಲ್ಲಿ ಸಭೆ ನಡೆಸಿದ್ದೀರೆಂದು ಗೊತ್ತಿದೆ. ಸ್ಟಿಂಗ್ ಆಪರೇಷನ್ ಕೇಸ್‌ನ್ನು ನನ್ನ ಮನೆಗೂ ಲಿಂಕ್ ಮಾಡಿದ್ದಾರೆ. ತನ್ನ ಮೇಲೆ ಇಡಿ ದಾಳಿಗೆ ಒತ್ತಡ ಅಂತಾ ನನ್ನ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಆದರೆ ಕೆಪಿಎಸ್‌ಸಿಯ ನಿಮ್ಮ ಕರ್ಮಕಾಂಡಗಳನ್ನು ಮರೆಮಾಚುತ್ತಿರುವುದು ಯಾರು? ನನ್ನ ಸಹೋದರನ ಪುತ್ರನಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದೀರಿ. ಆದರೂ ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಿಲ್ಲ. ನಾನು ಎಲ್ಲೂ ಪ್ರಕರಣಗಳನ್ನು ಏಕಾಂಗಿಯಾಗಿಯೇ ಎದುರಿಸುತ್ತೇನೆ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ, ಬೇಕಾದ್ರೆ ದಾಖಲೆ ತೆಗೆದು ನೋಡಿ. ನಿಮ್ಮ ರೀತಿ ನಾನು ರಕ್ಷಣೆ ಪಡೆದುಕೊಂಡಿಲ್ಲ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.
‘ಇಂತಹ ಟ್ರೇಲರ್‌ಗಳನ್ನು ನಾನು ಎಷ್ಟು ನೋಡಿಲ್ಲ?’
ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿಹೈ ಎಂದು ಪ್ರಿಯಾಂಕ್ ಹೇಳಿದ್ದಾರೆ. ಇಂತಹ ಟ್ರೇಲರ್‌ಗಳನ್ನು ನಾನು ಎಷ್ಟು ನೋಡಿಲ್ಲ? 2011ರ ಘಟನೆಯನ್ನು 2023ಕ್ಕೆ ಚಿತ್ರೀಕರಣ ಮಾಡಿದ್ದಾರೆ. ಇಷ್ಟು ವರ್ಷಗಳವರೆಗೂ ಏಕೆ ಸುಮ್ಮನಿದ್ದರು? 2015ರಲ್ಲಿ ಕೃಪಾ ಆಳ್ವಾರನ್ನು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಅಂದಿನ ಸಿಎಂ ಸಿದ್ದರಾಮಯ್ಯರವರೇಮಾಡಿದ್ರು. ಕೃಪಾ ಆಳ್ವಾರನ್ನು ನಾನಾಗಲಿ, ಜೆಡಿಎಸ್ ಆಗಲಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ಕೃಪಾ ಆಳ್ವಾ, ಖಾಸಗಿ ಚಾನಲ್ ಮುಖ್ಯಸ್ಥ, ಮತ್ತೊಬ್ಬರಿಂದ ಸ್ಟಿಂಗ್ ನಡೆದಿದೆ. ಕೇರಳದ ಹೆಣ್ಣು ಮಗಳನ್ನು ಕೂರಿಸಿ ವಿಡಿಯೋ ಮಾಡಿದ್ದಾರೆ. 2023ರಲ್ಲಿ ಏಕೆ ಇದನ್ನು ವಿಡಿಯೋ ಮಾಡಿದ್ದಾರೆಂದು ತನಿಖೆ ಮಾಡಿದ್ದಾರಾ? ಕೃಪಾ ಆಳ್ವಾಗೂ, ಕೇರಳದ ಆ ಮುಸ್ಲಿಂ ಹೆಣ್ಣು ಮಗಳಿಗೂ ಏನು ಸಂಬಂಧ ಎಂದೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:02 pm, Mon, 2 November 26




